ಶಾಂತಿಯ ಹೆಸರಿನಲ್ಲಿ ಸಹೋದರರು
ಜೆರುಸಲೇಮ್‌ನ ರಾಬರ್ಟೊ ಸೆಟೆರಾ
"ಅಕ್ಟೋಬರ್ 7 ರಂದು ನಾನು, ನನ್ನ ತಂದೆ ಮತ್ತು ತಾಯಿಯನ್ನು ಕಳೆದುಕೊಂಡೆ, ಆದರೆ ನನಗೆ ಒಬ್ಬ ಸಹೋದರ ಸಿಕ್ಕಿದರು" ಎಂದು ಮಾವೋಜ್ ರವರು ಹೇಳುತ್ತಾರೆ. ಆ ಭಯಾನಕ ಬೆಳಿಗ್ಗೆ, ನೆಟಿವ್ ಹ ಅಸಾರಾದಲ್ಲಿರುವ ಅವರ ಮನೆಯಲ್ಲಿ, ಮಾವೋಜ್ ರವರ ಪೋಷಕರು ಹಮಾಸ್ ಹಾರಿಸಿದ ಬೆಂಕಿಯಿಡುವ ರಾಕೆಟ್‌ನಿಂದ ಕೊಲ್ಲಲ್ಪಟ್ಟರು. ಆ ದಿನದಿಂದ, 50 ವರ್ಷ ವಯಸ್ಸಿನ ಇಸ್ರಯೇಲ್ ಪ್ರವಾಸೋದ್ಯಮ ಉದ್ಯಮಿ ಮಾವೋಜ್ ಇನಾನ್ ರವರು, ತಮ್ಮ ದುಃಖವನ್ನು ಯುದ್ಧದ ವಿರುದ್ಧ ಮತ್ತು ಎರಡೂ ಕಡೆಯ, ಜನರ ನಡುವಿನ ಶಾಂತಿಗಾಗಿ ದೃಢನಿಶ್ಚಯದ ಮತ್ತು ಧೈರ್ಯಶಾಲಿ ಬದ್ಧತೆಯನ್ನಾಗಿ ಪರಿವರ್ತಿಸಲು ಆಯ್ಕೆ ಮಾಡಿಕೊಂಡಿದ್ದಾರೆ, ಜೊತೆಗೆ "ಇತರರ" ನೋವನ್ನು ಸಹ ಗುರುತಿಸಿದ್ದಾರೆ.
ಅವನು ತನ್ನ ಹೊಸ ಸಹೋದರ ಎಂದು ಕರೆಯುವ ವ್ಯಕ್ತಿ ಅಜೀಜ್ ಅಬು ಸಾರಾರವರು, 45 ವರ್ಷದ ಪ್ಯಾಲಸ್ತೀನಿಯದ ಪ್ರವಾಸೋದ್ಯಮ ನಿರ್ವಾಹಕ, ಜೆರುಸಲೇಮ್ ಮತ್ತು ಪಶ್ಚಿಮ ದಂಡೆಯ ನಡುವಿನ ಗಡಿಯಲ್ಲಿರುವ ಬೆಥನಿ ಎಂದು ಕರೆಯಲ್ಪಡುವ ಅಲ್-ಐಜಾರಿಯಾ ಪಟ್ಟಣದಿಂದ ಬಂದವನು. ಅಜೀಜ್ ಕೇವಲ ಒಂಬತ್ತು ವರ್ಷದವನಿದ್ದಾಗ, ಅವನ 18 ವರ್ಷದ ಸಹೋದರ ತೈಸೀರ್ ನನ್ನು ಇಸ್ರಯೇಲ್ ಸೈನಿಕರು, ಇಸ್ರಯೇಲ್ ಪರವಾನಗಿ ಫಲಕಗಳನ್ನು ಹೊಂದಿರುವ ವಾಹನಗಳ ಮೇಲೆ ಕಲ್ಲು ಎಸೆದ ಶಂಕೆಯ ಮೇಲೆ ಬಂಧಿಸಿದರು. ತೈಸೀರ್ ಸುಮಾರು ಒಂದು ವರ್ಷ ಇಸ್ರಯೇಲ್ ಜೈಲಿನಲ್ಲಿದ್ದನು. ಕೊನೆಗೂ ಬಿಡುಗಡೆಯಾದ ನಂತರ, ಬಂಧನದ ಸಮಯದಲ್ಲಿ ಅನುಭವಿಸಿದ ಚಿತ್ರಹಿಂಸೆಯಿಂದ ಉಂಟಾದ ಆಂತರಿಕ ಗಾಯಗಳಿಂದಾಗಿ ಕೆಲವೇ ವಾರಗಳ ನಂತರ ಆತನು ನಿಧನನಾದನು.
ಅಜೀಜ್‌ಗೂ ಸಹ, ಈ ನೋವಿತ್ತು, ಇದು ಎರಡೂ ಕಡೆಯ ಜನರ ನಡುವೆ ಶಾಂತಿಗಾಗಿ ಅಚಲವಾದ ಬದ್ಧತೆಗೆ ಕಾರಣವಾಯಿತು. ಮಾವೋಜ್ ರವರು ಎಲ್’ಒಸ್ಸೆರ್ವಟೋರ್ ರೊಮಾನೋಗೆ ಹೇಳುತ್ತಾರೆ, "ಅಕ್ಟೋಬರ್ 7 ರಂದು, ನನ್ನ ಕುಟುಂಬವನ್ನು ಅಪ್ಪಳಿಸಿದ ದುರಂತದ ಬಗ್ಗೆ ತಿಳಿಸಿದ ನಂತರ, ನನಗೆ ಸಂತಾಪ ಮತ್ತು ಹೃತ್ಪೂರ್ವಕ ಬೆಂಬಲದ ಮೊದಲ ಕರೆ ಅಜೀಜ್ ರವರಿಂದ ಬಂದಿತು. ಶಾಂತಿಗಾಗಿ ನಮ್ಮ ಹೋರಾಟವು ನಮ್ಮನ್ನು ರಕ್ತ ಸಂಬಂಧಗಳಿಗಿಂತ ಹೆಚ್ಚಾಗಿ ಸಹೋದರರನ್ನಾಗಿ ಮಾಡಿದೆ.
ಆದಾಗ್ಯೂ, ಮಾವೋಜ್ ರವರು ಮತ್ತು ಅಜೀಜ್ ರವರನ್ನು ಶಾಂತಿಯ ಬಂಧಕ್ಕೆ ಕರೆದೊಯ್ದ ಪ್ರಯಾಣವು ಅಕ್ಟೋಬರ್ 7 ರಂದು ಪ್ರಾರಂಭವಾಗಲಿಲ್ಲ. ಪ್ರವಾಸೋದ್ಯಮ ಉದ್ಯಮಿಯಾಗಿ ಅವರ ಯಶಸ್ವಿ ವೃತ್ತಿಜೀವನದಲ್ಲಿ, ಮಾವೋಜ್ ರವರು ಆಕ್ರಮಿತ ಪ್ಯಾಲಸ್ತೀನಿಯದ ಪ್ರದೇಶಗಳನ್ನು ಒಳಗೊಂಡಂತೆ ಪ್ರಯಾಣ ಯೋಜನೆಗಳನ್ನು ಆಯೋಜಿಸಿದ್ದರು. ಅವರು ತಮ್ಮ ಪ್ರವಾಸಗಳ ಆಯೋಜನೆಯ ಸ್ವಂತಿಕೆಗೆ ಹೆಸರುವಾಸಿಯಾಗಿದ್ದರು ಮತ್ತು ಈ ಕಾರಣದಿಂದಾಗಿ, ಇಸ್ರಯೇಲ್ ವಲಯಗಳಲ್ಲಿ ಟೀಕೆಗಳನ್ನು ಎದುರಿಸಬೇಕಾಯಿತು. ಅಜೀಜ್ ರವರು, ತಮ್ಮ ಸಹೋದರನ ಮರಣದ ನಂತರ, ಗುರುತಿನ ಚೀಟಿ ಪಡೆಯಲು ಜೆರುಸಲೇಮ್‌ಗೆ ತೆರಳಿದರು. ಅಲ್ಲಿ ಅವರು ಫತಾಹ್‌ನ ಯುವ ಚಳವಳಿಯನ್ನು ಸೇರಿದರು ಮತ್ತು ಚಿಕ್ಕ ವಯಸ್ಸಿನಿಂದಲೇ ಆಳವಾದ ಕೋಪ ಮತ್ತು ಹತಾಶೆಯಿಂದ ಉತ್ತೇಜಿತರಾದ ಇಸ್ರಯೇಲ್ ಆಕ್ರಮಣಕಾರರ ವಿರುದ್ಧದ ಕಠಿಣ ಬರಹಗಳಿಗೆ ಹೆಸರುವಾಸಿಯಾದರು. ಈ ಬರಹಗಳು ಅವರ ಬಂಧನ ಮತ್ತು ಆರು ತಿಂಗಳ ಜೈಲು ಶಿಕ್ಷೆಗೆ ಕಾರಣವಾಯಿತು. ಆದಾಗ್ಯೂ, ಜೆರುಸಲೇಮ್‌ನಲ್ಲಿ ವಾಸಿಸುವುದರಿಂದ ಅವರಿಗೆ ಇಸ್ರಯೇಲ್ ಸಮಾಜವನ್ನು ನೇರವಾಗಿ ಅನುಭವಿಸಲು, ಹೀಬ್ರೂ ಕಲಿಯಲು ಮತ್ತು ಕ್ರೈಸ್ತ ಧರ್ಮದ ಕಾಲೇಜಿಗೆ ಸೇರಲು ಅವಕಾಶ ಸಿಕ್ಕಿತು - ಈ ಅನುಭವಗಳು ಸಂಘರ್ಷವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ಪ್ರಾರಂಭಿಸಲು ಅವರಿಗೆ ಸಹಾಯ ಮಾಡಿದವು.
ನಂತರ ಅವರು ಪೋಷಕರ ವೃತ್ತ ಕುಟುಂಬ ವೇದಿಕೆಯ ಸಂಘವನ್ನು ಸೇರಿದರು, ಇದು ಸಂಘರ್ಷದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಇಸ್ರಯೇಲ್ ಮತ್ತು ಪ್ಯಾಲಸ್ತೀನಿಯದ ಕುಟುಂಬಗಳ ಸಂಘವಾಗಿದ್ದು, ಸೇಡು ತೀರಿಸಿಕೊಳ್ಳುವ ಬದಲು ಸಮನ್ವಯ, ಶಾಂತಿ ಮತ್ತು ಸಹಿಷ್ಣುತೆಯನ್ನು ಬಯಸುವ ಸಂಘವಾಗಿತ್ತು.
ಅಕ್ಟೋಬರ್ 7 ರಿಂದ, ಮಾವೋಜ್ ರವರ ಮತ್ತು ಅಜೀಜ್ ರವರ ಶಾಂತಿ ಕ್ರಿಯಾಶೀಲತೆಯು ಅವರ ಜೀವನದಲ್ಲಿ ಕೇಂದ್ರ ಆದ್ಯತೆಯಾಗಿದೆ ಮತ್ತು ಅವರು ತಮ್ಮ ಸಂದೇಶವನ್ನು ಹಂಚಿಕೊಳ್ಳಲು ವಿಶ್ವಾದಾದ್ಯಂತ ಪ್ರಯಾಣಿಸಿದ್ದಾರೆ. ಮೇ 18 ರಂದು, ಅವರು ವೆರೋನಾದಲ್ಲಿ ವಿಶ್ವಗುರು ಫ್ರಾನ್ಸಿಸ್ ರವರನ್ನು ಭೇಟಿಯಾದರು.
"ಪವಿತ್ರ ತಂದೆಯ ಉತ್ತೇಜನಕಾರಿ ಮಾತುಗಳ ಮೂಲಕ, ಶಾಂತಿಗಾಗಿ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದ ಮತ್ತು ಶ್ರೀಮಂತಗೊಳಿಸಿದ ಸಭೆ ಇದಾಗಿತ್ತು. ವಿಶ್ವಗುರು ಫ್ರಾನ್ಸಿಸ್ ರವರು ನಮ್ಮನ್ನು ಆಳವಾಗಿ ಪ್ರೇರೇಪಿಸಿದರು" ಎಂದು ಅಜೀಜ್ ರವರು ಹೇಳುತ್ತಾರೆ. ಅಸ್ತಿತ್ವದಲ್ಲಿರುವ ವಿಭಜನೆಗಳನ್ನು ಉಲ್ಬಣಗೊಳಿಸುವ ಧ್ರುವೀಕರಣ ಮನಸ್ಥಿತಿಯಿಂದ ಛಿದ್ರಗೊಂಡ ಜಗತ್ತಿನಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರ ಮಾತುಗಳು ಸಂಭಾಷಣೆ, ಗೌರವ ಮತ್ತು ಶಾಂತಿಯತ್ತ ಸಾಗುವ ಮಾತುಗಳಾಗಿ ಎದ್ದು ಕಾಣುತ್ತವೆ. ಹೊಸ ಮಾನವತಾವಾದಕ್ಕಾಗಿ ಪ್ರತಿಪಾದಿಸುವ ಏಕೈಕ ವಿಶ್ವ ನಾಯಕ ವಿಶ್ವಗುರು ಫ್ರಾನ್ಸಿಸ್ ರವರೇ " ಎಂದು ಮಾವೋಜ್ ರವರು ಹೇಳುತ್ತಾರೆ.
"ಈ ಸಂದರ್ಶನದ ಮೂಲಕ ಅವರು ಬೇಗನೆ ಗುಣಮುಖರಾಗಲಿ ಎಂಬ ನಮ್ಮ ಹಾರೈಕೆಗಳನ್ನು ಸ್ವೀಕರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ನಾವಿಬ್ಬರೂ ಪ್ರತಿದಿನ ಅವರಿಗಾಗಿ ಪ್ರಾರ್ಥಿಸುತ್ತೇವೆ ಎಂದು ಅವರಿಗೆ ತಿಳಿಯಲಿ" ಎಂದು ಅವರು ಒಟ್ಟಾಗಿ ಹೇಳುತ್ತಾರೆ.