MAP

Premio Zayed Award Premio Zayed Award  

ಪೆಟ್ರೀಷಿಯಾ ಸ್ಕಾಟ್ಲೆಂಡ್: ಮಾನವ ಭ್ರಾತೃತ್ವವು ಸಹಿಷ್ಣುತೆಯನ್ನು ಮೀರಿದ್ದು

2025ರ ಮಾನವ ಭ್ರಾತೃತ್ವಕ್ಕಾಗಿ ಜಾಯೆದ್ ಪ್ರಶಸ್ತಿಯ ಬಗ್ಗೆ ವ್ಯಾಟಿಕನ್ ಸುದ್ಧಿಯು ಕಾಮನ್‌ವೆಲ್ತ್‌ನ ಪ್ರಧಾನ ಕಾರ್ಯದರ್ಶಿ ಪೆಟ್ರೀಷಿಯಾ ಸ್ಕಾಟ್ಲೆಂಡ್ ರವರೊಂದಿಗೆ ಮಾತನಾಡುತ್ತದೆ. ಭ್ರಾತೃತ್ವ ಎಂದರೆ "ನಾವೆಲ್ಲಾ ಒಂದೇ ಕುಟುಂಬ ಎಂದು ಅರ್ಥಮಾಡಿಕೊಳ್ಳುವುದು" ಮತ್ತು "ನಮ್ಮ ಮಾನವೀಯತೆಯು ಎಲ್ಲಕ್ಕಿಂತ ಹೆಚ್ಚು ಮೂಲಭೂತವಾಗಿದೆ ಎಂದು ಅರ್ಥಮಾಡಿಕೊಳ್ಳುವುದು" ಎಂದು ಅವರು ಹೇಳುತ್ತಾರೆ.

ಜೋಸೆಫ್ ತುಲ್ಲೊಚ್ - ಅಬುಧಾಬಿ

ಪ್ರತಿ ವರ್ಷ, ಮಾನವ ಭ್ರಾತೃತ್ವಕ್ಕಾಗಿ ಜಾಯೆದ್ ಪ್ರಶಸ್ತಿಯನ್ನು "ವಿಭಜನೆಗಳನ್ನು ನಿವಾರಿಸಲು ಮತ್ತು ನೈಜ ಮಾನವ ಸಂಪರ್ಕವನ್ನು ಸೃಷ್ಟಿಸಲು ನಿಸ್ವಾರ್ಥವಾಗಿ ಮತ್ತು ದಣಿವರಿಯಿಲ್ಲದೆ ಕೆಲಸ ಮಾಡುವ" ವ್ಯಕ್ತಿಗಳಿಗೆ ಅಥವಾ ಗುಂಪುಗಳಿಗೆ ನೀಡಲಾಗುತ್ತದೆ.

ವಿಶ್ವಗುರು ಫ್ರಾನ್ಸಿಸ್ ರವರು ಮತ್ತು ಅಲ್ ಅಝರ್‌ನ ಗ್ರ್ಯಾಂಡ್ ಇಮಾಮ್ ಶೇಖ್ ಅಹ್ಮದ್ ಅಲ್-ತಯ್ಯೆಬ್ ರವರು ಮಾನವ ಭ್ರಾತೃತ್ವದ ಜಂಟಿ ದಾಖಲೆಗೆ ಸಹಿ ಹಾಕಿದ ನಂತರ 2019ರಲ್ಲಿ ಈ ಪ್ರಶಸ್ತಿಯ ಕಾರ್ಯಕ್ರಮವನ್ನು ಸ್ಥಾಪಿಸಲಾಯಿತು.

ಈ ವರ್ಷದ ಪ್ರಶಸ್ತಿಯನ್ನು ಫೆಬ್ರವರಿ 4, ಮಂಗಳವಾರ ವಿಶ್ವಸಂಸ್ಥೆಯಿಂದ ಆಚರಿಸಲ್ಪಡುವ ಅಂತರರಾಷ್ಟ್ರೀಯ ಮಾನವ ಬಂಧುತ್ವ ದಿನವಾದ ಅಬುಧಾಬಿಯಲ್ಲಿ, ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ವಿಜೇತರನ್ನು ಸ್ವತಂತ್ರ ತೀರ್ಪುಗಾರರ ತಂಡವು ಆಯ್ಕೆ ಮಾಡಿದ್ದಾರೆ, ಆ ಸದಸ್ಯರಲ್ಲಿ ಕಾಮನ್‌ವೆಲ್ತ್ ರಾಷ್ಟ್ರಗಳ ಪ್ರಧಾನ ಕಾರ್ಯದರ್ಶಿ ಪೆಟ್ರೀಷಿಯಾ ಸ್ಕಾಟ್ಲೆಂಡ್ ರವರೂ ಕೂಡ ಒಬ್ಬರು.

ಅಬುಧಾಬಿಯಲ್ಲಿ ಪತ್ರಿಕಾಗೋಷ್ಠಿಯ ಹೊರತಾಗಿ ಅವರು ವ್ಯಾಟಿಕನ್ ಸುದ್ಧಿಯ ಜೊತೆ ಮಾತನಾಡಿದರು.

ಪ್ರಶ್ನೆ: ನೀವು ಜಾಯೆದ್ ಪ್ರಶಸ್ತಿಯ ತೀರ್ಪುಗಾರರ ಭಾಗವಾಗಿದ್ದೀರಿ. ಈ ಆಯ್ಕೆಯ ಪ್ರಕ್ರಿಯೆ ಹೇಗೆ ನಡೆಯಿತು ಎಂಬುದನ್ನು ಹೇಳಬಲ್ಲಿರಾ?
ಸರಿ, ತೀರ್ಪುಗಾರರ ಸಮಿತಿಯ ಭಾಗವಾಗಲು ನನ್ನನ್ನು ಕೇಳಿಕೊಂಡದ್ದು ನನಗೆ ತುಂಬಾ ಗೌರವ ತಂದಿದೆ. ನಿಮಗೆ ತಿಳಿದಿರುವಂತೆ, ಕಾಮನ್‌ವೆಲ್ತ್ 56 ದೇಶಗಳನ್ನು ಪ್ರತಿನಿಧಿಸುತ್ತದೆ. ಅದು ಸುಮಾರು 2.7 ಶತಕೋಟಿ ಜನರು ಒಳಗೊಂಡಿದೆ, ಅವರಲ್ಲಿ 60% ರಷ್ಟು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ನಾವು ಮೌಲ್ಯಗಳಿಗೆ ನೈಜ ಒತ್ತು ನೀಡುತ್ತೇವೆ - ನಾವು ಜಾಯೆದ್ ಪ್ರಶಸ್ತಿಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಚಾರ್ಟರ್‌ಗೆ ಬದ್ಧರಾಗಿದ್ದೇವೆ.

ಮಾನವ ಭ್ರಾತೃತ್ವ, ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ನೈಜವಾಗಿ ಪ್ರದರ್ಶಿಸುವ ಮಾದರಿಗಳನ್ನು ಹುಡುಕಲು ನಾವು ಪ್ರಯತ್ನಿಸಿದ್ದರಿಂದ, ಈ ಪ್ರಶಸ್ತಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದು ಒಂದು ದೊಡ್ಡ ಗೌರವವಾಗಿದೆ.

ಪ್ರಶ್ನೆ: ಆ ಆಯ್ಕೆ ಪ್ರಕ್ರಿಯೆಯು ಎಷ್ಟು ಕಾಲ ನಡೆಯಿತು?
ಈ ಪ್ರಕ್ರಿಯೆಯು ಹಲವಾರು ತಿಂಗಳುಗಳನ್ನು ತೆಗೆದುಕೊಂಡಿತು, ಏಕೆಂದರೆ ನಾವು ಒಂದು ಸಮಿತಿಯಾಗಿ ಒಟ್ಟುಗೂಡಿದಾಗ ನಾವು ನೂರಾರು ಅರ್ಜಿಗಳನ್ನು ಪರಿಶೀಲಿಸಬೇಕಾಗಿತ್ತು ಮತ್ತು ನಂತರ ಆ ಅರ್ಜಿಗಳನ್ನು ಆಳವಾಗಿ ಅಧ್ಯಯನ ಮಾಡಬೇಕಾಗಿತ್ತು. ನಾವು ಅಭ್ಯರ್ಥಿಗಳನ್ನು ಕಿರುಪಟ್ಟಿಗಳಾಗಿ ವಿಂಗಡಿಸುವ ಪ್ರಕ್ರಿಯೆಯ ಮೂಲಕ ನಮ್ಮ ಕಾರ್ಯವನ್ನು ಮುಂದುವರೆಸಿದೆವು, ನಂತರ ವಿಜೇತರ ಒಂದು ಸಣ್ಣ ಪಟ್ಟಿಯನ್ನು ತಯಾರಿಸಿದೆವು - ಮತ್ತು ಪ್ರತಿಯೊಂದು ಅರ್ಜಿಯನ್ನು ಅರ್ಥಮಾಡಿಕೊಳ್ಳುವುದರ ಮೇಲೆ ಹೆಚ್ಚಿನ ಒತ್ತು ನೀಡಲಾಯಿತು. ಈ ಅರ್ಜಿದಾರರು ಮಾನವೀಯತೆಯ ಮೇಲೆ ಬೀರಿದ ಪರಿಣಾಮದ ಕಾರ್ಯವನ್ನು ಹಾಗೂ ಅವರ ಶ್ರಮವನ್ನು ಅಧ್ಯಯನ ಮಾಡಲು ಪ್ರಯತ್ನಿಸಲಾಯಿತು. ಅವರು ತಮ್ಮ ಜೀವನವನ್ನು ಹೇಗೆ ಉತ್ತಮ, ಶ್ರೀಮಂತ ಮತ್ತು ಹೆಚ್ಚು ಅರ್ಥಪೂರ್ಣವಾಗಿಸಿದರು? ಅದಕ್ಕೆ ಅವರು ಏನು ಮಾಡಿದರು? ಇತರರು ಅವರನ್ನು ಅನುಕರಿಸಲು ಅನುವು ಮಾಡಿಕೊಡುವ ಭರವಸೆಯ ದೀಪಗಳಾಗಿದ್ದಾರೆಯೇ?

ವ್ಯಾಟಿಕನ್ ಕೂಡ ಜಾಯೆದ್ ಪ್ರಶಸ್ತಿಯಲ್ಲಿ ಭಾಗಿಯಾಗಿದೆ, ಮತ್ತು ಕಾರ್ಡಿನಲ್ ಪೀಟರ್ ಟರ್ಕ್ಸನ್ ರವರು ಈ ವರ್ಷದ ತೀರ್ಪುಗಾರರ ಸದಸ್ಯರಾಗಿದ್ದಾರೆ. ಸ್ವತಃ ನೀವೇ ಕಥೋಲಿಕರು - ಇದೆಲ್ಲದರಲ್ಲೂ ನಿಮ್ಮ ವಿಶ್ವಾಸ ಯಾವ ಪಾತ್ರವನ್ನು ವಹಿಸಿದೆ?
ನನ್ನ ವಿಶ್ವಾಸ ನಂಬಲಾಗದಷ್ಟು ಮುಖ್ಯವಾಗಿತ್ತು, ಈ ಪ್ರಶಸ್ತಿಯನ್ನು ಮೊದಲು ಪಡೆದವರಲ್ಲಿ ಒಬ್ಬರಿದ್ದಾರೆ, ಅವರು ಪರಮಪೂಜ್ಯರಾದ ವಿಶ್ವಗುರು ಫ್ರಾನ್ಸಿಸ್ ರವರು ಮತ್ತು ಗ್ರ್ಯಾಂಡ್ ಇಮಾಮ್ ರವರು ಆ ಇಬ್ಬರು ಪವಿತ್ರ ಪುರುಷರು ನಮ್ಮ ಜಗತ್ತಿನಲ್ಲಿ ಪ್ರೀತಿಯ ಮಹತ್ವವನ್ನು ಒತ್ತಿಹೇಳಲು, ಪರಸ್ಪರ ಪ್ರೀತಿ, ತಿಳುವಳಿಕೆ, ಗೌರವ - ಮತ್ತು ಸಹಿಷ್ಣುತೆಯನ್ನು ಮೀರಿ, ಅದರ ಬಗ್ಗೆ ಒತ್ತಿಹೇಳಲು ಒಟ್ಟಾಗಿ ಬಂದಿರುವುದು ಬಹಳ ಮುಖ್ಯ.

ಮಾನವ ಭ್ರಾತೃತ್ವ ಎಂದರೆ ಸಹಿಸಿಕೊಳ್ಳುವುದಲ್ಲ; ನಾವೆಲ್ಲಾ ಒಂದೇ ಕುಟುಂಬ ಎಂದು ಅರ್ಥಮಾಡಿಕೊಳ್ಳುವುದು, ನಮ್ಮ ಮಾನವೀಯತೆಯು ಎಲ್ಲಕ್ಕಿಂತ ಹೆಚ್ಚು ಮೂಲಭೂತವಾಗಿದೆ ಎಂದು ಅರ್ಥಮಾಡಿಕೊಳ್ಳುವುದು. ಪ್ರತಿಯೊಬ್ಬ ಮನುಷ್ಯನೂ ದೇವರ ಪ್ರತಿರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದಾನೆ ಮತ್ತು ಆ ಪವಿತ್ರತೆ, ಜೀವನದ ಸೌಂದರ್ಯವನ್ನು ಸಂರಕ್ಷಿಸಬೇಕು ಮತ್ತು ನಾವು ಇರುವ ಗ್ರಹವನ್ನೂ ಸಹ ಸಂರಕ್ಷಿಸಬೇಕು ಎಂದು ನೀವು ಹೇಳುತ್ತೀರಿ.

ಹಾಗಾಗಿ, ನ್ಯಾಯಾಧೀಶರಾಗಿರುವುದು ನನಗೆ ಸಂತೋಷ ತಂದ ವಿಷಯವಾಗಿತ್ತು, ಏಕೆಂದರೆ, ಪವಿತ್ರ ವಿಶ್ವಗುರು ಫ್ರಾನ್ಸಿಸ್ ರವರು ಈ ಧರೆಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಯನ್ನು, ಅವರ ವಿಶ್ವಾಸ, ಬಣ್ಣ ಅಥವಾ ಆಕಾರವನ್ನು ಲೆಕ್ಕಿಸದೆ ನಾವು ಪ್ರೀತಿಸಬೇಕು ಎಂದು ಯಾವಾಗಲೂ ಸ್ಪಷ್ಟಪಡಿಸಿದ್ದಾರೆ. ನಮ್ಮ ಹೃದಯಗಳಲ್ಲಿ ನಿಜವಾಗಿಯೂ ಪ್ರತಿಧ್ವನಿಸುವುದು ಅವರ ಮಾನವೀಯತೆ.

ವಿಶ್ವಗುರುಗಳ ಬಗ್ಗೆ ಹೇಳುವುದಾದರೆ - ನೀವು ಇತ್ತೀಚೆಗೆ ಅವರನ್ನು ಭೇಟಿಯಾಗಿದ್ದೀರಿ ಎಂದು ನಾನು ನಂಬುತ್ತೇನೆ. ಅವರೊಂದಿಗಿನ ಭೇಟಿ ಹೇಗೆ ನಡೆಯಿತು? ನೀವು ಅವರೊಂದಿಗೆ ಯಾವ ವಿಷಯದ ಬಗ್ಗೆ ಮಾತನಾಡಿದ್ದೀರಿ?
ಇದು ಒಂದು ದೊಡ್ಡ ಗೌರವವಾಗಿತ್ತು. ಇಡೀ ನ್ಯಾಯಾಧೀಶರ ತಂಡವು ಅವರ ಪವಿತ್ರತೆಯನ್ನು ನೋಡಲು, ಪ್ರಶಸ್ತಿಯ ಬಗ್ಗೆ ಮಾತನಾಡಲು, ಅದಕ್ಕೆ ಸಂಬಂಧಿಸಿದ್ದ ಮಾಹಿತಿ, ಅಂದರೆ ನಾವು ಯಾವ ರೀತಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂಬುದರ ಬಗ್ಗೆ ಮಾತನಾಡಲು ಹೋಗಿದ್ದೆವು. ನಾವು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ಸಹ ಅವಕಾಶ ಸಿಕ್ಕಿತು! ಆದ್ದರಿಂದ ಇದು ಬಹಳ ವಿಶೇಷವಾದ ಕ್ಷಣವಾಗಿತ್ತು. ನಿರ್ದಿಷ್ಟವಾಗಿ ನನಗೆ, ಅವರ ಪವಿತ್ರತೆಯನ್ನು ಮತ್ತೆ ನೋಡಲು ಮತ್ತು ಅವರ ಬುದ್ಧಿವಂತಿಕೆಯನ್ನು ನಿಜವಾಗಿಯೂ ಅನುಭವಿಸಲು ಸಾಧ್ಯವಾಗುವ ಕ್ಷಣವಾಗಿತ್ತು.

01 ಫೆಬ್ರವರಿ 2025, 14:59