ಹೋರಾಟದ ನಡುವೆಯೂ ಉಕ್ರೇನ್-ರಷ್ಯಾ ನಡುವೆ ಶಾಂತಿ ಮಾತುಕತೆ ನಡೆಯಿತು
ಸ್ಟೀಫನ್ ಜೆ. ಬೋಸ್
ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಹೋರಾಟದ ನಡುವೆ ಎರಡನೇ ಸುತ್ತಿನ ನೇರ ಮಾತುಕತೆ ಪ್ರಾರಂಭವಾಗಿರುವುದಕ್ಕೆ ಟರ್ಕಿಯ ವಿದೇಶಾಂಗ ಸಚಿವ ಹಕನ್ ಫಿಡಾನ್ ರವರು ಸಂತೋಷ ವ್ಯಕ್ತಪಡಿಸಿದ್ದಾರೆ. ಇಸ್ತಾನ್‌ಬುಲ್‌ನಲ್ಲಿ ನಡೆಯಲಿರುವ ಮಾತುಕತೆಯಲ್ಲಿ ಎರಡೂ ಕಡೆಯ ಕದನ ವಿರಾಮದ ಅವಶ್ಯಕತೆಗಳನ್ನು ಚರ್ಚಿಸಲಾಗುವುದು ಎಂದು ಫಿಡಾನ್ ರವರು ಗಮನಿಸಿದರು.
ಶಾಂತಿಯ ಪ್ರಕ್ರಿಯೆಗೆ ಅಮೇರಿಕ ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು ಮತ್ತು ಒಂದು ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಮತ್ತು ಗಾಯಗೊಳಿಸಿರುವ ಯುದ್ಧವನ್ನು ಕೊನೆಗೊಳಿಸಲು ಮಾತುಕತೆಗಳು ನಿರ್ದಿಷ್ಟ ಫಲಿತಾಂಶಗಳನ್ನು ತರುತ್ತವೆ ಎಂದು ಅವರು ಖಚಿತವಾಗಿ ಒತ್ತಿ ಹೇಳಿದರು.
ಅವರು ಇತ್ತೀಚೆಗೆ ನ್ಯಾಟೋ ಮಿಲಿಟರಿ ಮೈತ್ರಿಕೂಟದ ಮುಖ್ಯಸ್ಥ ಮಾರ್ಕ್ ರುಟ್ಟೆರವರಿಗೆ, ಯುದ್ಧ ಕೊನೆಗೊಳ್ಳುತ್ತದೆ ಎಂಬ ಭರವಸೆಯನ್ನು ಟರ್ಕಿ ಬಿಟ್ಟುಕೊಟ್ಟಿಲ್ಲ ಎಂದು ಹೇಳಿದರು. ಖಂಡಿತವಾಗಿಯೂ ಉಕ್ರೇನ್‌ನಲ್ಲಿನ ಯುದ್ಧವನ್ನು ನ್ಯಾಯಯುತ ಮತ್ತು ಬಾಳಿಕೆ ಬರುವ ಅಂತ್ಯಕ್ಕೆ ತರುವ ನಮ್ಮ ಪ್ರಯತ್ನಗಳು ನಮ್ಮ ಚರ್ಚೆಗಳ ಪ್ರಮುಖ ಭಾಗವಾಗಿರುತ್ತವೆ ಎಂದು ಅವರು ಒತ್ತಿ ಹೇಳಿದರು.
ಈ ಗುರಿಯನ್ನು ಸಾಧಿಸಲು ರಾಜತಾಂತ್ರಿಕ ಮಾರ್ಗದ ಅಗತ್ಯವನ್ನು ಟರ್ಕಿ ಯಾವಾಗಲೂ ಒತ್ತಿ ಹೇಳುತ್ತಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಈಗ, ಮೂರು ವರ್ಷಗಳ ಅಪಾರ ಯಾತನೆಯ ನಂತರ, ಕೊನೆಗೂ ಅವಕಾಶದ ಒಂದು ಸನ್ನಿವೇಶ ಸಿಕ್ಕಿದೆ. ಇಸ್ತಾನ್‌ಬುಲ್‌ನಲ್ಲಿ ನಡೆಯುವ ಮಾತುಕತೆ ಹೊಸ ಅಧ್ಯಾಯವನ್ನು ತೆರೆಯಬಹುದು ಎಂದು ಆಶಿಸುತ್ತೇವೆ, ಎಂದು ಸಚಿವರು ಹೇಳಿದರು.
ಆದಾಗ್ಯೂ, ಎರಡು ವಾರಗಳಲ್ಲಿ ಎರಡನೇ ಸಭೆಯಾದ ಸೋಮವಾರದ ಶಾಂತಿ ಮಾತುಕತೆ, ಉಕ್ರೇನ್ ಮೇಲೆ ರಷ್ಯಾದ ದಾಳಿಯ ಹೆಚ್ಚಿನ ವರದಿಗಳ ಕೆಲವೇ ಗಂಟೆಗಳ ನಂತರ ಪ್ರಾರಂಭವಾಯಿತು.
ಸೋಮವಾರ ಮುಂಜಾನೆ ಈಶಾನ್ಯ ಉಕ್ರೇನಿಯದ ನಗರವಾದ ಖಾರ್ಕಿವ್‌ನಲ್ಲಿರುವ ವಸತಿ ನೆರೆಹೊರೆಯ ಮೇಲೆ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ದಾಳಿ ಮಾಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಕ್ಷಿಪಣಿ ಅಪಾರ್ಟ್ಮೆಂಟ್ ಕಟ್ಟಡದ ಬಳಿ ಬಿದ್ದರೆ, ಎರಡನೆಯದು ಶಾಲೆಯ ಸಮೀಪವಿರುವ ರಸ್ತೆಗೆ ಅಪ್ಪಳಿಸಿತು ಎಂದು ನಗರದ ಮೇಯರ್ ಇಹೋರ್ ತೆರೆಖೋವ್ ರವರು ಹೇಳಿದ್ದಾರೆ.
ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳಿಲ್ಲ, ಆದರೆ ಉಕ್ರೇನ್ ರಷ್ಯಾದ ಐದು ವಿಭಿನ್ನ ಪ್ರದೇಶಗಳಲ್ಲಿನ ವಾಯು ನೆಲೆಗಳ ಮೇಲೆ ಅಭೂತಪೂರ್ವ ಡ್ರೋನ್ ದಾಳಿ ನಡೆಸಿದ ನಂತರ ಈ ದಾಳಿಗಳು ನಡೆದಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ರಷ್ಯಾದ ಸೇನಾ ನೆಲೆಗಳ ಮೇಲಿನ ಬೃಹತ್ ಕಾರ್ಯಾಚರಣೆಯಲ್ಲಿ ಉಕ್ರೇನ್ 117 ಡ್ರೋನ್‌ಗಳನ್ನು ಬಳಸಿದೆ ಎಂದು ಉಕ್ರೇನಿಯದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿರವರು ಹೇಳಿದ್ದಾರೆ.
ಕಾರ್ಯಾಚರಣೆಯ ಯೋಜನೆ ಒಂದೂವರೆ ವರ್ಷದ ಹಿಂದೆಯೇ ಪ್ರಾರಂಭವಾಯಿತು ಎಂದು ಅವರು ಹೇಳಿದರು.
ರಷ್ಯಾದ ವಾಯುನೆಲೆಗಳ ಮೇಲಿನ ದಾಳಿಯಲ್ಲಿ ಕನಿಷ್ಠ 13 ವಿಮಾನಗಳು ನಾಶವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಆಪರೇಷನ್ ಸ್ಪೈಡರ್ಸ್ ವೆಬ್" ಎಂಬ ಸಂಕೇತನಾಮ ಹೊಂದಿರುವ ಈ ದಾಳಿಯನ್ನು ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಯೋಜಿಸಲಾಗಿತ್ತು ಎಂದು ಉಕ್ರೇನ್‌ನ ದೇಶೀಯ ಗುಪ್ತಚರ ಸೇವೆಯಾದ ಎಸ್‌ಬಿಯು ತಿಳಿಸಿದೆ.
ಈ ದಾಳಿಗಳಿಂದ ಸುಮಾರು $7 ಬಿಲಿಯನ್ ನಷ್ಟ ಸಂಭವಿಸಿದೆ ಎಂದು ಅದು ಹೇಳಿಕೊಂಡಿದೆ. ಫೆಬ್ರವರಿ 2022ರಲ್ಲಿ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ ರಷ್ಯಾಕ್ಕೆ ಇದು ಪ್ರಮುಖ ಹಿನ್ನಡೆ ಎಂದು ಪರಿಗಣಿಸಲಾಗಿದೆ.
ಮೂರು ವರ್ಷಗಳಿಗೂ ಹೆಚ್ಚು ಕಾಲ ನಡೆದ ಯುದ್ಧ ಯಾವಾಗ ಮತ್ತು ಯಾವ ಸಮಯದಲ್ಲಿ ಕೊನೆಗೊಳ್ಳುತ್ತದೆ ಎಂದು ಜಗತ್ತು ನೋಡುತ್ತಿದ್ದಂತೆ, ನಡೆಯುತ್ತಿರುವ ಘರ್ಷಣೆಗಳ ಹೊರತಾಗಿಯೂ, ಉಕ್ರೇನ್ ಮತ್ತು ರಷ್ಯಾ ನಡುವೆ ಶಾಂತಿ ಮಾತುಕತೆಗಳು ಪ್ರಾರಂಭವಾಗಿವೆ.