ಮುಂಬರುವ ಸೌದಿ ಮಾತುಕತೆಯಲ್ಲಿ ಉಕ್ರೇನ್ ಭಾಗಶಃ ಕದನ ವಿರಾಮವನ್ನು ಪ್ರಸ್ತಾಪಿಸಲಿದೆ
ಜೋಸೆಫ್ ಟುಲ್ಲೊಚ್
ಸೌದಿ ಅರೇಬಿಯಾವು ಮಂಗಳವಾರ ಅಮೇರಿಕ ಮತ್ತು ಉಕ್ರೇನ್ ನಡುವೆ ಮಾತುಕತೆ ನಡೆಸಲಿದೆ.
ಕಳೆದ ತಿಂಗಳ ಕೊನೆಯಲ್ಲಿ ಅಧ್ಯಕ್ಷ ಟ್ರಂಪ್ ಅರವರ ಶ್ವೇತಭವನ ಭೇಟಿಯ ಸಂದರ್ಭದಲ್ಲಿ ಭುಗಿಲೆದ್ದ ವಾದದ ನಂತರ, ಅಮೇರಿಕವು ಉಕ್ರೇನ್‌ಗೆ ಮಿಲಿಟರಿ ಬೆಂಬಲವನ್ನು ಕಡಿತಗೊಳಿಸಿತು. ಈ ವಾದವು ರಾಜತಾಂತ್ರಿಕ ಒತ್ತಡಕ್ಕೆ ಕಾರಣವಾಗಿದೆ.
ಸಮುದ್ರದಲ್ಲಿ ಮತ್ತು ಆಕಾಶದಲ್ಲಿ ಕದನ ವಿರಾಮ
ಉಕ್ರೇನಿಯದ ಅಧಿಕಾರಿಗಳು, ಮಾತುಕತೆಯಲ್ಲಿ, ಭೂಮಿ ಮೇಲೆ ಅಲ್ಲದಿದ್ದರೂ, ಆಕಾಶದಲ್ಲಿ ಮತ್ತು ಸಮುದ್ರದಲ್ಲಿ ಕದನ ವಿರಾಮವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.
ಮಾತುಕತೆಗೂ ಮುನ್ನ, ಅಮೇರಿಕದ ವಿದೇಶಾಂಗ ಇಲಾಖೆ "ಅಧ್ಯಕ್ಷ ಟ್ರಂಪ್ ರವರು ಯುದ್ಧವನ್ನು ಆದಷ್ಟು ಬೇಗ ಕೊನೆಗೊಳಿಸಲು ದೃಢನಿಶ್ಚಯ ಹೊಂದಿದ್ದಾರೆ" ಎಂದು ಹೇಳಿದ್ದು, "ಎಲ್ಲ ಕಡೆಯವರು ಸುಸ್ಥಿರ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಒತ್ತಿ ಹೇಳಿದೆ.
ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು, ಈ ವಾರ ಸೌದಿ ಅರೇಬಿಯಾದಿಂದ ಕೆಲವು ಉತ್ತಮ ಫಲಿತಾಂಶಗಳು ಹೊರಬರಲಿವೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಕಾರ್ಡಿನಲ್ ಪರೋಲಿನ್: ʻಕೆಲವೇ ಗಂಟೆಗಳಲ್ಲಿ ಕದನ ವಿರಾಮ ಸಂಭವಿಸಬಹುದು'
ಸಂಘರ್ಷ ಪ್ರಾರಂಭವಾದಾಗಿನಿಂದ ಉಕ್ರೇನ್‌ನಲ್ಲಿನ ಯುದ್ಧವನ್ನು ಕೊನೆಗೊಳಿಸಲು ಶಾಂತಿ ಮಾತುಕತೆಗಳಿಗೆ ಪವಿತ್ರ ಪೀಠಾಧಿಕಾರವು ಕರೆ ನೀಡುತ್ತಿದೆ.
ಕಳೆದ ವರ್ಷದ ಕೊನೆಯಲ್ಲಿ, ಉಕ್ರೇನ್‌ನಲ್ಲಿನ ಯುದ್ಧದ 1000 ದಿನಗಳ ವಾರ್ಷಿಕೋತ್ಸವದಂದು ವ್ಯಾಟಿಕನ್ ಸುದ್ದಿಯೊಂದಿಗೆ ಮಾತನಾಡಿದ ಪವಿತ್ರ ಪೀಠಾಧಿಕಾರದ ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ರವರು, ನ್ಯಾಯಯುತ ಶಾಂತಿಗಾಗಿ ಮಾತುಕತೆ ನಡೆಸಲು ಸಮಯ ತೆಗೆದುಕೊಳ್ಳುತ್ತಿದೆ, ಆದರೆ, ಆ ಇಚ್ಛೆಯು ಅಸ್ತಿತ್ವದಲ್ಲಿದ್ದರೆ ಕೆಲವೇ ಗಂಟೆಗಳಲ್ಲಿ ಕದನ ವಿರಾಮ ಸಂಭವಿಸಬಹುದು ಎಂದು ಹೇಳಿದರು.
ವಿಶ್ವಗುರು ಫ್ರಾನ್ಸಿಸ್ ರವರು ಆಗಾಗ್ಗೆ ಹೇಳುವಂತೆ, ಪರೋಲಿನ್ ರವರು ತಮ್ಮ ಮಾತುಗಳನ್ನು ಮುಂದುವರಿಸುತ್ತಾ, ಯುದ್ಧದ ಮೇಲೆ ಅಲ್ಲ, ಶಾಂತಿಯ ಮೇಲೆ ಪಣತೊಡಲು ಸಿದ್ಧರಿರುವ ನಾಯಕರು, ಉಕ್ರೇನ್‌ಗೆ ಮಾತ್ರವಲ್ಲದೆ ಇಡೀ ಯುರೋಪ್ ಮತ್ತು ಪ್ರಪಂಕ್ಕೆ ಭೀಕರ ಪರಿಣಾಮಗಳೊಂದಿಗೆ ಸಂಘರ್ಷವನ್ನು ಮುಂದುವರೆಸುವ ಅಗಾಧ ಜವಾಬ್ದಾರಿಯನ್ನು ಅರಿತುಕೊಳ್ಳುವ ವ್ಯಕ್ತಿಗಳು ಬೇಕಾಗಿದ್ದಾರೆ ಎಂದು ಹೇಳಿದರು.