ಗಾಜಾ ಮೇಲೆ ಇಸ್ರಯೇಲ್ ವೈಮಾನಿಕ ದಾಳಿ
ಫ್ರಾನ್ಸೆಸ್ಕಾ ಮೆರ್ಲೊ
ಇಸ್ರಯೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಕೊನೆಗೊಂಡಿದೆ, ಗಾಜಾದಾದ್ಯಂತ ಹೊಸ ವಿನಾಶದ ಅಲೆಯನ್ನು ಬಿಡುಗಡೆ ಮಾಡಿದೆ. ರಾತ್ರೋರಾತ್ರಿ, ಇಸ್ರಯೇಲ್ ಯುದ್ಧ ವಿಮಾನಗಳು ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿಕೊಂಡು 30ಕ್ಕೂ ಹೆಚ್ಚು ವೈಮಾನಿಕ ದಾಳಿಗಳನ್ನು ನಡೆಸಿದವು. ಪ್ಯಾಲಸ್ತೀನಿಯದ ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ, ನಾಗರಿಕರು ಮತ್ತು ಮಕ್ಕಳು ಸೇರಿದಂತೆ 330ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್‌ಗಟ್ಟಲೆ ಜನರು ಗಾಯಗೊಂಡಿದ್ದಾರೆ. ದಾಳಿಗೊಳಗಾದ ಪ್ರದೇಶಗಳಲ್ಲಿ ಖಾನ್ ಯೂನಿಸ್ ಕೂಡ ಸೇರಿದೆ, ಅಲ್ಲಿ ಸ್ಥಳಾಂತರಗೊಂಡಿದ್ದ ಕುಟುಂಬಗಳಿಗೆ ಆಶ್ರಯ ನೀಡಿದ್ದ ಡೇರೆಗಳು ನಾಶವಾದವು, ಇದು ನಡೆಯುತ್ತಿರುವ ಮಾನವೀಯ ಬಿಕ್ಕಟ್ಟನ್ನು ಉಲ್ಬಣಗೊಳಿಸಿತ್ತಿದೆ ಎಂದು ಕಂಡುಬರುತ್ತಿದೆ. ಸ್ಥಳೀಯ ಆಸ್ಪತ್ರೆಗಳು ಕಿಕ್ಕಿರಿದು, ಯುದ್ಧದಲ್ಲಿ ಹಾನಿಗೊಂಡ ಅಥವಾ ಗಾಯಗೊಂಡ ಜನರಿಂದ ತುಂಬಿ ತುಳುಕುತ್ತಿವೆ ಮತ್ತು ಆಸ್ಪತ್ರೆಗಳಲ್ಲಿ ಪ್ರಮುಖ ವೈದ್ಯಕೀಯ ಸರಬರಾಜುಗಳು ತೀರಾ ಕಡಿಮೆ ಇವೆ.
ಗಾಜಾದಲ್ಲಿ "ಅಸಾಮಾನ್ಯ ಚಟುವಟಿಕೆ" ನಡೆಯುತ್ತಿದೆ ಎಂದು ಉಲ್ಲೇಖಿಸಿ ಇಸ್ರಯೇಲ್ ಅಧಿಕಾರಿಗಳು ವೈಮಾನಿಕ ದಾಳಿಯನ್ನು ಸಮರ್ಥಿಸಿಕೊಂಡರು. ಪ್ರಧಾನಿ ಬೆಂಜಮಿನ್ ನೆತನ್ಯಾಹುರವರು ಮತ್ತು ರಕ್ಷಣಾ ಸಚಿವ ಇಸ್ರಯೇಲ್ ಕಾಟ್ಜ್ ರವರು ಮಿಲಿಟರಿ ಕ್ರಮಗಳನ್ನು ಸಮರ್ಥಿಸಿಕೊಂಡರು, ಹಮಾಸ್ ವಶದಲ್ಲಿರುವ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ದಾಳಿಯು ಮುಂದುವರಿಯುವುದಾಗಿ ಪ್ರತಿಜ್ಞೆ ಮಾಡಿದರು.ಯುದ್ಧದ ಪ್ರತಿಯೊಂದು ಉದ್ದೇಶವನ್ನು ಸಾಧಿಸುವವರೆಗೆ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳುವ ಮೂಲಕ ಕಾಟ್ಜ್ ರವರು ಮಿಲಿಟರಿಯ ಬದ್ಧತೆಯನ್ನು ಒತ್ತಿ ಹೇಳಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಹಮಾಸ್ ಬಾಂಬ್ ದಾಳಿಯನ್ನು ಖಂಡಿಸಿತು, ನೆತನ್ಯಾಹುರವರ ನಿರ್ಧಾರವನ್ನು "ಕೈದಿಗಳಿಗೆ ಮರಣದಂಡನೆ" ಎಂದು ಬಣ್ಣಿಸಿತು. ಇಸ್ರಯೇಲ್‌ನ ಆಂತರಿಕ ರಾಜಕೀಯ ಬಿಕ್ಕಟ್ಟುಗಳಿಂದ ಗಮನ ಬೇರೆಡೆ ಸೆಳೆಯಲು ಇಸ್ರಯೇಲ್ ನಾಯಕ ಯುದ್ಧವನ್ನು ಬಳಸುತ್ತಿದ್ದಾರೆ ಮತ್ತು ಇಸ್ರಯೇಲ್‌ನೊಳಗೆ ಹೆಚ್ಚುತ್ತಿರುವ ಕೋಪಕ್ಕೆ ಇಂಧನ ಸುರಿಯುತ್ತಿದ್ದಾರೆ ಎಂದು ಹಿರಿಯ ಹಮಾಸ್ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.
ಒತ್ತೆಯಾಳುಗಳ ಸಂಬಂಧಿಕರನ್ನು ಪ್ರತಿನಿಧಿಸುವ ಇಸ್ರಯೇಲ್‌ನ ಅತಿದೊಡ್ಡ ಗುಂಪಾದ ಫ್ಯಾಮಿಲೀಸ್ ಫೋರಮ್(ಕುಟುಂಬಗಳ ಸಾರ್ವಜನಿಕ ಸಭಾಸ್ಥಾನ), ಹಿಂಸಾಚಾರವನ್ನು ಕೊನೆಗೊಳಿಸಲು ಕರೆ ನೀಡಿತು, ನೆತನ್ಯಾಹುರವರು ತಮ್ಮ ಪ್ರೀತಿಪಾತ್ರರನ್ನು "ಕೊಲ್ಲುವುದನ್ನು ನಿಲ್ಲಿಸುವಂತೆ" ಒತ್ತಾಯಿಸಿತು. ನಡೆಯುತ್ತಿರುವ ವೈಮಾನಿಕ ದಾಳಿಯ ಸಮಯದಲ್ಲಿ ಒತ್ತೆಯಾಳುಗಳ ಸುರಕ್ಷತೆಯ ಬಗ್ಗೆ ಚರ್ಚಿಸಲು ಅವರು ಪ್ರಧಾನ ಮಂತ್ರಿಯೊಂದಿಗೆ ತುರ್ತು ಸಭೆಯನ್ನು ಒತ್ತಾಯಿಸಿದರು.
ಹಮಾಸ್ ನಡೆಸುವ ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ, ಅಕ್ಟೋಬರ್ 7, 2023 ರಂದು ಯುದ್ಧ ಭುಗಿಲೆದ್ದ ನಂತರ ಗಾಜಾದಲ್ಲಿ ಸಾವಿನ ಸಂಖ್ಯೆ 45,000 ಏರಿದೆ.
ಇದರ ನಡುವೆ, ಶ್ವೇತಭವನವು ಇಸ್ರಯೇಲ್‌ಗೆ ತನ್ನ ಅಚಲ ಬೆಂಬಲವನ್ನು ಪುನರುಚ್ಚರಿಸುತ್ತಿದ್ದಂತೆ, ಜೆಮೆಲಿ ಆಸ್ಪತ್ರೆಯಿಂದ ವಿಶ್ವಗುರು ಫ್ರಾನ್ಸಿಸ್ ಮತ್ತೊಮ್ಮೆ ಯುದ್ಧದ ಅಸಂಬದ್ಧತೆಯನ್ನು ಒತ್ತಿ ಹೇಳುತ್ತಾರೆ.