ನಾಲ್ವರು ಒತ್ತೆಯಾಳುಗಳ ಶವಗಳನ್ನು ಇಸ್ರಯಲ್‌ಗೆ ಹಸ್ತಾಂತರಿಸಿದ ಹಮಾಸ್
ನಾಥನ್ ಮಾರ್ಲಿ
ಗುರುವಾರ ಹಮಾಸ್ ರೆಡ್ ಕ್ರಾಸ್‌ಗೆ ಶವಗಳನ್ನು ಹಸ್ತಾಂತರಿಸಿದ ನಂತರ, ನಾಲ್ಕು ಇಸ್ರಯೇಲ್ ಒತ್ತೆಯಾಳುಗಳ ಶವಪೆಟ್ಟಿಗೆಯನ್ನು ಟೆಲ್ ಅವೀವ್‌ಗೆ ಬೆಂಗಾವಲು ಪಡೆಯಲ್ಲಿ ಸಾಗಿಸಲಾಯಿತು.
ಈ ಕ್ರಮವು ಮುಂದುವರೆಯುತ್ತಿರುವ ಗಾಜಾ ಕದನ ವಿರಾಮ ಒಪ್ಪಂದದ ಭಾಗವಾಗಿದೆ.
ಮೂರು ಶವಪೆಟ್ಟಿಗೆಗಳಲ್ಲಿ ತಾಯಿ ಮತ್ತು ಆಕೆಯ ಮೂವರು ಚಿಕ್ಕ ಮಕ್ಕಳ ಅವಶೇಷಗಳಿವೆ, ಅವರು ಹಲವಾರು ತಿಂಗಳ ಹಿಂದೆ ಇಸ್ರಯೇಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಆದಾಗ್ಯೂ, ಅವಶೇಷಗಳು ನಿಜಕ್ಕೂ ಇಬ್ಬರು ಮಕ್ಕಳು ಮತ್ತು ಅವರ ತಾಯಿಯದ್ದೇ ಎಂದು ದೃಢೀಕರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಅಕ್ಟೋಬರ್ 7, 2023 ರಂದು ದಕ್ಷಿಣ ಇಸ್ರಯೇಲ್‌ನಲ್ಲಿರುವ ತಮ್ಮ ಕುಟುಂಬದ ಮನೆಯಿಂದ ಪೋಷಕರೊಂದಿಗೆ ಅಪಹರಿಸಲ್ಪಟ್ಟ ಸಮಯದಲ್ಲಿ 9 ತಿಂಗಳು ಮತ್ತು 4 ವರ್ಷ ವಯಸ್ಸಿನ ಮಕ್ಕಳು ಜರ್ಮನ್ ಮತ್ತು ಇಸ್ರಯೇಲ್ ನ ಪೌರತ್ವವನ್ನು ಹೊಂದಿದ್ದರು.
ಮುಂದುವರೆಯುತ್ತಿರುವ ಕದನ ವಿರಾಮದ ಸಮಯದಲ್ಲಿ ಜೀವಂತವಾಗಿ ಬಿಡುಗಡೆಯಾದ 24 ಒತ್ತೆಯಾಳುಗಳಲ್ಲಿ ಈ ಮಹಿಳೆಯ ಪತಿ ಮತ್ತು ಮಕ್ಕಳ ತಂದೆ ಸೇರಿದ್ದಾರೆ.
ನಾಲ್ಕನೇ ಶವಪೆಟ್ಟಿಗೆಯಲ್ಲಿ ಇಸ್ರಯೇಲ್‌ನ ಮತ್ತು ಪ್ಯಾಲಸ್ತೀನಿಯನರ ನಡುವೆ ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟ 84 ವರ್ಷದ ಪುರುಷ ಒತ್ತೆಯಾಳು ಮತ್ತು ಕಾರ್ಯಕರ್ತ ಓಡೆಡ್ ಲಿಫ್‌ಶಿಟ್ಜ್ ರವರ ದೇಹವು ಇದೆ ಎಂದು ಹಮಾಸ್ ಹೇಳಿಕೊಂಡಿದೆ.
ಗಾಜಾಗೆ ಆಶ್ರಯಗಳನ್ನು ಕಳುಹಿಸಲಾಗಿದೆ
ಪ್ರತ್ಯೇಕ ಬೆಳವಣಿಗೆಯಲ್ಲಿ, ಜೋರ್ಡಾನ್ ಹ್ಯಾಶೆಮೈಟ್ ಚಾರಿಟಿ ಸಂಸ್ಥೆಯು (JHCO) ಬುಧವಾರ ಜೋರ್ಡಾನ್ ಸಶಸ್ತ್ರ ಪಡೆಗಳ ಸಹಯೋಗದೊಂದಿಗೆ ಗಾಜಾ ಗಡಿಗೆ ಪೂರ್ವನಿರ್ಮಿತ ಮನೆಗಳನ್ನು ಕಳುಹಿಸಲು ಪ್ರಾರಂಭಿಸಿದೆ ಎಂದು ಘೋಷಿಸಿತು. ಗಡಿಯಾದ್ಯಂತ ಮನೆಗಳು ಮತ್ತು ಮೂಲಸೌಕರ್ಯಗಳ ವ್ಯಾಪಕ ನಾಶದಿಂದ ಪ್ರಭಾವಿತರಾದ ಕುಟುಂಬಗಳಿಗೆ ಸುರಕ್ಷಿತ ಆಶ್ರಯವನ್ನು ಒದಗಿಸುವ ಗುರಿಯನ್ನು ಈ ಉಪಕ್ರಮ ಹೊಂದಿದೆ.
"ಗಾಜಾದಲ್ಲಿರುವ ನಮ್ಮ ಸಹೋದರ ಸಹೋದರಿಯರನ್ನು ಬೆಂಬಲಿಸುವ ನಮ್ಮ ನಿರಂತರ ಬದ್ಧತೆಯ ಭಾಗವಾಗಿ ಮೊಬೈಲ್(ಚಲಿಸುವ) ಮನೆಗಳ ರವಾನೆಯಾಗಿದೆ. ಇಲ್ಲಿನ ಸಂತ್ರಸ್ತರ ನೋವನ್ನು ನಿವಾರಿಸಲು ನಾವು ತ್ವರಿತ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಒದಗಿಸಲು ಶ್ರಮಿಸುತ್ತೇವೆ" ಎಂದು ಜೆಎಚ್‌ಸಿಒ ಪ್ರಧಾನ ಕಾರ್ಯದರ್ಶಿ ಹುಸೇನ್ ಮೊಹಮ್ಮದ್ ಅಲ್-ಶೆಬ್ಲಿರವರು ಹೇಳಿದರು.
ಅಕ್ಟೋಬರ್ 2023ರಲ್ಲಿ ಪ್ಯಾಲಸ್ತೀನಿಯ-ಇಸ್ರಯೇಲ್ ಸಂಘರ್ಷ ಪ್ರಾರಂಭವಾದಾಗಿನಿಂದ, JHCO ಗಾಜಾ ಗಡಿಗೆ ಹಲವಾರು ತಂಡಗಳ ಪರಿಹಾರ ಸಹಾಯವನ್ನು ತಲುಪಿಸಿದೆ.