ಗಾಜಾದೊಳಗೆ ಇಸ್ರಯೇಲ್ ಪಡೆಗಳ ಅಟ್ಟಹಾಸ; ಲೆಬನಾನ್‌ನಲ್ಲಿ ಡ್ರೋನ್ ದಾಳಿ
ನಾಥನೆ ಮೊರ್ಲೆ
ಭಯೋತ್ಪಾದಕ ಮೂಲಸೌಕರ್ಯಗಳನ್ನು ಕೆಡವಲು ಮತ್ತು ಭದ್ರತಾ ವಲಯವನ್ನು ವಿಸ್ತರಿಸುವ ಕಾರ್ಯಾಚರಣೆಯ ಭಾಗವಾಗಿ ಪಡೆಗಳು ಹಮಾಸ್ ಕಮಾಂಡ್ ಕೇಂದ್ರದ ಮೇಲೆ ದಾಳಿ ಮಾಡಿ "ಹಲವಾರು" ಉಗ್ರಗಾಮಿಗಳನ್ನು ಕೊಂದವು.
ನಿವಾಸಿಗಳು ಪ್ರದೇಶದಿಂದ ಪಲಾಯನ ಮಾಡುತ್ತಿರುವುದನ್ನು ವೀಡಿಯೊಗಳ ದೃಶ್ಯಗಳು ತೋರಿಸಿದರೆ, ಐಡಿಎಫ್ ದೃಶ್ಯಗಳಲ್ಲಿ ಸೈನಿಕರು ಶಸ್ತ್ರಸಜ್ಜಿತ ವಾಹನಗಳೊಂದಿಗೆ ಮುನ್ನಡೆಯುತ್ತಿರುವುದನ್ನು, ಹಾನಿಗೊಳಗಾದ ಕಟ್ಟಡಗಳ ಮೇಲೆ ಗುಂಡು ಹಾರಿಸುವುದನ್ನು ತೋರಿಸಲಾಗಿದೆ. ವಾರಾಂತ್ಯದಲ್ಲಿ, ಇಸ್ರಯೇಲ್ ವಾಯುದಾಳಿಗಳು ಉತ್ತರ ಗಾಜಾದ ಬೀಟ್ ಹನೌನ್‌ನಲ್ಲಿರುವ ಹಮಾಸ್ ತಾಣಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಮಿಲಿಟರಿ ವಕ್ತಾರರು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಗಾಜಾದಲ್ಲಿ 41 ಮಂದಿ ಸಾವನ್ನಪ್ಪಿದ್ದಾರೆ ಮತ್ತು 61 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ವರದಿ ಮಾಡಿದ್ದು, ಸಂಘರ್ಷದಲ್ಲಿ ಸಾವನ್ನಪ್ಪಿದವರ ಸಂಖ್ಯೆ 50,021ಕ್ಕೆ ಏರಿದೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹುರವರು ಹಮಾಸ್ ನ್ನು ನಾಶಮಾಡುವ ಮತ್ತು ಒತ್ತೆಯಾಳುಗಳ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ತನ್ನ ಗುರಿಯನ್ನು ಪುನರುಚ್ಚರಿಸಿದ್ದರಿಂದ, ನವೀಕರಿಸಿದ ದಾಳಿಯು ಎರಡು ತಿಂಗಳ ಕದನ ವಿರಾಮವನ್ನು ಕೊನೆಗೊಳಿಸಿತು.
ದಕ್ಷಿಣ ಲೆಬನಾನ್‌ನಲ್ಲಿ ಡ್ರೋನ್ ದಾಳಿಗಳು
ಇದಕ್ಕೆ ಸಂಬಂಧಿಸಿದ ಉಲ್ಬಣದಲ್ಲಿ, ಇಸ್ರಯೇಲ್ ಡ್ರೋನ್ ದಾಳಿಯು ಭಾನುವಾರ ದಕ್ಷಿಣ ಲೆಬನಾನ್‌ನ ಐತಾ ಅಲ್-ಶಾಬ್ ಗ್ರಾಮದಲ್ಲಿ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ್ದು, ಘಟನೆಯಲ್ಲಿ ಒರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಒಂದು ದಿನದ ಹಿಂದೆ ದಕ್ಷಿಣ ಮತ್ತು ಪೂರ್ವ ಲೆಬನಾನ್‌ನ ಮೇಲೆ ಇಸ್ರಯೇಲ್ ವಾಯುದಾಳಿ ನಡೆಸಿದ ನಂತರ ಈ ದಾಳಿ ನಡೆದಿದ್ದು, ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.
ನವೆಂಬರ್ 27ರಿಂದ ಅಮೆರಿಕ ಮತ್ತು ಫ್ರಾನ್ಸ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಜಾರಿಯಲ್ಲಿದ್ದರೂ, ಇಸ್ರಯೇಲ್-ಲೆಬನಾನ್ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇಸ್ರಯೇಲ್ ಮತ್ತು ಹೆಜ್ಬೊಲ್ಲಾ ನಡುವಿನ ಒಂದು ವರ್ಷಕ್ಕೂ ಹೆಚ್ಚು ಕಾಲದ ಘರ್ಷಣೆಯನ್ನು ಕೊನೆಗೊಳಿಸಿದ ಒಪ್ಪಂದವು, "ಹೆಜ್ಬೊಲ್ಲಾ ಬೆದರಿಕೆಗಳು" ಮುಂದುವರೆಯುತ್ತಿರುವುದನ್ನು ಉಲ್ಲೇಖಿಸಿ ಇಸ್ರಯೇಲ್ ಕಾರ್ಯಾಚರಣೆಗಳು ಮುಂದುವರಿದಿರುವುದರಿಂದ ಒತ್ತಡಕ್ಕೊಳಗಾಗಿದೆ.