ಗಾಜಾ ಕದನ ವಿರಾಮ ಬಿಕ್ಕಟ್ಟನ್ನು ಮುರಿಯಲು ಮಧ್ಯವರ್ತಿಗಳ ಪ್ರಯತ್ನ
ಲಿಂಡಾ ಬೋರ್ಡೋನಿ
ಕತಾರ್‌ನಲ್ಲಿ, ಗಾಜಾ ಕದನ ವಿರಾಮ ಮಾತುಕತೆ ತಂಡದ ವಿವರವಾದ ವರದಿಯನ್ನು ಚರ್ಚಿಸಲು ಇಸ್ರಯೇಲ್ ಸಚಿವ ಸಂಪುಟ ಶನಿವಾರ ರಾತ್ರಿ ಸಭೆ ಸೇರಲಿದೆ, ಅಲ್ಲಿ ಅಮೇರಿಕದ ಮಧ್ಯವರ್ತಿಗಳಾದ ಹಮಾಸ್ ಮತ್ತು ಇಸ್ರಯೇಲ್ ನಡುವೆ ಪರೋಕ್ಷ ಮಾತುಕತೆ ನಡೆಯಲಿದೆ, ಆದರೆ ನೆತನ್ಯಾಹುರವರ ಕಚೇರಿ ಈಗಾಗಲೇ ಹಮಾಸ್ ತನ್ನ ಯಾವುದೇ ನಿಲುವುಗಳನ್ನು ಬದಲಾಯಿಸಿಲ್ಲ ಎಂದು ಆರೋಪಿಸಿದೆ.
ಶುಕ್ರವಾರದ ಹೇಳಿಕೆಯ ಪ್ರಕಾರ, ಗಾಜಾ ಕದನ ವಿರಾಮ ಒಪ್ಪಂದದ ಎರಡನೇ ಹಂತಕ್ಕಾಗಿ ಸ್ಥಗಿತಗೊಂಡಿರುವ ಮಾತುಕತೆಗಳನ್ನು ಪುನರಾರಂಭಿಸಲು ತಂಡವು ಗುರುವಾರ ಮಂಡಿಸಿದ ಪ್ರಸ್ತಾವನೆಗೆ "ಸಕಾರಾತ್ಮಕವಾಗಿ" ಪ್ರತಿಕ್ರಿಯಿಸಿದೆ ಎಂದು ಹಮಾಸ್ ಹೇಳಿದೆ.
ಅಮೇರಿಕ-ಇಸ್ರಯೇಲ್ ನ ಕೊನೆಯ ಒತ್ತೆಯಾಳು ಹಾಗೂ ಇತರ ನಾಲ್ಕು ದ್ವಿರಾಷ್ಟ್ರೀಯ ಒತ್ತೆಯಾಳುಗಳ ಶವಗಳನ್ನು ಬಿಡುಗಡೆ ಮಾಡುವ ಹಮಾಸ್‌ನ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ಸಿದ್ಧತೆಯು, ಕದನ ವಿರಾಮದ ಕುರಿತು ಮಾತುಕತೆಗಳ ಪುನರಾರಂಭ, ದಾಟುವಿಕೆಯ ಅಡ್ಡಗೋಡೆಗಳನ್ನು ತೆರೆಯುವುದು ಮತ್ತು ಎರಡು ವಾರಗಳ ಹಿಂದೆ ಇಸ್ರಯೇಲ್ ವಿಧಿಸಿದ ಸಂಪೂರ್ಣ ದಿಗ್ಬಂಧನವನ್ನು ತೆಗೆದುಹಾಕುವುದರ ಮೇಲೆ ಅವಲಂಬಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಹಾರ ಸರಬರಾಜು, ಔಷಧಿಗಳು, ಇಂಧನ ಮತ್ತು ವಿದ್ಯುತ್ ಕೂಡ ವೇಗವಾಗಿ ಖಾಲಿಯಾಗುತ್ತಿರುವುದರಿಂದ ಜನಸಂಖ್ಯೆಗೆ ಅಪಾರ ತೊಂದರೆಯಾಗುತ್ತಿದೆ.
ಅಮೇರಿಕ ಅಧ್ಯಕ್ಷರ ವಿಶೇಷ ರಾಯಭಾರಿಯಾದ ಸ್ಟೀವ್ ವಿಟ್ಕಾಫ್ ರವರು ಮಾರ್ಚ್ ತಿಂಗಳ ಆರಂಭದಲ್ಲಿ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದ ಪ್ರಕಾರ, ಅಮೇರಿಕ-ಇಸ್ರಯೇಲ್ ಸೈನಿಕ ಎಡಾನ್ ಅಲೆಕ್ಸಾಂಡರ್ ರವರನ್ನು ಬಿಡುಗಡೆ ಮಾಡುವುದು "ಪ್ರಮುಖ ಆದ್ಯತೆ"ಯಾಗಿದೆ.
ಪಶ್ಚಿಮ ದಂಡೆ ಮತ್ತು ಅದರಾಚೆಗೆ ಇಸ್ರಯೇಲ್ ದಾಳಿಗಳು, ಮುಂದುವರೆದಿರುವ ನಡುವೆಯೂ ಮಾತುಕತೆಗಳನ್ನು ಪುನರಾರಂಭಿಸಲು, ಇಸ್ಲಾಂ ಧರ್ಮದ ಉಗ್ರಗಾಮಿಗಳ ಗುಂಪು ಮತ್ತು ಇಸ್ರಯೇಲ್ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಅಮೇರಿಕ, ಕತಾರ್ ಮತ್ತು ಈಜಿಪ್ಟ್ ದೇಶಗಳು ಪ್ರಯತ್ನಿಸುತ್ತಿವೆ.
ಇದರ ನಡುವೆ, ಮೂರು ಹಂತದ ಕದನ ವಿರಾಮ ಒಪ್ಪಂದದ ಮೊದಲ ಹಂತದ ಅಡಿಯಲ್ಲಿ ಜನವರಿ 19 ರಿಂದ ಗಾಜಾದಲ್ಲಿ ಹೋರಾಟವನ್ನು ನಿಲ್ಲಿಸಲಾಗಿದೆ, ಈ ಸಮಯದಲ್ಲಿ ಹಮಾಸ್ 33 ಇಸ್ರಯೇಲ್ ಒತ್ತೆಯಾಳುಗಳನ್ನು ಮತ್ತು ಐದು ಥೈಲ್ಯಾಂಡ್‌ನ ಒತ್ತೆಯಾಳುಗಳನ್ನು ಸರಿಸುಮಾರು 2,000 ಪ್ಯಾಲಸ್ತೀನಿಯದ ಕೈದಿಗಳು ಮತ್ತು ಬಂಧಿತರಿಗೆ ವಿನಿಮಯ ಮಾಡಿಕೊಂಡಿತು.
ಆದರೆ, ಆ ಹಂತವು ಮಾರ್ಚ್ ತಿಂಗಳ 2 ರಂದು ಮುಕ್ತಾಯಗೊಂಡಾಗ, ಎರಡನೇ ಹಂತದ ಕದನ ವಿರಾಮದ ಆರಂಭವನ್ನು ಒಪ್ಪಿಕೊಳ್ಳಲು ಪಕ್ಷಗಳು ವಿಫಲವಾದವು, ಇಸ್ರಯೇಲ್ ಕದನ ವಿರಾಮದ ಮೊದಲ ಹಂತವನ್ನು ವಿಸ್ತರಿಸಲು ಮುಂದಾಯಿತು. ಆದರೆ, ಹಮಾಸ್ ಎರಡನೇ ಹಂತದ ಅಡಿಯಲ್ಲಿ ಮಾತ್ರ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದನ್ನು ಪುನರಾರಂಭಿಸುವುದಾಗಿ ಹೇಳಿತು. ಈ ಸಮಯದಲ್ಲಿ ಇಸ್ರಯೇಲ್ ಸೈನ್ಯವನ್ನು ಹಿಂತೆಗೆದುಕೊಳ್ಳುವುದು ಮತ್ತು ಯುದ್ಧಕ್ಕೆ ಶಾಶ್ವತ ಅಂತ್ಯಗೀತೆಯನ್ನು ಹಾಡುವ ಬಗ್ಗೆ ಚರ್ಚಿಸಬೇಕಾಗುತ್ತದೆ.
ವಿಶ್ವಗುರು ಫ್ರಾನ್ಸಿಸ್ ರವರು ಯುದ್ಧವನ್ನು ಕೊನೆಗೊಳಿಸುವಂತೆ ಪ್ರಾರ್ಥಿಸುವುದನ್ನು ಮತ್ತು ಮನವಿ ಮಾಡುವುದನ್ನು ಎಂದಿಗೂ ನಿಲ್ಲಿಸಲಿಲ್ಲ. ರೋಮ್‌ನ ಜೆಮೆಲ್ಲಿ ಆಸ್ಪತ್ರೆಯಲ್ಲಿ ದ್ವಿಪಕ್ಷೀಯ ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದರೂ ಸಹ, ಅವರಿಗೆ ಸಾಧ್ಯವಾದಾಗಲೆಲ್ಲಾ ಗಾಜಾದಲ್ಲಿರುವ ಹೋಲಿ ಫ್ಯಾಮಿಲಿ ಕ್ಯಾಥೋಲಿಕ್ ಪ್ಯಾರಿಷ್‌ಗೆ (ಕಥೋಲಿಕ ಪವಿತ್ರ ಕುಟುಂಬದ ಧರ್ಮಕೇಂದ್ರಕ್ಕೆ) ವೈಯಕ್ತಿಕವಾಗಿ ಕರೆ ಮಾಡಿ ತಮ್ಮ ನಿಕಟತೆ ಮತ್ತು ಕಳವಳವನ್ನು ತಿಳಿಸಲು ಶಕ್ತಿಯನ್ನು ಕಂಡುಕೊಂಡರು ಎಂಬುದನ್ನು ಕಾಣಬಹುದಾಗಿದೆ.