MAP

TOPSHOT-JORDAN-CHRISTIANITY-CHURCH TOPSHOT-JORDAN-CHRISTIANITY-CHURCH  (AFP or licensors)

ಜೋರ್ಡಾನ್: ಭರವಸೆಯ ಜ್ಯೂಬಿಲಿ ವರ್ಷದಲ್ಲಿ ಒಂದು ಪ್ರಬಲವಾದ ಅನುಭವ

ವಿಶ್ವ ಅಂತರಧರ್ಮ ಸಾಮರಸ್ಯ ವಾರದ ಸಂದರ್ಭದಲ್ಲಿ, ಜೋರ್ಡಾನ್ನಿನ ಪ್ರವಾಸೋದ್ಯಮ ಮತ್ತು ಪ್ರಾಚೀನ ವಸ್ತುಗಳ, ಸಚಿವರು ಮತ್ತು ಪ್ರಭುಯೇಸುವಿನ ದೀಕ್ಷಾಸ್ನಾನ ತಾಣದ ನಿರ್ದೇಶಕರು ದೇಶಕ್ಕೆ ತೀರ್ಥಯಾತ್ರೆಗಳ ಮಹತ್ವವನ್ನು ವಿವರಿಸುತ್ತಾರೆ.

ಕೀಲ್ಸ್ ಗುಸ್ಸಿ

ಹಮಾಸ್ ಮತ್ತು ಇಸ್ರಯೇಲ್ ನಡುವಿನ ಕದನ ವಿರಾಮ ಒಪ್ಪಂದದ ನಂತರ, ಪವಿತ್ರ ನಾಡಿನ ಕಸ್ಟೋಸ್ ಮತ್ತು ಜೆರುಸಲೇಮ್‌ನ ಲತೀನ್ ಪಿತೃಪ್ರಧಾನರು ಮತ್ತೊಮ್ಮೆ ಪವಿತ್ರ ನಾಡಿಗೆ ತೀರ್ಥಯಾತ್ರೆ ಮಾಡುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದರು.

ಲತೀನ್ ಪಿತೃಪ್ರಧಾನ ಕಾರ್ಡಿನಲ್ ಪಿಯರ್‌ಬಟಿಸ್ಟಾ ಪಿಜ್ಜಬಲ್ಲಾರವರು ಈ ತೀರ್ಥಯಾತ್ರೆಯನ್ನು "ಸಂಪೂರ್ಣವಾಗಿ ಸುರಕ್ಷಿತ" ಎಂದು ಕರೆದರು ಮತ್ತು ಕಸ್ಟೋಸ್ ಫ್ರಾ ಫ್ರಾನ್ಸೆಸ್ಕೊ ಪ್ಯಾಟನ್ ರವರು ಜನರು "ತಮ್ಮ ವಿಶ್ವಾಸದ ಮೂಲಗಳಿಗೆ ಮರಳಲು ಯಾತ್ರಿಕರಾಗಿ ಪವಿತ್ರ ನಾಡಿಗೆ ಹೋಗಲು" ಮತ್ತು "ಪವಿತ್ರ ನಾಡಿನ ಪುಟ್ಟ ಸಮುದಾಯಕ್ಕೆ ತಮ್ಮ ನಿಕಟತೆಯನ್ನು" ವ್ಯಕ್ತಪಡಿಸಲು ಪ್ರೋತ್ಸಾಹಿಸಿದರು.

ಜೋರ್ಡಾನ್: ಕ್ರೈಸ್ತ ಧರ್ಮ ಉಗಮವಾದ ಸ್ಥಳ
ಜೋರ್ಡಾನ್ನಿನ ಪ್ರವಾಸೋದ್ಯಮ ಮತ್ತು ಪ್ರಾಚ್ಯವಸ್ತು ಸಚಿವೆ ಲೀನಾ ಅನ್ನಬ್, ಪವಿತ್ರ ನಾಡಿಗೆ ಮರಳಲು ಈ ಆಹ್ವಾನವನ್ನು ಪುನರುಚ್ಚರಿಸಿದರು. ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ, ಜೋರ್ಡಾನ್ನಿನಲ್ಲಿ "ಎಲ್ಲಿ ಕ್ರೈಸ್ತರ ಉಪಸ್ಥಿತಿ ಪ್ರಾರಂಭವಾಯಿತೋ, ಅಲ್ಲಿ ಕ್ರೈಸ್ತರು ಸೇರಿದ್ದಾರೆ" ಎಂದು ಈ ತೀರ್ಥಯಾತ್ರೆಗಳ ಮಹತ್ವವನ್ನು ಅವರು ಒತ್ತಿ ಹೇಳಿದರು. 2024 ರಲ್ಲಿ, ಇಸ್ರಯೇಲ್ ಮತ್ತು ಹಮಾಸ್ ನಡುವಿನ ಯುದ್ಧ ಸೇರಿದಂತೆ ಈ ಪ್ರದೇಶದಲ್ಲಿ ನಡೆದ ವಿವಿಧ ಘಟನೆಗಳ ಪರಿಣಾಮವಾಗಿ ದೇಶಕ್ಕೆ ಭೇಟಿ ನೀಡುವವರ ಸಂಖ್ಯೆ ಸುಮಾರು 4% ರಷ್ಟು ಕಡಿಮೆಯಾಗಿದೆ. "ಐತಿಹಾಸಿಕ, ಪ್ರಸ್ತುತ ಅಥವಾ ಭವಿಷ್ಯದ ಉಪಸ್ಥಿತಿಯಾಗಿರಲಿ, ಕ್ರೈಸ್ತರ ಉಪಸ್ಥಿತಿಯು ನಾವು ಯಾರೆಂಬುದರ, ನಮ್ಮ ಗುರುತಿನ ಅವಿಭಾಜ್ಯ ಅಂಗವಾಗಿದೆ" ಎಂದು ಅನ್ನಬ್ ರವರು ಇದನ್ನು ಆತಂಕಕಾರಿ ಎಂದು ಬಣ್ಣಿಸಿದ್ದಾರೆ.

ಜಾಗತಿಕ ಜನಸಂಖ್ಯೆಯ ಸುಮಾರು 30% ಜನರು ಕ್ರೈಸ್ತರು ಎಂದು ಗುರುತಿಸಿಕೊಳ್ಳುವುದರೊಂದಿಗೆ, ಜೋರ್ಡಾನ್‌ನೊಂದಿಗಿನ ಐತಿಹಾಸಿಕ ಸಂಬಂಧಗಳು ದೂರಗಾಮಿ ಪರಿಣಾಮವನ್ನು ಬೀರುತ್ತವೆ. ಇತ್ತೀಚೆಗೆ, ಜನವರಿ 31 ರಂದು, "ಜೋರ್ಡಾನ್: ಕ್ರೈಸ್ತ ಧರ್ಮದ ಉದಯ" ಎಂಬ ಶೀರ್ಷಿಕೆಯ ಪ್ರದರ್ಶನವು ವ್ಯಾಟಿಕನ್‌ನಲ್ಲಿ ಪ್ರಾರಂಭವಾಯಿತು, ಇದು "ಜೋರ್ಡಾನ್‌ನಲ್ಲಿ ಕ್ರೈಸ್ತ ಧರ್ಮದ ಇತಿಹಾಸ, ಪರಂಪರೆ ಮತ್ತು ಶ್ರೀಮಂತ ಸಂಪ್ರದಾಯವನ್ನು ತೀರ್ಥಯಾತ್ರೆಯ ಸ್ಥಳಗಳನ್ನು ಪ್ರದರ್ಶಿಸುವ ಮೂಲಕ" ಪ್ರಸ್ತುತಪಡಿಸುತ್ತದೆ. ಇದು ಸಂದರ್ಶಕರಿಗೆ ಈ ಪ್ರಮುಖ ಪವಿತ್ರ ಸ್ಥಳಗಳ ಸವಿಯನ್ನು ನೀಡುತ್ತದೆ, ವಿಶೇಷವಾಗಿ ಈ ಪ್ರದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗದವರಿಗೆ.

ಆದರೆ ಜ್ಯೂಬಿಲಿ ವರ್ಷದ ಆರಂಭ ಮತ್ತು ಕದನ ವಿರಾಮ ಒಪ್ಪಂದದೊಂದಿಗೆ, ಜೋರ್ಡಾನ್‌ಗೆ ಪ್ರವಾಸಗಳು ತೆರೆದುಕೊಳ್ಳುತ್ತವೆ ಮತ್ತು ಹೆಚ್ಚಿನ ಜನರು ದೇಶಕ್ಕೆ ಭೇಟಿ ನೀಡುತ್ತಾರೆ ಎಂಬ ಆಶಯವನ್ನು ಅನ್ನಬ್ ರವರು ವ್ಯಕ್ತಪಡಿಸಿದರು. ಜೋರ್ಡಾನ್ ಮತ್ತು ಅಲ್ಲಿನ ವಿವಿಧ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವುದು "ಜನರು ಬಂದು ನೋಡಬಹುದಾದ ಮತ್ತು ಈ ಸ್ಥಳಗಳಿಗೆ ಭೇಟಿ ನೀಡಿದಾಗ ಸಿಗುವ ಆಧ್ಯಾತ್ಮಿಕತೆ, ಪ್ರಶಾಂತತೆ ಮತ್ತು ಶಾಂತಿಯ ಅರ್ಥವನ್ನು ಅನುಭವಿಸಬಹುದಾದ ಪ್ರಬಲ ಅನುಭವ" ಎಂದು ಅವರು ಒತ್ತಿ ಹೇಳಿದರು.

ಜೋರ್ಡಾನ್: ಆತ್ಮಿಕ ಫಲದ ಸ್ಥಳ
ಈ ಪವಿತ್ರ ಸ್ಥಳಗಳಲ್ಲಿ ಒಂದಾದ ಜೋರ್ಡಾನ್‌ನ ಆಚೆ ಬೆಥಾನಿಯಲ್ಲಿ ಪ್ರಭುಯೇಸುವಿನ ದೀಕ್ಷಾಸ್ನಾನ ಸ್ಥಳವಾಗಿದೆ. ವರ್ಷದ ಆರಂಭದಲ್ಲಿ, ಪ್ರಭುಯೇಸುವಿನ ದೀಕ್ಷಾಸ್ನಾನ ನೂತನ ದೇವಾಲಯವನ್ನು ಉದ್ಘಾಟಿಸಲಾಯಿತು. ಇದನ್ನು ಜ್ಯೂಬಿಲಿ ವರ್ಷಕ್ಕೆ ತೀರ್ಥಯಾತ್ರೆಯ ಸ್ಥಳವೆಂದು ಹೆಸರಿಸಲಾಯಿತು, ಇಲ್ಲಿ ಜನರು ಪೂರ್ಣ ಆತ್ಮಿಕ ಫಲ ಅಥವಾ ದಂಡವಿಮುಕ್ತಿಯನ್ನು ಪಡೆಯಬಹುದು.

ಪ್ರಭುಯೇಸುವಿನ ದೀಕ್ಷಾಸ್ನಾನ ತಾಣದ ನಿರ್ದೇಶಕ ರುಸ್ತಮ್ ಮ್ಖ್ಜಿಯಾನ್ ರವರು, ಇದು ಧಾರ್ಮಿಕ ತಾಣವಾಗಿರುವುದರ ಜೊತೆಗೆ, "ಜನರು ಪ್ರೀತಿ ಮತ್ತು ಶಾಂತಿಯಿಂದ ಹೇಗೆ ಬದುಕಬಹುದು ಎಂಬುದರ ಬಗ್ಗೆ ಇಡೀ ಜಗತ್ತಿಗೆ ಒಂದು ಉದಾಹರಣೆಯಾಗುವುದು" ಎಂಬುದು ಇದರ ಉದ್ದೇಶ ಎಂದು ವಿವರಿಸಿದರು. ಅವರು ಇದನ್ನು ವಿವಿಧ ಧಾರ್ಮಿಕ ಮತ್ತು ರಾಜಕೀಯ ಹಿನ್ನೆಲೆಗಳಿಂದ ಬಂದ ಜನರು ಒಟ್ಟಿಗೆ ಸೇರಿದ ಸರ್ವಕ್ರೈಸ್ತರ ಐಕ್ಯತೆಯ (ಎಕ್ಯುಮೆನಿಸಂನ) ಸ್ಥಳವೆಂದು ಬಣ್ಣಿಸಿದರು: ಕಥೊಲಿಕರು ಮತ್ತು ಬ್ಯಾಪ್ಟಿಸ್ಟರಿಂದ ಹಿಡಿದು ಲಕ್ಸೆಂಬರ್ಗ್ ಮತ್ತು ಸ್ವೀಡನ್‌ನ ರಾಜಮನೆತನದವರೆಗೆ.

ಫೆಬ್ರವರಿ 1-7 ವಿಶ್ವ ಅಂತರ್ಧರ್ಮೀಯ ಸಾಮರಸ್ಯ ವಾರವನ್ನು ಆಚರಿಸುತ್ತದೆ, ಇದನ್ನು ಮೊದಲು ಜೋರ್ಡಾನ್ನಿನ ರಾಜ ಎರಡನೇ ಅಬ್ದುಲ್ಲಾರವರು 2010ರಲ್ಲಿ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿದರು. ನಿರ್ದೇಶಕ ಮ್ಖ್ಜಿಯಾನ್ ರವರು ವಿವರಿಸಿದಂತೆ, ಪ್ರಭುಯೇಸುವಿನ ದೀಕ್ಷಾಸ್ನಾನ ತಾಣದ ಸ್ಥಳವು ಈ ಸಂವಾದ ಮತ್ತು ಏಕತೆ ಸಂಭವಿಸಲು ಒಂದು ಸ್ಥಳವಾಗಿದೆ - ಅಲ್ಲಿ ಒಬ್ಬ ಯೆಹೂದ್ಯ, ಕ್ರೈಸ್ತ ಮತ್ತು ಮುಸ್ಲಿಂ ಧರ್ಮದ ಎಲ್ಲರೂ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ "ಮತ್ತು ಅವರು 3 ಮಂದಿ ಒಟ್ಟಿಗೆ ದೇವರಲ್ಲಿ ಮೊರೆಯಿಡುತ್ತಾರೆ."

05 ಫೆಬ್ರವರಿ 2025, 12:45