ಇಸ್ರಯೇಲ್ ನ ಮಾಜಿ ಪ್ರಧಾನಿ ಓಲ್ಮರ್ಟ್: 'ಕೇವಲ ಕದನ ವಿರಾಮವಲ್ಲ, ನಮಗೆ ಯುದ್ಧದ ಅಂತ್ಯಬೇಕು'
ರಾಬರ್ಟೊ ಸೆಟೆರಾ
ಎಲ್’ಒಸ್ಸೆರ್ವಟೋರ್ ರೊಮಾನೋ ಮತ್ತು ವ್ಯಾಟಿಕನ್ ನ್ಯೂಸ್ ಜೊತೆಗಿನ ಸಂವಾದದಲ್ಲಿ, ಮಾಜಿ ಇಸ್ರಯೇಲ್ ನ ಪ್ರಧಾನಿ ಎಹುದ್ ಓಲ್ಮರ್ಟ್ ರವರು ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡುತ್ತಾರೆ, ಪ್ರಸ್ತುತ ಸರ್ಕಾರದ ವಿಧಾನದ ಬಗ್ಗೆ ಬಲವಾದ ಟೀಕೆಗಳನ್ನು ವ್ಯಕ್ತಪಡಿಸುತ್ತಾರೆ.
"ಸ್ವತಂತ್ರ, ಮುಕ್ತ ಮತ್ತು ಶಾಂತಿಯುತ ಎರಡು ರಾಜ್ಯಗಳ ಮಾರ್ಗವನ್ನು ಹೊರತುಪಡಿಸಿ ಬೇರೆ ಯವುದೇ ಉತ್ತಮ ಮಾರ್ಗವಿಲ್ಲ ಮತ್ತು ಗಾಜಾದಲ್ಲಿ, ಯುದ್ಧವನ್ನು ತಕ್ಷಣವೇ ಕೊನೆಗೊಳಿಸುವುದು ಮತ್ತು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಅವರ ತಾಯ್ನಾಡಿಗೆ ಕಳುಹಿಸುವುದು ಮಾತ್ರ ಕಾರ್ಯಸಾಧ್ಯವಾದ ಪರಿಹಾರವಾಗಿದೆ," ಎಂದು ಅವರು ದೃಢಪಡಿಸುತ್ತಾರೆ.
ಪ್ರಶ್ನೆ: ಶ್ರೀ ಓಲ್ಮರ್ಟ್ ರವರೇ, ಗಾಜಾ ಯುದ್ಧದಲ್ಲಿ ನಡೆದ ಅಪರಾಧಗಳ ಕುರಿತು ನಿಮ್ಮ ಇತ್ತೀಚಿನ ಹೇಳಿಕೆಗಳು ಜಾಗತಿಕ ಗಮನ ಸೆಳೆದಿವೆ. ನೀವು ಈ ತೀರ್ಮಾನಗಳಿಗೆ ಹೇಗೆ ಬಂದಿರಿ?
ಗಾಜಾದಲ್ಲಿ ಪ್ರಸ್ತುತವಾಗಿ ಇಸ್ರಯೇಲ್ ಸರ್ಕಾರವು ಅಪರಾಧಗಳನ್ನು ಎಸಗುತ್ತಿದೆ ಎಂದು ನಾನು ಆರೋಪಿಸಿದ್ದೇನೆ. ಆದರೆ ಗಾಜಾದಲ್ಲಿ ನಡೆದ ಯುದ್ಧ ಮತ್ತು ಈ ಅಪರಾಧಗಳು "ಯುದ್ಧ ಅಪರಾಧಗಳು" ಎಂಬ ಕಾನೂನು ವರ್ಗಕ್ಕೆ ಸೇರುತ್ತವೆ ಎಂದು ದೃಢೀಕರಿಸಲು ನನ್ನಲ್ಲಿ ಎಲ್ಲಾ ವಿಶ್ಲೇಷಣಾತ್ಮಕ ಅಂಶಗಳಿಲ್ಲ. ಆದಾಗ್ಯೂ, ಈ ಹಂತದಲ್ಲಿ, ಮೊದಲೇ ಹೇಳಿದಂತೆ ನೆತನ್ಯಾಹುರವರ ಸರ್ಕಾರದಿಂದ ಒತ್ತೆಯಾಳುಗಳನ್ನು ರಕ್ಷಿಸುವ ನೈಜ ಉದ್ದೇಶವಿಲ್ಲ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ.
ಈ ಯುದ್ಧದ ಏಕೈಕ ಸಂಭವನೀಯ ಫಲಿತಾಂಶವೆಂದರೆ ಇಸ್ರಯೇಲ್ ಸೈನಿಕರ ಸಾವು, ಹಮಾಸ್ ಹಿಡಿದಿಟ್ಟಿರುವ ಒತ್ತೆಯಾಳುಗಳ ಸೆರೆವಾಸ ಮತ್ತು ಅನೇಕ ಮುಗ್ಧ ಪ್ಯಾಲಸೀನಿಯ ಜನರ ಹತ್ಯೆ. ಈ ಸಂದರ್ಭಗಳಲ್ಲಿ, ಯುದ್ಧವು ವಸ್ತುನಿಷ್ಠವಾಗಿ ಅಪರಾಧವಾಗಿದೆ. ಈ ವಿಷಯದ ಬಗ್ಗೆ ನನ್ನ ಹೇಳಿಕೆಗಳ ಅರ್ಥವಿದು. ಪಶ್ಚಿಮ ದಂಡೆಯಲ್ಲಿ ಇದೇ ರೀತಿಯ ಸಮಸ್ಯೆ ಸಂಭವಿಸುತ್ತಿದೆ ಎಂದು ನಾನು ಸೇರಿಸುತ್ತೇನೆ, ಅಲ್ಲಿ ವಸಾಹತುಗಾರರು ಪ್ಯಾಲಸೀನಿಯದ ಜನರ ವಿರುದ್ಧ ಮೇಲೆ ನಡೆಸುತ್ತಿರುವ ಹಿಂಸಾಚಾರವನ್ನು ತಡೆಯಲು ಪೊಲೀಸರು ಯಾವುದೇ ಯೋಜನೆಯನ್ನು ಕೈಗೊಂಡಿಲ್ಲ.
ಪ್ರಶ್ನೆ: ನಿಮ್ಮ ಅಭಿಪ್ರಾಯದಲ್ಲಿ, ಯುದ್ಧವಿರಾಮ ಒಪ್ಪಂದಕ್ಕೆ ಬಂದು ಅಂತಿಮವಾಗಿ ಯುದ್ಧವನ್ನು ಕೊನೆಗೊಳಿಸಲು ಯಾವ ಮಾರ್ಗಗಳನ್ನು ತೆಗೆದುಕೊಳ್ಳುವುದು ಸೂಕ್ತ?
ಈಜಿಪ್ಟ್, ಕತಾರ್ ಮತ್ತು ಅಮೇರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳಲ್ಲಿ, ಎಲ್ಲಾ ಒತ್ತೆಯಾಳುಗಳ ಬಿಡುಗಡೆಗೆ ಬದಲಗೆ ಯುದ್ಧದ ಅಂತ್ಯವನ್ನು ಒಪ್ಪಿಕೊಳ್ಳುವುದು ಮಾತ್ರ ಮುಂದಿನ ದಾರಿ ಎಂದು ನಾನು ನಂಬುತ್ತೇನೆ. ಯುದ್ಧಕ್ಕೆ ನಿರ್ಣಾಯಕ ಅಂತ್ಯವನ್ನು ಅನುಸರಿಸದಿದ್ದಲ್ಲಿ ಯಾವುದೇ ತಾತ್ಕಾಲಿಕ ಕದನ ವಿರಾಮಕ್ಕೆ ಹಮಾಸ್ ಒಪ್ಪುವುದಿಲ್ಲ. ಇದಕ್ಕೆ ಪ್ರತಿಯಾಗಿ, ಅವರು ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತಾರೆ. ಇದರ ಅರ್ಥ ಹಮಾಸ್ ಅಪರಾಧಿಗಳ ಬೇಡಿಕೆಗಳಿಗೆ ಮಣಿಯುವುದು ಎಂದರ್ಥವಲ್ಲ, ಬದಲಿಗೆ ಒತ್ತೆಯಾಳುಗಳು ಈಗ ಉಳಿದಿರುವ ಏಕೈಕ ಆಸ್ತಿಯಾಗಿರುವುದರಿಂದ, ಯುದ್ಧದ ನಿರ್ಣಾಯಕ ಅಂತ್ಯಕ್ಕಿಂತ ಬೇರೆ ಯಾವುದೇ ಮಾರ್ಗವಿಲ್ಲ ಎಂಬುದು ನನಗೆ ಸ್ಪಷ್ಟವಾಗಿ ತೋರುತ್ತದೆ.