"ಆಪರೇಷನ್ ಸಿಂಧೂರ್"
ವ್ಯಾಟಿಕನ್ ಸುದ್ಧಿ
ಪರಮಾಣು ಶಸ್ತ್ರಸಜ್ಜಿತ ನೆರೆಯ ದೇಶಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಬುಧವಾರ ನಾಟಕೀಯವಾಗಿ ಉಲ್ಬಣಗೊಂಡಿತು, ಇದು ಎರಡು ದಶಕಗಳಲ್ಲಿ ಅತ್ಯಂತ ಗಂಭೀರ ಮಿಲಿಟರಿ ಘರ್ಷಣೆಯನ್ನು ಗುರುತಿಸಿದೆ.
ಭಾರತೀಯ ಅಧಿಕಾರಿಗಳ ಪ್ರಕಾರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಉಗ್ರಗಾಮಿ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಒಂಭತ್ತು ಭಯೋತ್ಪಾದಕರ ಮೂಲಸೌಕರ್ಯ ತಾಣಗಳನ್ನು ಗುರಿಯಾಗಿಸಲಾಗಿತ್ತು, ಈ ಕ್ರಮವನ್ನು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿಯವರು "ಪೂರ್ವಭಾವಿ ಮತ್ತು ಮುನ್ನೆಚ್ಚರಿಕೆ" ಎಂದು ಸಮರ್ಥಿಸಿಕೊಂಡರು.
ಭಾರತವು ಈ ಶಿಬಿರಗಳನ್ನು ನೇಮಕಾತಿ, ಬೋಧನೆ ಮತ್ತು ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಬಳಸಲಾಗುತ್ತಿತ್ತು ಎಂದು ಹೇಳಿಕೊಂಡಿದೆ. ಪಾಕಿಸ್ತಾನವು ಈ ಹೇಳಿಕೆಯನ್ನು ತಿರಸ್ಕರಿಸಿದ್ದು, ಭಾರತವು "ದೊಡ್ಡ ಯುದ್ಧದ ಕೃತ್ಯ" ಎಸಗಿದೆ ಎಂದು ಆರೋಪಿಸಿದೆ, ಮಸೀದಿಗಳು ಸೇರಿದಂತೆ ಆರು ನಾಗರಿಕ ಸ್ಥಳಗಳನ್ನು ಧ್ವಂಸ ಮಾಡಲಾಗಿದೆ ಎಂದು ಪ್ರತಿಪಾದಿಸಿದೆ.
ಪ್ರತೀಕಾರವಾಗಿ ಐದು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನದ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಈ ಹೇಳಿಕೆಯನ್ನು ನವದೆಹಲಿ ದೃಢಪಡಿಸಿಲ್ಲ.
ಗಡಿಯುದ್ದಕ್ಕೂ ಭಾರೀ ಶೆಲ್ ದಾಳಿ ಮತ್ತು ಗುಂಡಿನ ಚಕಮಕಿ ನಡೆದಿದ್ದು, ಎರಡೂ ಕಡೆಗಳಲ್ಲಿ ನಾಗರಿಕರ ಸಾವುನೋವುಗಳು ವರದಿಯಾಗಿವೆ, ಭಾರತೀಯ ಕಾಶ್ಮೀರದಲ್ಲಿ 10 ಮಂದಿ ಸಾವನ್ನಪ್ಪಿ 48 ಮಂದಿ ಗಾಯಗೊಂಡಿದ್ದಾರೆ ಮತ್ತು ಪಾಕಿಸ್ತಾನದ ನಿಯಂತ್ರಿತ ಪ್ರದೇಶಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.
"ಆಪರೇಷನ್ ಸಿಂಧೂರ್" ಎಂದು ಹೆಸರಿಸಲಾದ ಭಾರತೀಯ ಕಾರ್ಯಾಚರಣೆಯು, ಪಾಕಿಸ್ತಾನದ ಆಡಳಿತದಲ್ಲಿರುವ ಕಾಶ್ಮೀರವನ್ನು ಮೀರಿ ಪಾಕಿಸ್ತಾನದ ಮುಖ್ಯ ಭೂಭಾಗದ ಜನನಿಬಿಡ ಪ್ರದೇಶಗಳಿಗೆ ದಾಳಿ ಮಾಡುವ ಮೂಲಕ ಗಮನಾರ್ಹವಾಗಿದೆ, ಇದು 1971ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಕಂಡುಬರದ ಅಪರೂಪದ ಮತ್ತು ಆಕ್ರಮಣಕಾರಿ ಉಲ್ಬಣವಾಗಿದೆ.
ಜಾಗತಿಕ ಸಮುದಾಯವು ಕಳವಳದಿಂದ ಪ್ರತಿಕ್ರಿಯಿಸಿತು. ಅಮೇರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ರವರು ಈ ಹಿಂಸಾಚಾರವನ್ನು "ನಾಚಿಕೆಗೇಡಿನ ಸಂಗತಿ" ಎಂದು ಬಣ್ಣಿಸಿದರು ಮತ್ತು ತ್ವರಿತವಾಗಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಕರೆ ನೀಡಿದರು. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊರವರು, ಎರಡೂ (ಭಾರತ-ಪಾಕಿಸ್ತಾನ) ಕಡೆಯವರು ಮುಕ್ತ ಸಂವಹನ ಮಾರ್ಗಗಳನ್ನು ಕಾಪಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
1947ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದಾಗಿನಿಂದ ಹಲವಾರು ಯುದ್ಧಗಳು ಮತ್ತು ಲೆಕ್ಕವಿಲ್ಲದಷ್ಟು ಚಕಮಕಿಗಳಿಗೆ ಕಾರಣವಾದ ವಿವಾದಿತ ಪ್ರದೇಶವಾದ ಕಾಶ್ಮೀರದ ಬಗ್ಗೆ ಉದ್ವಿಗ್ನತೆ ಹೆಚ್ಚುತ್ತಿರುವಂತೆ, ಎರಡೂ ರಾಷ್ಟ್ರಗಳು ತಮ್ಮ ಐತಿಹಾಸಿಕ ಕುಂದುಕೊರತೆಗಳನ್ನು ಮತ್ತು ದೃಢವಾದ ನಿಲುವುಗಳನ್ನು ವ್ಯಕ್ತಪಡಿಸಿವೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ರವರು ಮತ್ತು ಚೈನಾ ಹಾಗೂ ರಷ್ಯಾದ ನಾಯಕರೂ ಸಹ ಸಂಯಮದಿಂದ ಇರಬೇಕೆಂದು ಮನವಿ ಮಾಡಿದರು.