MAP

 Palestinians receive food cooked by a charity kitchen, in Beit Lahia Palestinians receive food cooked by a charity kitchen, in Beit Lahia 

ಐಪಿಸಿ ಎಚ್ಚರಿಕೆ - ಗಾಜಾದಲ್ಲಿ ಬರಗಾಲದ ಅಪಾಯ

ಗಾಜಾದಲ್ಲಿ ಅಗತ್ಯ ಸಾಮಗ್ರಿಗಳು ಬಹುತೇಕ ಖಾಲಿಯಾಗಿದ್ದು, ಇಡೀ ಜನಸಂಖ್ಯೆಯು ತೀವ್ರ ಆಹಾರ ಅಭದ್ರತೆಯನ್ನು ಎದುರಿಸುತ್ತಿದೆ ಎಂದು ಹೊಸ ವರದಿಯೊಂದು ಎಚ್ಚರಿಸಿದೆ.

ನಾಥನ್ ಮಾರ್ಲಿ

ಪ್ಯಾಲಸ್ತೀನಿಯದ ನಿರಾಶ್ರಿತರನ್ನು ಬೆಂಬಲಿಸುವ ವಿಶ್ವಸಂಸ್ಥೆಯ ಸಂಸ್ಥೆಯಾದ UNRWAದ ಕಮಿಷನರ್-ಜನರಲ್ ಫಿಲಿಪ್ ಲಝರಿನಿರವರು ಬಿಬಿಸಿಗೆ, ಗಾಜಾದ ಜನರ ಮೇಲೆ ಪರಿಣಾಮ ಬೀರುವ ದುಃಖ ಮತ್ತು ದುರಂತವನ್ನು ವಿವರಿಸಲು ಪದಗಳೇ ಸಾಲುತ್ತಿಲ್ಲ ಎಂದು ಹೇಳಿದರು.

ಈ ವಾರ, ಸಮಗ್ರ ಆಹಾರ ಭದ್ರತಾ ಹಂತದ ವರ್ಗೀಕರಣದ (ಐಪಿಸಿ) ಅಂದಾಜಿನ ಪ್ರಕಾರ ಐದು ಜನರಲ್ಲಿ ಒಬ್ಬರು, ಸುಮಾರು 500,000 ಜನರು ಹಸಿವಿನಿಂದ ಬಳಲುವ ಅಪಾಯದಲ್ಲಿದ್ದಾರೆ.

ಆಹಾರ ಪದಾರ್ಥಗಳ ಬೆಲೆಗಳು ಗಗನಕ್ಕೇರಿವೆ, 25 ಕಿಲೋಗ್ರಾಂ ಗೋಧಿ ಹಿಟ್ಟಿನ ಚೀಲ ಈಗ $235 ರಿಂದ $520 ರವರೆಗೆ ಬೆಲೆಗೆ ಮಾರಾಟವಾಗುತ್ತಿದೆ, ಇದು ಫೆಬ್ರವರಿಯಿಂದ ಶೇಕಡಾ 3,000 ರಷ್ಟು ಹೆಚ್ಚಾಗಿದೆ. ನಿರಂತರವಾದ ಮಿಲಿಟರಿ ಕಾರ್ಯಾಚರಣೆಗಳು ಮತ್ತು ಮಾನವೀಯ ನೆರವಿನ ದಿಗ್ಬಂಧನವು ಬದುಕುಳಿಯುವ ಅಗತ್ಯ ವಸ್ತುಗಳ ಲಭ್ಯತೆಯನ್ನು ತೀವ್ರವಾಗಿ ಮಿತಿಗೊಳಿಸಬಹುದು ಎಂದು ಐಪಿಸಿ ಎಚ್ಚರಿಸಿದೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ರವರು ಈ ಸಂಶೋಧನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಮಕ್ಕಳ ಮೇಲೆ ಪರಿಣಾಮ ಬೀರುವ ತೀವ್ರ ಹಸಿವನ್ನು ಎತ್ತಿ ತೋರಿಸಿದ್ದಾರೆ. ಮಾರ್ಚ್ 2 ರಂದು ನೆರವು ವಿತರಣೆಗಳು ಸ್ಥಗಿತಗೊಂಡಾಗಿನಿಂದ ಅಪೌಷ್ಟಿಕತೆ ಹದಗೆಡುತ್ತಿದೆ ಎಂದು ವಿಶ್ವ ಆಹಾರ ಕಾರ್ಯಕ್ರಮ (WFP) ಮತ್ತು UNICEF ವರದಿ ಮಾಡಿವೆ.

ಗಡಿಯಲ್ಲಿ ಆಹಾರ ಸಿಕ್ಕಿಕೊಂಡಿರುವಾಗ ಕುಟುಂಬಗಳು ಹಸಿವಿನಿಂದ ಬಳಲುತ್ತಿವೆ ಎಂದು ಡಬ್ಲ್ಯುಎಫ್‌ಪಿ ಮುಖ್ಯಸ್ಥೆ ಸಿಂಡಿ ಮೆಕ್ಕೇನ್ ರವರು ಹೇಳಿದ್ದಾರೆ, ಕ್ಷಾಮವನ್ನು ಅಧಿಕೃತವಾಗಿ ಘೋಷಿಸುವವರೆಗೆ ಕ್ರಮ ವಿಳಂಬ ಮಾಡಿದರೆ, ಅದು ಅನೇಕರಿಗೆ ಆರೋಗ್ಯದ ವಿಷಯದಲ್ಲಿ ತುಂಬಾ ತೊಂದರೆಯಾಗಬಹುದು ಎಂದು ಎಚ್ಚರಿಸಿದ್ದಾರೆ. ಗಾಜಾದಲ್ಲಿನ ನೆರವು ಸಂಸ್ಥೆಗಳು ಬಿಸಿ ಊಟ ವಿತರಣೆಯಲ್ಲಿ ತೀವ್ರ ಕುಸಿತವನ್ನು ವರದಿ ಮಾಡಿವೆ, ಇಂದು ಕೇವಲ 260,000 ಊಟಗಳನ್ನು ಮಾತ್ರ ನೀಡಲಾಗಿದೆ. ಇದು ಕೇವಲ ಐದು ದಿನಗಳ ಹಿಂದೆ 840,000 ದಿಂದ 70 ಪ್ರತಿಶತದಷ್ಟು ಕಡಿಮೆಯಾಗಿದೆ.

ವಿಶ್ವಸಂಸ್ಥೆಯು ಬೆಂಬಲಿಸುವ 180 ಅಡುಗೆಮನೆಗಳಲ್ಲಿ 60 ಕ್ಕೂ ಹೆಚ್ಚು ಅಡುಗೆಮನೆಗಳು ತಮ್ಮ. ಕೊನೆಯ ಉಳಿದ ಸರಬರಾಜುಗಳನ್ನು ಬಳಸಿದ ನಂತರ ಮುಚ್ಚಲ್ಪಟ್ಟಿವೆ ಎಂದು ಹೇಳಿದೆ. ವಯಸ್ಕರು ತಿನ್ನಲು ಏನಾದರೂ ಆಹಾರ ಸಿಕ್ಕಾಗ ತಮ್ಮ ಮಕ್ಕಳಿಗೆ ತಮಗಿಂತ ಹೆಚ್ಚಾಗಿ ಊಟ ಕೊಡುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಮಾನವತಾವಾದಿಗಳು ವರದಿ ಮಾಡಿದ್ದಾರೆ.

ಇದಲ್ಲದೆ, ಮಿಲಿಟರಿಯಿಂದ ನಿಯಂತ್ರಿಸಲ್ಪಡುವ ಕೇಂದ್ರಗಳ ಮೂಲಕ ನೆರವು ಸಾಮಗ್ರಿಗಳನ್ನು ತಲುಪಿಸುವ ಇಸ್ರಯೇಲ್ ಪ್ರಸ್ತಾಪದ ತಟಸ್ಥತೆ, ನಿಷ್ಪಕ್ಷಪಾತ ಮತ್ತು ಸ್ವಾತಂತ್ರ್ಯದ ಮೂಲ ಮಾನವೀಯ ತತ್ವಗಳ ಉಲ್ಲಂಘನೆಯಾಗುತ್ತಿದೆ ಎಂದು ವಿಶ್ವಸಂಸ್ಥೆ ಹೇಳುತ್ತಿದೆ.
 

13 ಮೇ 2025, 13:06