ಲಂಡನ್ ಶೃಂಗಸಭೆಯ ನಂತರ ಯುರೋಪಿನ ನಾಯಕರು ಉಕ್ರೇನ್ ಶಾಂತಿ ಯೋಜನೆಗೆ ಭರವಸೆ ನೀಡಿದ್ದಾರೆ
ಸೂಸಿ ಹಾಡ್ಜಸ್
ಲಂಡನ್‌ನಲ್ಲಿ ನಡೆದ ಶೃಂಗಸಭೆಯಲ್ಲಿ, ಯುರೋಪಿನ ನಾಯಕರು ಖಂಡವು ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲದು ಎಂದು ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ತೋರಿಸಲು ರಕ್ಷಣೆಗಾಗಿ ಹೆಚ್ಚಿನ ಖರ್ಚು ಮಾಡಬೇಕು ಎಂದು ಒಪ್ಪಿಕೊಂಡರು.
ಯುರೋಪ್ "ತನ್ನ ಇತಿಹಾಸದಲ್ಲಿ ಒಂದು ಅಡ್ಡದಾರಿಯಲ್ಲಿದೆ" ಎಂದು ಹೇಳುವ ಮೂಲಕ, ಬ್ರಿಟನ್, ಫ್ರಾನ್ಸ್, ಉಕ್ರೇನ್ ಮತ್ತು ಇತರ ಕೆಲವು ದೇಶಗಳು "ಇಚ್ಛೆಯ ಒಕ್ಕೂಟ"ವನ್ನು ರಚಿಸುತ್ತವೆ ಮತ್ತು ಉಕ್ರೇನ್‌ನಲ್ಲಿ ಯುದ್ಧವನ್ನು ನಿಲ್ಲಿಸಲು 4-ಅಂಶಗಳ ಯೋಜನೆಯನ್ನು ರೂಪಿಸುತ್ತವೆ ಎಂದು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ರವರು ಹೇಳಿದರು. ಉಕ್ರೇನ್‌ಗೆ ಬೆಂಬಲ ನೀಡುವಲ್ಲಿ ಅಮೇರಿಕವನ್ನು ಒಳಗೊಳ್ಳಲು ಮತ್ತು ಶಾಂತಿ ಯೋಜನೆಯನ್ನು ಒಟ್ಟಾಗಿ ಮುಂದುವರಿಸಲು ಅವರು ಪ್ರಯತ್ನಿಸುತ್ತಾರೆ ಎಂದು ಸ್ಟಾರ್ಮರ್ ರವರು ಹೇಳಿದರು.
ಶೃಂಗಸಭೆಗೂ ಮುನ್ನ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ರವರು ಫ್ರೆಂಚ್ ಪತ್ರಿಕೆಯೊಂದಕ್ಕೆ ಉಕ್ರೇನ್‌ನ ಶಾಂತಿ ಯೋಜನೆಯು ಒಂದು ತಿಂಗಳ ಕದನ ವಿರಾಮವನ್ನು ಒಳಗೊಂಡಿರುತ್ತದೆ, ಅದು ವಾಯು ಮತ್ತು ಸಮುದ್ರ ದಾಳಿಗಳಿಗೆ ಅನ್ವಯಿಸುತ್ತದೆ, ಆದರೆ ನೆಲದ ಯುದ್ಧಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳಿದರು. ಗಣನೀಯ ಶಾಂತಿ ಒಪ್ಪಂದಕ್ಕೆ ಬಂದರೆ ಯುರೋಪಿನ ಪಡೆಗಳನ್ನು ನಿಯೋಜಿಸಲಾಗುವುದು ಎಂದು ಮ್ಯಾಕ್ರನ್ ರವರು ಹೇಳಿದರು.
ಕಳೆದ ಶುಕ್ರವಾರ ಉಕ್ರೇನಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿರವರು, ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ರವರ ನಡುವೆ ಶ್ವೇತಭವನದಲ್ಲಿ ನಡೆದ ಘರ್ಷಣೆಯ ನಂತರ, ಕೀವ್ ಯಾವುದೇ ಶಾಂತಿ ಮಾತುಕತೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಯುರೋಪಿನ ನಾಯಕರು ಹರಸಾಹಸ ಪಡುತ್ತಿದ್ದಾರೆ. ಈ ಘಟನೆಯು ಟ್ರಂಪ್ ರವರು ಉಕ್ರೇನ್‌ಗೆ ಬೆಂಬಲ ನೀಡುವುದನ್ನು ನಿಲ್ಲಿಸಬಹುದು ಮತ್ತು ರಷ್ಯಾದೊಂದಿಗೆ ನೇರವಾಗಿ ಮಾತುಕತೆ ನಡೆಸಿದ ಶಾಂತಿ ಯೋಜನೆಯನ್ನು ಹೇರಬಹುದು ಎಂಬ ಭಯವನ್ನು ಹುಟ್ಟುಹಾಕಿದೆ.
ಶೃಂಗಸಭೆಯ ನಂತರ, ಉಕ್ರೇನಿನ ನಾಯಕನಿಗೆ ಮತ್ತೊಂದು ಬೆಂಬಲ ಪ್ರದರ್ಶನವಾಗಿ, ಅಧ್ಯಕ್ಷ ಝೆಲೆನ್ಸ್ಕಿರವರು ಪೂರ್ವ ಇಂಗ್ಲೆಂಡ್‌ನಲ್ಲಿರುವ ಬ್ರಿಟನ್ ರಾಜ ಚಾರ್ಲ್ಸ್ ರವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು.
ನಂತರದ ಪತ್ರಿಕಾಗೋಷ್ಠಿಯಲ್ಲಿ, ಝೆಲೆನ್ಸ್ಕಿರವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಶಾಂತಿ ಒಪ್ಪಂದದ ಭಾಗವಾಗಿ ರಷ್ಯಾ ವಶಪಡಿಸಿಕೊಂಡಿರುವ ಪ್ರದೇಶವನ್ನು ಬಿಟ್ಟುಕೊಡುವ ಬಗ್ಗೆ ಚರ್ಚಿಸಲು ಉಕ್ರೇನ್ ಈ ಹಂತದಲ್ಲಿ ಸಿದ್ಧವಿಲ್ಲ, ಆದರೆ ಅಮೆರಿಕದೊಂದಿಗೆ ಖನಿಜ ಒಪ್ಪಂದಕ್ಕೆ ಸಹಿ ಹಾಕಲು ಇನ್ನೂ ಸಿದ್ಧವಿರುವುದಾಗಿ ಹೇಳಿದರು. ಸ್ವದೇಶಕ್ಕೆ ಹಿಂದಿರುಗಿದ ನಂತರ, ಉಕ್ರೇನ್‌ಗೆ ಬೆಂಬಲ ನೀಡಿದ್ದಕ್ಕಾಗಿ ಝೆಲೆನ್ಸ್ಕಿರವರು ಮತ್ತೊಮ್ಮೆ ಅಮೇರಿಕಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಎಲ್ಲಾ ಉದ್ದೇಶಗಳನ್ನು ತಲುಪುವವರೆಗೆ ಉಕ್ರೇನ್‌ನಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯು ಮುಂದುವರಿಯುತ್ತದೆ ಎಂದು ರಷ್ಯಾ ಹೇಳಿದೆ.
ಝೆಲೆನ್ಸ್ಕಿ ಮತ್ತು ಟ್ರಂಪ್ ರವರ ನಡುವಿನ ಘರ್ಷಣೆಯ ಕುರಿತು ಪ್ರತಿಕ್ರಿಯಿಸಿದ ಕ್ರೆಮ್ಲಿನ್ ಸೋಮವಾರ ಝೆಲೆನ್ಸ್ಕಿರವರ ರಾಜತಾಂತ್ರಿಕ ಸಾಮರ್ಥ್ಯದ ಸಂಪೂರ್ಣ ಕೊರತೆಯನ್ನು ಆರೋಪಿಸಿತು ಮತ್ತು ಪಶ್ಚಿಮದ ಸಾಮೂಹಿಕ ಏಕತೆಯ ವಿಘಟನೆ ಪ್ರಾರಂಭವಾಗಿದೆ ಎಂದು ಹೇಳಿದೆ.