ವಿಶ್ವಾಸದ ಮೂಲಕ ಏಕತೆಯನ್ನು ಉತ್ತೇಜಿಸಲು ಇಥಿಯೋಪಿಯಾ ವಿಶ್ವ ಅಂತರಧರ್ಮ ಸಾಮರಸ್ಯ ವಾರವನ್ನು ಆಯೋಜಿಸುತ್ತದೆ
ಬೆಜಾವಿಟ್ ಅಸೆಫಾ
"ಸುವರ್ಣ ನಿಯಮ: ಇತರರು ನಿಮ್ಮನ್ನು ಹೇಗೆ ನಡೆಸಿಕೊಳ್ಳಬೇಕೆಂದು ನೀವು ಬಯಸುತ್ತೀರೋ ಹಾಗೆಯೇ ನೀವು ಇತರರನ್ನು ನಡೆಸಿಕೊಳ್ಳಿ" ಎಂಬ ಆಶಯ ಮತ್ತು "ಉಬುಂಟು" ನ ಆಫ್ರಿಕಾದ ತತ್ವಶಾಸ್ತ್ರವು ಇಥಿಯೋಪಿಯಾದ ಅಡಿಸ್ ಅಬಾಬಾದಲ್ಲಿ ನಡೆದ ಮೂರನೇ ವಿಶ್ವ ಅಂತರ್ಧರ್ಮೀಯ ಸಾಮರಸ್ಯ ವಾರಕ್ಕಾಗಿ ವೈವಿಧ್ಯಮಯ ಧಾರ್ಮಿಕ ಸಮುದಾಯಗಳನ್ನು ಒಟ್ಟುಗೂಡಿಸಿತು.
ಧಾರ್ಮಿಕ ಗುಂಪುಗಳ ನಡುವೆ ಏಕತೆ ಮತ್ತು ಸಹಯೋಗವನ್ನು ಬೆಳೆಸುವ ಗುರಿಯನ್ನು ಹೊಂದಿರುವ ಈ ಕಾರ್ಯಕ್ರಮವು, ಆಫ್ರಿಕಾದ ಒಕ್ಕೂಟವು ಇತ್ತೀಚೆಗೆ G20 ಸದಸ್ಯರಾಗಿ ಸೇರ್ಪಡೆಗೊಂಡಿದ್ದರೊಂದಿಗೆ ಹೊಂದಿಕೆಯಾಯಿತು.
ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಮುನ್ನಡೆಸುವುದು, ಆಫ್ರಿಕನ್ ಒಕ್ಕೂಟದ 2063 ರ ಕಾರ್ಯಸೂಚಿ ಮತ್ತು ದಕ್ಷಿಣ ಆಫ್ರಿಕಾದ 2025 ರ G20 ಶೃಂಗಸಭೆ ಎಂಬ ವಿಷಯದ ಅಡಿಯಲ್ಲಿ ಹಿಲ್ಟನ್ ಇಂಟರ್ನ್ಯಾಷನಲ್ ಹೋಟೆಲ್‌ನಲ್ಲಿ ಉನ್ನತ ಮಟ್ಟದ ಅಂತರ್ಧರ್ಮೀಯ ವೇದಿಕೆಯನ್ನು ಕರೆಯಲಾಯಿತು.
ಇಥಿಯೋಪಿಯಾದ ಅಂತರ-ಧಾರ್ಮಿಕ ಮಂಡಳಿ, ಆಫ್ರಿಕಾದ ಒಕ್ಕೂಟ ಮತ್ತು ಯುನೈಟೆಡ್ ರಿಲಿಜಿಯನ್ಸ್ ಇನಿಶಿಯೇಟಿವ್‌ನ (ಏಕ ಧರ್ಮ ಉಪಕ್ರಮದ) ಸಹಯೋಗದ ಪ್ರಯತ್ನದ ಮೂಲಕ ಆಯೋಜಿಸಲಾದ ಈ ಸಮ್ಮೇಳನವು ಖಂಡದಾದ್ಯಂತ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ನಂಬಿಕೆಯ ಪಾತ್ರವನ್ನು ಒತ್ತಿಹೇಳಿತು.
ಗೌರವಾನ್ವಿತ ಅತಿಥಿಗಳಲ್ಲಿ ಇಥಿಯೋಪಿಯಾದ ಫೆಡರಲ್ ಸರ್ಕಾರದ ಅಧ್ಯಕ್ಷರಾದ ಟೇ ಅಟ್ಸ್ಕೆ ಸೆಲಾಸಿಯವರು ಸೇರಿದ್ದಾರೆ; ಎಚ್.ಇ. ಮಹಮೂದ್ ಅಲಿ ಯೂಸೌಫ್, ಆಫ್ರಿಕಾ ಒಕ್ಕೂಟ ಆಯೋಗದ ಅಧ್ಯಕ್ಷ; ಮತ್ತು ಧರ್ಮಾಧ್ಯಕ್ಷರಾದ ಟೆಸ್ಫಸೆಲ್ಲಸ್ಸಿ ಮೆಧಿನ್ ರವರು, ಅಡಿಗ್ರಾಟ್‌ನ ಧರ್ಮಾಧ್ಯಕ್ಷರು, ವಿವಿಧ ಪಂಗಡಗಳ ಹಲವಾರು ವಿಶ್ವಾಸದ ನಾಯಕರೊಂದಿಗೆ ಈ ಸಭೆಯಲ್ಲಿ ಭಾಗಿಯಾಗಿದ್ದರು.
ಜೀವಂತ ಶಾಂತಿಗಾಗಿ ಒಂದು ವೇದಿಕೆ
ಇಥಿಯೋಪಿಯಾದ ಅಧ್ಯಕ್ಷರು, ಈ ಸಮ್ಮೇಳನವು ಆಫ್ರಿಕಾದಲ್ಲಿ ನ್ಯಾಯ ಮತ್ತು ಶಾಂತಿಗೆ ಮಹತ್ವದ ಕೊಡುಗೆ ನೀಡುತ್ತದೆ ಎಂದು ಹೇಳಿದರು, ಸುವರ್ಣ ನಿಯಮವನ್ನು ಮಾರ್ಗದರ್ಶಿ ತತ್ವವಾಗಿ ಉಲ್ಲೇಖಿಸಿದರು. ಇಥಿಯೋಪಿಯಾದಲ್ಲಿನ ರಾಷ್ಟ್ರೀಯ ಸಂವಾದ ಪ್ರಕ್ರಿಯೆಗೆ ಸಮ್ಮೇಳನದ ನಿರ್ಣಯವು ಅಮೂಲ್ಯವಾದ ಒಳನೋಟವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಆಫ್ರಿಕಾದಲ್ಲಿನ G20 ಕಾರ್ಯಸೂಚಿಗೆ ಧಾರ್ಮಿಕ ಸಮುದಾಯಗಳ ಕೊಡುಗೆಗಳಿಂದ ಹಿಡಿದು ಹವಾಮಾನ ಸವಾಲುಗಳು, ಮಹಿಳಾ ನಾಯಕತ್ವ, ಮಾನವ ಕಳ್ಳಸಾಗಣೆ ಮತ್ತು ಶಾಂತಿ ನಿರ್ಮಾಣಕ್ಕಾಗಿ ಅಂತರಧರ್ಮೀಯ ಸಹಕಾರದವರೆಗೆ ಸಮ್ಮೇಳನದಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳಾಗಿದ್ದವು.
ಚರ್ಚೆಗಳು ಧಾರ್ಮಿಕ ಸ್ವಾತಂತ್ರ್ಯ, ಮಾನವ ಘನತೆ ಮತ್ತು ದ್ವೇಷ ಭಾಷಣ, ಅನ್ಯದ್ವೇಷ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟದ ಮೇಲೂ ಕೇಂದ್ರೀಕರಿಸಿದವು.
"ಧಾರ್ಮಿಕ ನಾಯಕರು" ವ್ಯಕ್ತಿಗಳು ಮತ್ತು ಭಕ್ತವಿಶ್ವಾಸಿಗಳೊಂದಿಗೆ ನಿಕಟ ಹಾಗೂ ನಿರಂತರ ಸಂಪರ್ಕದಿಂದಾಗಿ ನಡೆಯುತ್ತಿರುವ ಶಾಂತಿ ನಿರ್ಮಾಣ ಪ್ರಕ್ರಿಯೆಗೆ ಸಕ್ರಿಯವಾಗಿ ಕೊಡುಗೆ ನೀಡುವ ವಿಶಿಷ್ಟ ಸ್ಥಾನವನ್ನು ಹೊಂದಿದ್ದಾರೆ ಎಂದು ಧರ್ಮಾಧ್ಯಕ್ಷರಾದ ಮೆಧಿನ್ ರವರು ಒತ್ತಿ ಹೇಳಿದರು.
ಕಥೋಲಿಕರ ಉಪಸ್ಥಿತಿ ಮತ್ತು ಸಾಕ್ಷಿ
ವೇದಿಕೆಯಾದ್ಯಂತ ಕಥೋಲಿಕರ ಉಪಸ್ಥಿತಿಯು ಬಲವಾಗಿ ಕಂಡುಬಂದಿತು, ಹಲವಾರು ಯಾಜಕರುಗಳು, ಧಾರ್ಮಿಕ ಭಗಿನಿಯರು ಮತ್ತು ಕಥೋಲಿಕ ನಾಯಕರು ಪ್ರಮುಖ ಚರ್ಚೆಗಳಿಗೆ ಕೊಡುಗೆ ನೀಡಿದರು.
ಅವರು ಶಾಂತಿ ನಿರ್ಮಾಣ, ಹವಾಮಾನ ನ್ಯಾಯ ಮತ್ತು ಧಾರ್ಮಿಕ ಸ್ವಾತಂತ್ರ್ಯದಿಂದ ಹಿಡಿದು ಮಾನವ ಕಳ್ಳಸಾಗಣೆಯನ್ನು ಎದುರಿಸುವುದು ಮತ್ತು ಮಹಿಳಾ ನಾಯಕತ್ವವನ್ನು ಉತ್ತೇಜಿಸುವುದು, ಪ್ರಮುಖ ಕಥೋಲಿಕ ಸಾಮಾಜಿಕ ಬೋಧನೆಗಳನ್ನು ಪ್ರತಿಬಿಂಬಿಸುವ ವಿಷಯಗಳ ಕುರಿತು ಮಾತನಾಡಿದರು.
ನಡೆಯುತ್ತಿರುವ ಸಮ್ಮೇಳನವು ಕಥೊಲಿಕ ಮೈಲಿಗಲ್ಲುಗಳಾದ ಜೂಬಿಲಿ ವರ್ಷ ಮತ್ತು "ಭರವಸೆಯ ಯಾತ್ರಿಕರು" ಮತ್ತು ವ್ಯಾಟಿಕನ್ IIರ 60ನೇ ವಾರ್ಷಿಕೋತ್ಸವದೊಂದಿಗೆ ಪ್ರತಿಧ್ವನಿಸಿತು, ಇದು ಆಧುನಿಕ ಜಗತ್ತಿನಲ್ಲಿ ಧರ್ಮಸಭೆಯ ಧ್ಯೇಯವನ್ನು ಮತ್ತು ಎಲ್ಲಾ ವಿಶ್ವಾಸದ ಜನರಲ್ಲಿ ಏಕತೆಯ ಮಹತ್ವವನ್ನು ಪುನರುಚ್ಚರಿಸಿತು.