ಯುದ್ಧಗಳು, ಹವಾಮಾನ ಬಿಕ್ಕಟ್ಟು ಮತ್ತು ಹಣಕಾಸಿನ ಅಂತರದ ನಡುವೆ ಜಾಗತಿಕ ಹಸಿವು ಹೆಚ್ಚುತ್ತಿದೆ
ಸ್ಟೆಫಾನೊ ಲೆಸ್ಜ್‌ಜಿನ್ಸ್ಕಿ ಮತ್ತು ಲಿಂಡಾ ಬೋರ್ಡೋನಿ
ವಿಶ್ವಾದ್ಯಂತ ತೀವ್ರ ಹಸಿವಿನಿಂದ ಬಳಲುತ್ತಿರುವ ಜನರ ಸಂಖ್ಯೆ 295 ಮಿಲಿಯನ್‌ಗಿಂತಲೂ ಹೆಚ್ಚಾಗಿದೆ ಎಂದು ಗ್ಲೋಬಲ್ ನೆಟ್‌ವರ್ಕ್ ಎಗೇನ್ಸ್ಟ್ ಫುಡ್ ಕ್ರೈಸಿಸ್ (ಜಾಗತಿಕ ಆಹಾರ ಬಿಕ್ಕಟ್ಟುಗಳ ವಿರುದ್ಧ ಜಾಲ) ಹೊಸದಾಗಿ ಬಿಡುಗಡೆ ಮಾಡಿದ 2025ರ ವರದಿಯಲ್ಲಿ ತಿಳಿಸಲಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 14 ಮಿಲಿಯನ್ ಜನರ ಆತಂಕಕಾರಿ ಹೆಚ್ಚಳವನ್ನು ಸೂಚಿಸುತ್ತದೆ ಮತ್ತು ಸಂಘರ್ಷ, ಹವಾಮಾನ ಸಂಬಂಧಿತ ವಿಪತ್ತುಗಳು ಹಾಗೂ ಆರ್ಥಿಕ ಆಘಾತಗಳಿಂದ ಹೆಚ್ಚಾಗಿ ನಡೆಸಲ್ಪಡುವ ಆಳವಾದ ಬಿಕ್ಕಟ್ಟನ್ನು ಪ್ರತಿಬಿಂಬಿಸುತ್ತದೆ.
ಈ ಸಂಶೋಧನೆಗಳು ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳು 65 ದೇಶಗಳಲ್ಲಿ ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿವೆ. ಅವುಗಳಲ್ಲಿ 53 ದೇಶಗಳು ಪ್ರಸ್ತುತ ತೀವ್ರ ಮಟ್ಟದ ಆಹಾರ ಅಭದ್ರತೆಯನ್ನು ಎದುರಿಸುತ್ತಿವೆ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ತುರ್ತು ವಿಭಾಗದ ಆರೆಲಿಯನ್ ಮೆಲಿನ್ ರವರು ವ್ಯಾಟಿಕನ್ ರೇಡಿಯೊ ಜೊತೆ ಮಾತನಾಡಿದಾಗ, ಬಿಕ್ಕಟ್ಟಿನಿಂದ ಹೆಚ್ಚುತ್ತಿರುವ ಸಂಕೀರ್ಣತೆಯನ್ನು ಒತ್ತಿ ಹೇಳಿದರು.
“2016 ರಿಂದ 35 ದೇಶಗಳು ನಿರಂತರವಾಗಿ ಆಹಾರ ಬಿಕ್ಕಟ್ಟಿನ ಸ್ಥಿತಿಯಲ್ಲಿವೆ" ಎಂದು ಮೆಲಿನ್ ರವರು ಹೇಳಿದರು. ಇವು ದೀರ್ಘಾವಧಿಯ ತುರ್ತು ಪರಿಸ್ಥಿತಿಗಳಾಗಿದ್ದು, ಅವುಗಳಿಗೆ ಅಲ್ಪಾವಧಿಯ ನೆರವು ಮಾತ್ರವಲ್ಲದೆ ದೀರ್ಘಾವಧಿಯ, ಬಹು-ವಲಯ ಪ್ರತಿಕ್ರಿಯೆಗಳೂ ಬೇಕಾಗುತ್ತವೆ, ತುರ್ತು ಕೃಷಿ ನೆರವು ಸೇರಿದಂತೆ, ವರ್ಷಗಳಿಂದ ಹಣದ ಕೊರತೆಯಿದೆ.
ಸಮಗ್ರ ನೆರವು ಪರಿಣಾಮಕಾರಿಯಾಗಿ ವಿತರಿಸಲ್ಪಟ್ಟ ಸಂದರ್ಭಗಳಲ್ಲಿ, ಕಾಲಾನಂತರದಲ್ಲಿ ಆಹಾರ ಭದ್ರತೆಯಲ್ಲಿ ಸ್ಪಷ್ಟವಾದ ಸುಧಾರಣೆಗಳು ಕಂಡುಬಂದಿವೆ ಎಂದು ಅವರು ಗಮನಿಸಿದರು. ನಾವು ತಿಳಿಸಲು ಬಯಸುವ ಸಂದೇಶ ಅದೇ, ಪರಿಹಾರಗಳಿವೆ, ಆದರೆ, ಅದಕ್ಕೆ ಸೂಕ್ತವಾದ ಮಾರ್ಗವನ್ನು ಆರಿಸಿಕೊಳ್ಳುವುದು ಮತ್ತು ಅಗತ್ಯ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು ಮುಖ್ಯ.
ಸಂಘರ್ಷಗಳು: ಹಸಿವಿನ ಪ್ರಮುಖ ಚಾಲಕ
2016 ರಿಂದ, ಆಹಾರ ಅಭದ್ರತೆಯ ಮೂರು ಪ್ರಮುಖ ಚಾಲಕಗಳು ಬದಲಾಗದೆ ಉಳಿದಿವೆ: ಸಂಘರ್ಷ ಮತ್ತು ಅಭದ್ರತೆ, ತೀವ್ರ ಹವಾಮಾನ ಘಟನೆಗಳು ಮತ್ತು ಆರ್ಥಿಕ ಆಘಾತಗಳು. ಇವುಗಳಲ್ಲಿ, ಸಂಘರ್ಷವು ಅತ್ಯಂತ ವಿನಾಶಕಾರಿಯಾಗಿದೆ ಎಂದು ಮೆಲಿನ್ ರವರು ಹೇಳಿದರು.
ಇಂದು ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿರುವ ಹೆಚ್ಚಿನ ಸಂಖ್ಯೆಯ ಜನರ ಮೇಲೆ ಸಂಘರ್ಷ ಮತ್ತು ಅಭದ್ರತೆ ಪರಿಣಾಮ ಬೀರುತ್ತದೆ ಎಂದು ಆಹಾರ ಮತ್ತು ಕೃಷಿ ಸಂಘಟನೆಯ ತಜ್ಞರು ವಿವರಿಸಿದರು. ಹೋರಾಟವು ಕ್ಷಾಮದಂತಹ ಪರಿಸ್ಥಿತಿಗಳಿಗೆ ಕಾರಣವಾಗಿರುವ ಸುಡಾನ್ ಮತ್ತು ಹಿಂಸೆ ಹಾಗೂ ಅಸ್ಥಿರತೆಯು ನೆಲದ ಮೇಲೆ ದುರಂತದ ಪರಿಸ್ಥಿತಿಗಳನ್ನು ಸೃಷ್ಟಿಸಿರುವ ಹೈಟಿಯನ್ನು ಅವರು ಗಮನಸೆಳೆದರು.
ಆರ್ಥಿಕ ಅಂಶಗಳಿಂದ ಪರಿಸ್ಥಿತಿ ಇನ್ನಷ್ಟು ಜಟಿಲವಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಉಕ್ರೇನ್‌ನಲ್ಲಿನ ಯುದ್ಧದ ನಿರಂತರ ಪರಿಣಾಮಗಳಂತಹ ಜಾಗತಿಕ ಅಡೆತಡೆಗಳು, ವಿಶೇಷವಾಗಿ ಕಡಿಮೆ ಆದಾಯದ ಮತ್ತು ದುರ್ಬಲ ರಾಜ್ಯಗಳಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡಲು ಕಾರಣವಾಗಿವೆ ಎಂದು ಮೆಲಿನ್ ರವರು ಉಲ್ಲೇಖಿಸಿದ್ದಾರೆ.
ಹಾನಿಗೊಳಗಾದವರಲ್ಲಿ ಹೆಚ್ಚಿನವರು ಮಕ್ಕಳು
ಮಾನವೀಯ ನಿಧಿ ಕ್ಷೀಣಿಸುತ್ತಿರುವ ಬಗ್ಗೆ ಮೆಲ್ಲಿನ್ ಕಳವಳ ವ್ಯಕ್ತಪಡಿಸಿ, ಅತ್ಯಂತ ದುರ್ಬಲರಿಗೆ, ವಿಶೇಷವಾಗಿ ಮಕ್ಕಳಿಗೆ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದರು. ಯೆಮೆನ್ ಮತ್ತು ಅಫ್ಘಾನಿಸ್ತಾನದಂತಹ ಅತ್ಯಂತ ಕೆಟ್ಟ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಕೆಲವು ದೇಶಗಳು, ನಿರೀಕ್ಷಿತ ಹಣಕಾಸಿನ ಕಡಿತದಿಂದಾಗಿ ಪ್ರಮುಖ ಮಾನವೀಯ ನೆರವನ್ನು ಕಳೆದುಕೊಳ್ಳುವ ಅಪಾಯದಲ್ಲಿವೆ ಎಂದು ಅವರು ಹೇಳಿದರು. ಈ ಅಡೆತಡೆಗಳು ಸಂಭವಿಸಿದಲ್ಲಿ, ಅದು ಜೀವ ಉಳಿಸುವ ಸಹಾಯದ ವಿತರಣೆಯನ್ನು ತೀವ್ರವಾಗಿ ಅಡ್ಡಿಪಡಿಸುತ್ತದೆ.
ವರದಿಯು ಇದನ್ನು ಒಂದು ಬೆದರಿಕೆ ಎಂದು ಬಿಂಬಿಸುತ್ತದೆ, ಮಾನವೀಯ ಕಾರ್ಯಾಚರಣೆಗಳಲ್ಲಿನ ಕಡಿತವು ಹಸಿವಿನ ತೀವ್ರ ಉಲ್ಬಣಕ್ಕೆ ಕಾರಣವಾಗಬಹುದು, ವಿಶೇಷವಾಗಿ ದುರ್ಬಲ ಸಮುದಾಯಗಳಲ್ಲಿ ಸಣ್ಣ ಆಘಾತಗಳು ಸಹ ತೀವ್ರ ಆಹಾರ ಅಭದ್ರತೆಯನ್ನು ಉಂಟುಮಾಡಬಹುದು ಎಂದು ಗಮನಿಸುತ್ತದೆ.
ಸಂಘಟಿತ ಜಾಗತಿಕ ಪ್ರತಿಕ್ರಿಯೆಗೆ ಕರೆ
ಆಹಾರ ಮತ್ತು ಕೃಷಿ ಸಂಘಟನೆ (FAO) ಮತ್ತು ಅದರ ಪಾಲುದಾರರು ಅಂತರರಾಷ್ಟ್ರೀಯ ಸಮುದಾಯವು ತುರ್ತು ಮತ್ತು ದೀರ್ಘಕಾಲೀನ ಬೆಂಬಲವನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ. "ಈ ಬಿಕ್ಕಟ್ಟುಗಳು ಪರಿಹರಿಸಲಾಗದವುಗಳಲ್ಲ" ಎಂದು ಮೆಲ್ಲಿನ್ ರವರು ತೀರ್ಮಾನಿಸಿದರು, ಸರಿಯಾದ ಸಹಾಯದ ಮಿಶ್ರಣವನ್ನು ವಿತರಿಸಿದಾಗ ನಾವು ಪ್ರಗತಿಯನ್ನು ಕಂಡಿದ್ದೇವೆ. ಇದು ಕೇವಲ ಆಹಾರದ ಬಗ್ಗೆ ಅಲ್ಲ, ಇದು ಕೃಷಿ, ಸ್ಥಿರತೆ ಮತ್ತು ನಿರಂತರ ಹೂಡಿಕೆಯ ಬಗ್ಗೆ.