ಮ್ಯಾನ್ಮಾರ್‌ನ ಮಾನವೀಯ ತುರ್ತು ಪರಿಸ್ಥಿತಿಗೆ ಮತ್ತಷ್ಟು ಕಂಟಕವಾಗುತ್ತಿರುವ ಭೀಕರ ಪ್ರವಾಹ
ದೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್
ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಮಾನವೀಯ ತುರ್ತು ಪರಿಸ್ಥಿತಿಯು ದೇಶದ ಉತ್ತರದಲ್ಲಿ ವಿನಾಶಕಾರಿ ಪ್ರವಾಹಗಳಿಂದ ಇನ್ನಷ್ಟು ಜಟಿಲವಾಗುತ್ತಿದೆ ಎಂದು ಪಾಂಟಿಫಿಕಲ್ ಮಿಷನ್ ಸೊಸೈಟೀಸ್ ನಿರ್ವಹಿಸುವ ವ್ಯಾಟಿಕನ್‌ನ ಫೈಡ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.
ಮ್ಯಾನ್ಮಾರ್‌ನ ಸಾಗೈಂಗ್ ಪ್ರದೇಶ ಮತ್ತು ಕಚಿನ್ ರಾಜ್ಯದ ಮೇಲೆ ಸುಮಾರು ಒಂದು ವಾರದಿಂದ ಸುರಿದ ಭಾರೀ ಮಳೆಯ ಪರಿಣಾಮವಾಗಿ ಪ್ರವಾಹ ಉಂಟಾಗಿದ್ದು, ಇದು ದೇಶದ ನಾಗರಿಕ ಜನಸಂಖ್ಯೆಗೆ ಮತ್ತಷ್ಟು ಸಂಕಷ್ಟವನ್ನುಂಟು ಮಾಡಿದೆ, ಇದು ಈಗಾಗಲೇ ನಡೆಯುತ್ತಿರುವ ನಾಗರಿಕ ಸಂಘರ್ಷದಿಂದ ತೀವ್ರವಾಗಿ ಬಳಲುತ್ತಿದೆ.
ಮಾರ್ಚ್ ತಿಂಗಳ 28ರಂದು ಸಂಭವಿಸಿದ ಭೂಕಂಪದ ನಂತರ ಸಾಗೈಂಗ್ ಪ್ರದೇಶವು ಈಗಾಗಲೇ ತೀವ್ರ ಒತ್ತಡಕ್ಕೆ ಒಳಗಾಗಿತ್ತು, ಈ ಭೂಕಂಪವು 3,700ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು, ಸಾವಿರಾರು ಜನರನ್ನು ಸ್ಥಳಾಂತರಿಸಿತು ಮತ್ತು ಮನೆಗಳು ಹಾಗೂ ಮೂಲಸೌಕರ್ಯಗಳಿಗೆ ಅಪಾರ ಹಾನಿಯನ್ನುಂಟುಮಾಡಿತು.
ಇದರ ನಡುವೆ, ಭೂಕಂಪದ ನಂತರ ಪುನರ್ನಿರ್ಮಾಣ ಮತ್ತು ಪರಿಹಾರ ಕಾರ್ಯಗಳನ್ನು ಬೆಂಬಲಿಸಲು ಮ್ಯಾನ್ಮಾರ್‌ನ ಆಡಳಿತಾರೂಢ ಮಿಲಿಟರಿ ಜುಂಟಾ ಜೂನ್‌ವರೆಗೆ ತಾತ್ಕಾಲಿಕ ಕದನ ವಿರಾಮವನ್ನು ವಿಸ್ತರಿಸಿದೆ ಎಂದು ರಾಯಿಟರ್ಸ್ ಮಂಗಳವಾರ ವರದಿ ಮಾಡಿದೆ.
ಇತ್ತೀಚಿನ ಕದನ ವಿರಾಮ ಘೋಷಣೆ
ಆ ನೈಸರ್ಗಿಕ ವಿಕೋಪದ ಕೆಲವು ದಿನಗಳ ನಂತರ, ಏಪ್ರಿಲ್ ತಿಂಗಳ ಆರಂಭದಲ್ಲಿ, ಜುಂಟಾ ವಿರೋಧಿ ಸಶಸ್ತ್ರ ಗುಂಪುಗಳ, ಇದೇ ರೀತಿಯ ಕ್ರಮಗಳ ನಂತರ, ಪರಿಹಾರ ಪ್ರಯತ್ನಗಳನ್ನು ಬೆಂಬಲಿಸಲು ಜುಂಟಾ ಕದನ ವಿರಾಮವನ್ನು ಘೋಷಿಸಿತು.
ಇದಲ್ಲದೆ, ವಿರೋಧ ಗುಂಪುಗಳು ತಮ್ಮ ಕದನ ವಿರಾಮವನ್ನು ಜೂನ್ ತಿಂಗಳ ಅಂತ್ಯದವರೆಗೆ ವಿಸ್ತರಿಸಿವೆ. ಕದನ ವಿರಾಮ ಘೋಷಣೆಯ ಹೊರತಾಗಿಯೂ, ದೇಶದ ಕೆಲವು ಭಾಗಗಳಲ್ಲಿ ಮಿಲಿಟರಿ ವೈಮಾನಿಕ ದಾಳಿ ಮತ್ತು ಫಿರಂಗಿ ದಾಳಿಗಳು ಮುಂದುವರೆದಿದೆ ಎಂದು ಏಜೆನ್ಸಿ ವರದಿ ಮಾಡಿದೆ.
ವಿಶ್ವಸಂಸ್ಥೆಯ ವರದಿ
ಫೈಡ್ಸ್ ಉಲ್ಲೇಖಿಸಿ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಬಿಡುಗಡೆ ಮಾಡಿದ ಹೊಸ ವರದಿಯು, ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಹಿಂಸಾಚಾರ ಮತ್ತು ಕುಸಿದ ಆರ್ಥಿಕತೆಯಿಂದಾಗಿ ಹದಗೆಡುತ್ತಿರುವ ಮಾನವೀಯ ಬಿಕ್ಕಟ್ಟನ್ನು ದೃಢಪಡಿಸುತ್ತದೆ.
ಜುಲೈ ತಿಂಗಳ ಆರಂಭದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವ ಈ ದಾಖಲೆಯು, ಪರಿಸ್ಥಿತಿಯನ್ನು "ಹೆಚ್ಚುತ್ತಿರುವಷ್ಟು ವಿನಾಶಕಾರಿಯಾಗಿದ್ದು, ಜೀವನದ ಎಲ್ಲಾ ಅಂಶಗಳ ಮೇಲೆ ಪರಿಣಾಮ ಬೀರುತ್ತಿರುವ ನಿರಂತರ ದೌರ್ಜನ್ಯಗಳಿಂದ ಗುರುತಿಸಲ್ಪಟ್ಟಿದೆ" ಎಂದು ತಿಳಿಸಿದೆ.
ಇದಲ್ಲದೆ, ಆರ್ಥಿಕ ದುಸ್ಥಿತಿಯು ರಾಷ್ಟ್ರದ ತುರ್ತು ಪರಿಸ್ಥಿತಿಯನ್ನು ಹೇಗೆ ಹೆಚ್ಚಿಸುತ್ತಿದೆ ಎಂಬುದನ್ನು ಇದು ವಿವರಿಸುತ್ತದೆ.
ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ
ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು "ಬಿಕ್ಕಟ್ಟಿಗೆ ಬಹುಮುಖಿ ಪ್ರತಿಕ್ರಿಯೆ" ಗಳ ಕಾರ್ಯಕ್ರಮಗಳಿಗಾಗಿ ಮನವಿ ಮಾಡುತ್ತಿದೆ.
ವಿಶೇಷ ರೀತಿಯಲ್ಲಿ, ಬಳಲುತ್ತಿರುವ ದೇಶಕ್ಕೆ "ತುರ್ತು ಮಾನವೀಯ ಬೆಂಬಲ, ಸ್ಥಳಾಂತರಗೊಂಡ ಜನಸಂಖ್ಯೆಗೆ ಗಡಿಯಾಚೆಗಿನ ನೆರವು ಮತ್ತು ಹೆಚ್ಚಿದ ರಾಜಕೀಯ ಬದ್ಧತೆಯನ್ನು" ಒದಗಿಸಲು ಸಹಾಯ ಮಾಡುವಂತೆ ವಿಶ್ವಸಂಸ್ಥೆಯ ಸಂಸ್ಥೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡುತ್ತಿದೆ.