ಉಕ್ರೇನ್-ಅಮೇರಿಕದ ಕದನ ವಿರಾಮ ಪ್ರಸ್ತಾಪವನ್ನು ಕ್ರೆಮ್ಲಿನ್ 'ಅಧ್ಯಯನ' ಮಾಡುತ್ತಿದೆ
ಲಿಂಡಾ ಬೋರ್ಡೋನಿ
ಸೌದಿ ಅರೇಬಿಯಾದಲ್ಲಿ ಅಮೇರಿಕ ಮತ್ತು ಉಕ್ರೇನಿಯದ ಅಧಿಕಾರಿಗಳ ನಡುವಿನ ಸಭೆಯನ್ನು ಉಕ್ರೇನಿಯದ ಅಧ್ಯಕ್ಷರು ಶ್ಲಾಘಿಸಿದ್ದು, ಇದನ್ನು ರಚನಾತ್ಮಕ ಎಂದು ಬಣ್ಣಿಸಿದ್ದಾರೆ.
ಬುಧವಾರ ಕೀವ್‌ನಲ್ಲಿ ನಡೆದ ಬ್ರೀಫಿಂಗ್‌ನಲ್ಲಿ ಮಾತನಾಡಿದ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾದೊಂದಿಗಿನ 30 ದಿನಗಳ ಸಂಭಾವ್ಯ ಕದನ ವಿರಾಮವನ್ನು ವಿಶಾಲವಾದ ಶಾಂತಿ ಒಪ್ಪಂದವನ್ನು ರೂಪಿಸಲು ಬಳಸಬಹುದು ಎಂದು ಹೇಳಿದರು.
ರಷ್ಯಾದ ಆಕ್ರಮಣವನ್ನು ಆದಷ್ಟು ಬೇಗ ಕೊನೆಗೊಳಿಸುವ ಅಮೇರಿಕದ ಪ್ರಯತ್ನವನ್ನು ಉಕ್ರೇನ್ ಬೆಂಬಲಿಸುತ್ತದೆ ಮತ್ತು ಅಮೇರಿಕದ ಮಿಲಿಟರಿ ನೆರವು ಹಾಗೂ ಗುಪ್ತಚರ ಹಂಚಿಕೆಯ ಪುನರಾರಂಭವು ತುಂಬಾ ಸಕಾರಾತ್ಮಕವಾಗಿದೆ ಎಂದು ಅವರು ದೃಢಪಡಿಸಿದರು.
ಉಕ್ರೇನಿನ ಸಂಘರ್ಷವನ್ನು ಕೊನೆಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅಧ್ಯಕ್ಷ ಟ್ರಂಪ್ ರವರು ಒತ್ತಾಯಿಸಿದ ನಂತರ ಸ್ಥಗಿತಗೊಳಿಸಲಾದ ಕೈವ್‌ನೊಂದಿಗೆ ಶಸ್ತ್ರಾಸ್ತ್ರ ಪೂರೈಕೆ ಮತ್ತು ಗುಪ್ತಚರ ಹಂಚಿಕೆಯನ್ನು ಪುನರಾರಂಭಿಸಲು ಅಮೇರಿಕ ಮಂಗಳವಾರ ಒಪ್ಪಿಕೊಂಡಿತು.
ಉಕ್ರೇನ್ ಒಪ್ಪಿಕೊಂಡಿರುವ ಕದನ ವಿರಾಮ ಪ್ರಸ್ತಾಪವು ವಾಯು ಮತ್ತು ಸಮುದ್ರವನ್ನು ಮಾತ್ರವಲ್ಲದೆ ರಷ್ಯಾದೊಂದಿಗಿನ ಹೋರಾಟದ ಸಂಪೂರ್ಣ ಮುಂಚೂಣಿಯನ್ನು ಒಳಗೊಂಡಿದೆ ಎಂದು ಝೆಲೆನ್ಸ್ಕಿರವರು ಬಹಿರಂಗಪಡಿಸಿದರು.
ಉಕ್ರೇನ್ ಅಂತಹ ಹೆಜ್ಜೆ ಇಡಲು ಸಿದ್ಧವಾಗಿದೆ ಮತ್ತು ಈಗ ಅಮೇರಿಕ ರಷ್ಯಾವನ್ನು ಹಾಗೆ ಮನವೊಲಿಸಬೇಕು ಎಂದು ಅವರು ಹೇಳಿದರು, ಮಾಸ್ಕೋ ಅದಕ್ಕೆ ಒಪ್ಪಿದ ಕ್ಷಣದಿಂದ ಕದನ ವಿರಾಮ ಪ್ರಾರಂಭವಾಗುತ್ತದೆ ಎಂದು ಹೇಳಿದರು.
8 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಭೆಯ ನಂತರ ಮಾತನಾಡಿದ ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊರವರು, ಯುದ್ಧವನ್ನು ಕೊನೆಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ಈಗ ರಷ್ಯಾದ ಮೇಲಿದೆ ಎಂದು ಹೇಳಿದರು. ಅವರು ಶಾಂತಿಗೆ ಹೌದು ಎಂದು ಹೇಳುತ್ತಾರೆಂದು ನಾವು ಭಾವಿಸುತ್ತೇವೆ. ನಮ್ಮ ಪ್ರಕಾರ ಚೆಂಡು ಈಗ ಅವರ ಅಂಗಳದಲ್ಲಿದೆ.
ಉಕ್ರೇನ್‌ಗೆ ಯಾವುದೇ ಭದ್ರತಾ ಖಾತರಿಯ ಕಾರ್ಯದಲ್ಲಿ ಯುರೋಪ್ ಭಾಗಿಯಾಗಬೇಕಾಗುತ್ತದೆ ಮತ್ತು ಯುರೋಪ್ ವಿಧಿಸಿರುವ ನಿರ್ಬಂಧಗಳೂ ಸಹ ಮೇಜಿನ ಮೇಲಿರುತ್ತವೆ ಎಂದು ರೂಬಿಯೊರವರು ಹೇಳಿದರು.
ಟ್ರಂಪ್-ಪುಟಿನ್ ಶೀಘ್ರದಲ್ಲೇ ಮಾತುಕತೆ
ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಸುದ್ದಿಯನ್ನು ಸ್ವಾಗತಿಸಿದರು ಮತ್ತು ಈ ವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರವರೊಂದಿಗೆ ಯೋಜನೆಯ ಬಗ್ಗೆ ಮಾತನಾಡುವುದಾಗಿ ಪ್ರತಿಜ್ಞೆ ಮಾಡಿದರು.
ಜನವರಿಯಲ್ಲಿಯೇ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ತಾತ್ಕಾಲಿಕ ಕದನ ವಿರಾಮದ ಕಲ್ಪನೆಯನ್ನು ತಿರಸ್ಕರಿಸಿದರು ಮತ್ತು ವಿಶ್ರಾಂತಿಯ ಬದಲು ದೀರ್ಘಕಾಲದ ಶಾಂತಿ ಒಪ್ಪಂದದ ಬಯಕೆಯನ್ನು ಪುನರುಚ್ಚರಿಸಿದರು.
ಆದರೆ ಡೊನಾಲ್ಡ್ ಟ್ರಂಪ್ ರವರ ಜೊತೆಗಿನ ನಿಕಟ ಸಂಬಂಧದ ಬಯಕೆಯು, ಅವರಿಗೆ ವಿಷಯಗಳನ್ನು ಸಂಕೀರ್ಣಗೊಳಿಸುತ್ತದೆ ಎಂದು ವಿಶ್ಲೇಷಕರು ಗಮನಿಸುತ್ತಾರೆ ಏಕೆಂದರೆ ಟ್ರಂಪ್ ರವರು ಯುದ್ಧವನ್ನು ಸಾಧ್ಯವಾದಷ್ಟು ಬೇಗ ಕೊನೆಗೊಳಿಸಲು ಬಯಸುತ್ತಾರೆ ಎಂದು ಹೇಳುತ್ತಾರೆ, ಆದರೆ ಪುಟಿನ್ ರವರು ಪಶ್ಚಿಮ ಮತ್ತು ಕೈವ್‌ನಿಂದ ಪ್ರಮುಖ ರಿಯಾಯಿತಿಗಳನ್ನು ಪಡೆಯುವವರೆಗೆ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಸೂಚಿಸಿದ್ದಾರೆ, ಇದರಲ್ಲಿ ಉಕ್ರೇನ್ NATOಗೆ ಸೇರಕೂಡದು. ಮೈತ್ರಿಕೂಟವು, ಮಧ್ಯ ಮತ್ತು ಪೂರ್ವ ಯುರೋಪಿನಲ್ಲಿ ತನ್ನ ಉಪಸ್ಥಿತಿಯನ್ನು ಕಡಿಮೆ ಮಾಡುತ್ತದೆ ಎಂಬ ಪ್ರತಿಜ್ಞೆಯೂ ಸೇರಿದೆ.
ಮೂರು ವರ್ಷಗಳ ಕಾಲ, ವಿಶ್ವಗುರು ಫ್ರಾನ್ಸಿಸ್ ಯುದ್ಧವನ್ನು ದಣಿವರಿಯಿಲ್ಲದೆ ಖಂಡಿಸಿದ್ದಾರೆ, "ಯಾತನೆಗೊಳಗಾದ ಉಕ್ರೇನ್" ಗೆ ತಮ್ಮ ನಿಕಟತೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಸಂಘರ್ಷಕ್ಕೆ ಮಧ್ಯಸ್ಥಿಕೆಯ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.
ಫೆಬ್ರವರಿ 2022ರಲ್ಲಿ ಉಕ್ರೇನ್ ಮೇಲೆ ರಷ್ಯಾದ ವ್ಯಾಪಕ ಆಕ್ರಮಣವು ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತು ಮತ್ತು ಗಾಯಗೊಳಿಸಿತು, ಲಕ್ಷಾಂತರ ಜನರನ್ನು ಸ್ಥಳಾಂತರಿಸಿತು, ಪಟ್ಟಣಗಳನ್ನು ನಾಶಮಾಡಿತು ಮತ್ತು ಆರು ದಶಕಗಳಲ್ಲಿ ಮಾಸ್ಕೋ ಹಾಗೂ ಪಶ್ಚಿಮದ ನಡುವಿನ ಅತಿದೊಡ್ಡ ಘರ್ಷಣೆ ಅಥವಾ ಹೊಡೆದಾಟಕ್ಕೆ ನಾಂದಿ ಹಾಡಿತು.