ಉತ್ತರ-ಮಧ್ಯ ನೈಜೀರಿಯಾದ ಗ್ರಾಮೀಣ ಪಟ್ಟಣದಲ್ಲಿ ಮಾರಕ ಪ್ರವಾಹ
ಲಿಂಡಾ ಬೋರ್ಡೋನಿ
ನೈಜೀರಿಯಾದ ರಾಜಧಾನಿ ಅಬುಜಾದಿಂದ ಪಶ್ಚಿಮಕ್ಕೆ ಸುಮಾರು 380 ಕಿಲೋಮೀಟರ್ ದೂರದಲ್ಲಿರುವ ಮತ್ತು ಉತ್ತರ ನೈಜೀರಿಯಾದ ರೈತರ ಪ್ರಮುಖ ವ್ಯಾಪಾರ ಮತ್ತು ಸಾರಿಗೆ ಕೇಂದ್ರವಾಗಿದ್ದ ಮೊಕ್ವಾ ಗ್ರಾಮೀಣ ಪಟ್ಟಣವು ಕನಿಷ್ಠ 151 ಜನರನ್ನು ಬಲಿತೆಗೆದುಕೊಂಡ ವಿನಾಶಕಾರಿ ಪ್ರವಾಹದ ಹೊರೆಯನ್ನು ಹೊತ್ತುಕೊಂಡಿತು.
ಗುರುವಾರ ಮುಂಜಾನೆ ಸುರಿದ ಧಾರಾಕಾರ ಮಳೆಯಿಂದಾಗಿ ಹಠಾತ್ ಮತ್ತು ತೀವ್ರವಾದ ಪ್ರವಾಹ ಉಂಟಾಗಿ, ಸುಮಾರು ಐದು ಗಂಟೆಗಳಲ್ಲಿ ಛಾವಣಿಗಳು ಕಾಣದೆ, ನಿವಾಸಿಗಳು ಸೊಂಟದಷ್ಟು ನೀರಿನಲ್ಲಿ ಮುಳುಗಿಹೋದ ನಂತರ, ಇನ್ನೂ ಅನೇಕ ಸಂತ್ರಸ್ತರುಗಳಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಕರ್ತರು ಬದುಕುಳಿದಿರುವ ಸಾಧ್ಯತೆಗಾಗಿ, ಅವರನ್ನು ರಕ್ಷಿಸಲು ಹುಡುಕಾಟ ನಡೆಸುತ್ತಿದ್ದಾರೆ.
ಮೂರು ಸಮುದಾಯಗಳಲ್ಲಿ ಕನಿಷ್ಠ 500 ಮನೆಗಳು ಪ್ರವಾಹಕ್ಕೆ ಸಿಲುಕಿದ್ದು, ಎರಡು ರಸ್ತೆಗಳು ಕೊಚ್ಚಿಹೋಗಿವೆ ಮತ್ತು ಎರಡು ಸೇತುವೆಗಳು ಕುಸಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧ್ಯಕ್ಷ ಬೋಲಾ ಟಿನುಬುರವರು ಸಂತಾಪ ಸೂಚಿಸಿದರು ಮತ್ತು ಸಂತ್ರಸ್ತರುಗಳನ್ನು ಬೆಂಬಲಿಸಲು ಮತ್ತು ಚೇತರಿಕೆಯನ್ನು "ವೇಗಗೊಳಿಸಲು" ತುರ್ತು ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸಲು ನಿರ್ದೇಶಿಸಿದ್ದೇನೆ ಎಂದು ಹೇಳಿದರು. ದೂರದ ಪ್ರದೇಶಗಳಲ್ಲಿ ಹೆಚ್ಚಿನ ಶವಗಳು ಪತ್ತೆಯಾಗಬಹುದೆಂಬ ಆತಂಕದ ನಡುವೆಯೂ ತುರ್ತು ಕಾರ್ಯಾಚರಣೆಗಳು ಮುಂದುವರೆದಿದ್ದು, ಭದ್ರತಾ ಸಂಸ್ಥೆಗಳಿಗೆ ಸಹಾಯ ಮಾಡಲು ಕೇಳಲಾಗಿದೆ ಎಂದು ಅವರು ಹೇಳಿದರು.
ಪರಿಹಾರ ಸಾಮಗ್ರಿಗಳು ಮತ್ತು ತಾತ್ಕಾಲಿಕ ಆಶ್ರಯ ಸಹಾಯವನ್ನು ವಿಳಂಬವಿಲ್ಲದೆ ನಿಯೋಜಿಸಲಾಗುತ್ತಿದೆ ಎಂದು ಅಧ್ಯಕ್ಷರು ಹೇಳಿದರು, ಯಾವುದೇ ನೈಜೀರಿಯದ ಪೀಡಿತರನ್ನು ಕೈಬಿಡಲಾಗುವುದಿಲ್ಲ ಅಥವಾ ಅವರನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಭರವಸೆ ನೀಡಿದರು.
ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದು, ಈ ಪ್ರದೇಶದಾದ್ಯಂತ ಮತ್ತಷ್ಟು ಪ್ರವಾಹ ಉಂಟಾಗುವ ಭೀತಿಯನ್ನು ಹೆಚ್ಚಿಸಿದೆ.
ನೈಜೀರಿಯಾದ ಮಳೆಗಾಲದಲ್ಲಿ ಪ್ರವಾಹ ಸಾಮಾನ್ಯ, ಆದರೆ ಹವಾಮಾನ ಬದಲಾವಣೆ ಮತ್ತು ಅಲ್ಪಾವಧಿಯ ಮಳೆಗಾಲದಲ್ಲಿ ತೀವ್ರ ಪ್ರವಾಹಕ್ಕೆ ಕಾರಣವಾಗುವ ಅತಿಯಾದ ಮಳೆಯಿಂದ ಹದಗೆಟ್ಟ ದೀರ್ಘಕಾಲದ ಶುಷ್ಕ ಹವಾಮಾನವು ಉತ್ತರದ ಸಮುದಾಯಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.
ನೈಜೀರಿಯಾ ವಿಶ್ವವಿದ್ಯಾಲಯದ ಪ್ರವಾಹ ಅಪಾಯ ವಿಶ್ಲೇಷಕರೊಬ್ಬರು "ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳ ನಡುವೆ ಪ್ರವಾಹವು ವಾರ್ಷಿಕ ಘಟನೆಯಾಗಿದೆ ಎಂದು ಗಮನಿಸಿದರು, ಪ್ರವಾಹ ಅಪಾಯಗಳನ್ನು ಬಹಳ ಹಿಂದೆಯೇ ಗುರುತಿಸಲಾಗಿದ್ದರೂ, ಈ ಬದಲಾವಣೆಯನ್ನು ಕಾರ್ಯಗತಗೊಳಿಸಲು ಹೆಚ್ಚಿನ ರಾಜಕೀಯ ಶಕ್ತಿ ಇಲ್ಲ ಎಂದು ಅವರು ಎಚ್ಚರಿಸಿದರು.
ಈ ಪ್ರವಾಹವು ಹವಾಮಾನ ಬದಲಾವಣೆಯ ಪರಿಣಾಮವಾಗಿದೆ, ಇದು ಮಳೆಯ ಆವರ್ತನ ಮತ್ತು ತೀವ್ರತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು. ನೀವು ಒಂದು ವರ್ಷದಲ್ಲಿ ನಿರೀಕ್ಷಿಸುವ ಮಳೆಯು ಬಹುಶಃ ಒಂದು ಅಥವಾ ಎರಡು ತಿಂಗಳಲ್ಲಿ ಬರಬಹುದು ಮತ್ತು ಜನರು ಆ ರೀತಿಯ ಮಳೆಗೆ ಸಿದ್ಧರಿರುವುದಿಲ್ಲ.
ಕಳೆದ ವರ್ಷ, ನೈಜೀರಿಯಾದಾದ್ಯಂತ ಇದೇ ರೀತಿಯ ವಿಪತ್ತುಗಳಿಂದ 1,200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ಎರಡು ಮಿಲಿಯನ್ ಜನರು ಸ್ಥಳಾಂತರಗೊಂಡರು.