MAP

Musawah Musawah 

ಮುಸಾವಾ ಮಹಿಳಾ ಚಳವಳಿಗೆ ನಿವಾನೋ ಶಾಂತಿ ಪ್ರಶಸ್ತಿ ನಿಯೋಜನೆ

ಮುಸ್ಲಿಂ ಧರ್ಮದವರ ಪ್ರಸಂಗದಲ್ಲಿ, ಮಹಿಳೆಯರನ್ನು ಸಬಲೀಕರಣಗೊಳಿಸುವ ಬದ್ಧತೆ ಮತ್ತು ಅಂತರಧರ್ಮೀಯ ಸಂವಾದ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಬೆಳೆಸುವಲ್ಲಿನ ಪ್ರಯತ್ನಗಳನ್ನು ಗುರುತಿಸಿ, ನಿವಾನೋ ಶಾಂತಿ ಪ್ರತಿಷ್ಠಾನವು ಲಿಂಗ ಸಮಾನತೆಯ ಚಳುವಳಿ ಮುಸಾವಾವನ್ನು 42ನೇ ನಿವಾನೋ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಲಿಸಾ ಝೆಂಗಾರಿನಿ

42ನೇ ನಿವಾನೋ ಶಾಂತಿ ಪ್ರಶಸ್ತಿಯನ್ನು ಮುಸ್ಲಿಂ ಕುಟುಂಬದಲ್ಲಿ ಲಿಂಗ ನ್ಯಾಯ ಮತ್ತು ಸಮಾನತೆಗೆ ಮೀಸಲಾಗಿರುವ ಜಾಗತಿಕ ಮಹಿಳಾ ಚಳುವಳಿಯಾದ ಮುಸಾವಾಗೆ ನೀಡಲಾಗಿದೆ, ಇದು ಮುಸ್ಲಿಂ ಧರ್ಮದವರ ಪ್ರಸಂಗದಲ್ಲಿ, ಮಹಿಳೆಯರ ಮಾನವ ಹಕ್ಕುಗಳಿಗಾಗಿ ತನ್ನ ವಕಾಲತ್ತು ವಹಿಸುವುದನ್ನು ಗುರುತಿಸಿದೆ.

ಲಿಂಗ ಸಮಾನತೆಗಾಗಿ ವಕಾಲತ್ತು
ಮಂಗಳವಾರ ನಿವಾನೋ ಶಾಂತಿ ಪ್ರಶಸ್ತಿ ಸಮಿತಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಮುಸಾವಾ (ಅರೇಬಿಕ್ ಭಾಷೆಯಲ್ಲಿ "ಸಮಾನತೆ" ಎಂದರ್ಥ) ಮಾನವ ಹಕ್ಕುಗಳ ರಕ್ಷಣೆ ಮತ್ತು ಶಾಂತಿಯುತ ಸಹಬಾಳ್ವೆಗಾಗಿ ಅಂತರಧರ್ಮೀಯ ಸಂವಾದದಲ್ಲಿ ಮಹಿಳಾ ನಾಯಕತ್ವದ ಕಾರಣಕ್ಕಾಗಿ ನೀಡಿದ ಮಹತ್ವದ ಕೊಡುಗೆಗಾಗಿ ಆಯ್ಕೆಯಾಗಿದೆ, ಇದು ಪ್ರತಿಷ್ಠಿತ ಜಪಾನೀಸ್ ಶಾಂತಿ ಪ್ರಶಸ್ತಿಯ ತತ್ವಗಳಿಗೆ ಅನುಗುಣವಾಗಿದೆ.

2009ರಲ್ಲಿ ಮಲೇಷ್ಯಾದ ಜೈನಾ ಅನ್ವರ್ ಮತ್ತು ಇರಾನ್‌ನ ಜಿಬಾ ಮಿರ್-ಹೊಸೇನಿರವರು ಸ್ಥಾಪಿಸಿದ ಈ ಸಂಸ್ಥೆಯು, ಮುಸ್ಲಿಂ ರಾಷ್ಟ್ರಗಳಲ್ಲಿ ಮಹಿಳಾ ಹಕ್ಕುಗಳಿಗಾಗಿ ಸಕಾರಾತ್ಮಕ ಸುಧಾರಣೆಗಳನ್ನು ಉತ್ತೇಜಿಸುವಾಗ ಕಾನೂನುಗಳು ಮತ್ತು ಆಚರಣೆಗಳಲ್ಲಿ ಬೇರೂರಿರುವ ಲಿಂಗ ಪಕ್ಷಪಾತಗಳನ್ನು ಪ್ರಶ್ನಿಸಲು ವಕೀಲರು, ವಿದ್ವಾಂಸರು ಮತ್ತು ಕಾರ್ಯಕರ್ತರನ್ನು ಒಟ್ಟುಗೂಡಿಸುತ್ತದೆ.

ಅದರ ಸ್ಥಾಪಕರು ಆಂದೋಲನಕ್ಕೆ ಬೌದ್ಧಿಕ ಮತ್ತು ಆಧ್ಯಾತ್ಮಿಕ ಅಡಿಪಾಯವನ್ನು ಹಾಕಿದ್ದಾರೆ, ಅದರ ವಿಧಾನವು ನಂಬಿಕೆ ಮತ್ತು ಮಾನವ ಹಕ್ಕುಗಳ ತತ್ವಗಳೆರಡರಲ್ಲೂ ಬೇರೂರಿದೆ ಎಂದು ಖಚಿತಪಡಿಸಿಕೊಂಡಿದ್ದಾರೆ.

ಶಿಕ್ಷಣ ಮತ್ತು ನಾಯಕತ್ವ ಅಭಿವೃದ್ಧಿಯ ಮೇಲೆ ಗಮನಹರಿಸಿ
ಮುಸಾವಾ, ಅವರ ಕೆಲಸದ ಪ್ರಮುಖ ಅಂಶವೆಂದರೆ, ಶಿಕ್ಷಣ ಮತ್ತು ನಾಯಕತ್ವ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವುದು ಎಂದು ನಿವಾನೋ ಶಾಂತಿ ಪ್ರಶಸ್ತಿ ಸಮಿತಿಯು ಹೇಳಿಕೆಯಲ್ಲಿ ನೆನಪಿಸಿಕೊಂಡಿದೆ. ಮುಸ್ಲಿಂ ಧರ್ಮದವರ ಪ್ರಸಂಗದಲ್ಲಿ, ನಾಯಕತ್ವದ ಪಾತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ನೆಟ್‌ವರ್ಕ್ ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ.

ಭಾಗವಹಿಸುವಿಕೆ ಮತ್ತು ನೈತಿಕ ನಾಯಕತ್ವ ಮಾದರಿಗಳನ್ನು ಬೆಳೆಸುವ ಮೂಲಕ, ಈ ಆಂದೋಲನವು ಮಹಿಳೆಯರಿಗೆ, ನೀತಿಗಳ ಮೇಲೆ ಪ್ರಭಾವ ಬೀರಲು, ತಾರತಮ್ಯದ ಅಭ್ಯಾಸಗಳನ್ನು ಪ್ರಶ್ನಿಸಲು ಮತ್ತು ನಾಗರಿಕ ಹಾಗೂ ರಾಜಕೀಯ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಲು ಸಾಧನಗಳನ್ನು ಸಜ್ಜುಗೊಳಿಸುತ್ತದೆ.

ಇದಲ್ಲದೆ, ಲಿಂಗ-ನ್ಯಾಯವನ್ನು ಉತ್ತೇಜಿಸುವ ಶಾಸಕಾಂಗ ಮತ್ತು ನೀತಿ ಬದಲಾವಣೆಗಳಿಗಾಗಿ ವಕಾಲತ್ತು ವಹಿಸಲು ಮುಸಾವಾ ಕಾನೂನು ವೃತ್ತಿಪರರು, ಧಾರ್ಮಿಕ ಮುಖಂಡರು ಮತ್ತು ಸಾಮಾಜಿಕ ಸೇವಾ ಸಂಸ್ಥೆಗಳು ಸೇರಿದಂತೆ ವಿವಿಧ ಪಾಲುದಾರರೊಂದಿಗೆ ಸಹಕರಿಸುತ್ತದೆ.

ಲಿಂಗ ಆಧಾರಿತ ಹಿಂಸಾಚಾರವನ್ನು ಎದುರಿಸುವುದು
ಕಾನೂನು ವಕಾಲತ್ತು ವಹಿಸುವುದರ ಹೊರತಾಗಿ, ಮುಸಾವಾ ಕಾರ್ಯಾಗಾರಗಳು, ತರಬೇತಿ ಅವಧಿಗಳು ಮತ್ತು ಜಾಗೃತಿ ಅಭಿಯಾನಗಳನ್ನು ಆಯೋಜಿಸುವ ಮೂಲಕ ಲಿಂಗ ಆಧಾರಿತ ಹಿಂಸಾಚಾರವನ್ನು ಸಕ್ರಿಯವಾಗಿ ಎದುರಿಸುತ್ತದೆ. ಈ ಉಪಕ್ರಮಗಳು ಮಹಿಳೆಯರಿಗೆ ಹಿಂಸೆಯ ವಿರುದ್ಧ ಹೋರಾಟ ಮಾಡಲು ಅಧಿಕಾರ ನೀಡುವುದರ ಜೊತೆಗೆ ದುರ್ಬಲ ಗುಂಪುಗಳನ್ನು ರಕ್ಷಿಸಲು ಸಂಪನ್ಮೂಲಗಳನ್ನು ಸಜ್ಜುಗೊಳಿಸುತ್ತವೆ.

ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮದ ಶಕ್ತಿಯನ್ನು ಗುರುತಿಸುವ ಮುಸಾವಾ, ಯುವಜನರಿಗೆ ವಕಾಲತ್ತು ಮತ್ತು ಸಾಮಾಜಿಕ ಬದಲಾವಣೆಗಾಗಿ ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳುವ ಬಗ್ಗೆ ಶಿಕ್ಷಣ ನೀಡುತ್ತದೆ, ಇದರಿಂದಾಗಿ ತಲೆಮಾರುಗಳಾದ್ಯಂತ ತನ್ನ ಧ್ಯೇಯದ ಸುಸ್ಥಿರತೆಯನ್ನು ಖಚಿತಪಡಿಸುತ್ತದೆ.

ನಿವಾನೋ ಶಾಂತಿ ಪ್ರಶಸ್ತಿ
ಬೌದ್ಧ ಪ್ರತಿಷ್ಠಾನದ ಸಂಸ್ಥಾಪಕ ನಿಕ್ಕಿಯೋ ನಿವಾನೋರವರ ಗೌರವಾರ್ಥವಾಗಿ ಹೆಸರಿಸಲಾದ ನಿವಾನೋ ಶಾಂತಿ ಪ್ರಶಸ್ತಿಯು, ಅಂತರ-ಧರ್ಮೀಯ ಸಹಕಾರಕ್ಕೆ ಗಣನೀಯವಾಗಿ ಕೊಡುಗೆ ನೀಡುವವರನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ, ಇದು ಜಾಗತಿಕ ಶಾಂತಿಯನ್ನು ಬೆಳೆಸುತ್ತದೆ.

42ನೇ ಪ್ರಶಸ್ತಿ ಪ್ರದಾನ ಸಮಾರಂಭವು ಮೇ 14 ರಂದು ಜಪಾನ್‌ನ ಟೋಕಿಯೊದಲ್ಲಿ ನಡೆಯಲಿದೆ. ಪ್ರಶಸ್ತಿ ಪ್ರಮಾಣಪತ್ರದ ಜೊತೆಗೆ, ಮುಸಾವಾ ಪದಕ ಮತ್ತು 20 ಮಿಲಿಯನ್ ಯೆನ್ ನಗದು ಬಹುಮಾನವನ್ನು ಪಡೆಯಲಿದ್ದಾರೆ.
 

18 ಫೆಬ್ರವರಿ 2025, 11:54