2025ರ ಮಾನವ ಭ್ರಾತೃತ್ವಕ್ಕಾಗಿ ಜಾಯೆದ್ ಪ್ರಶಸ್ತಿ ವಿಜೇತರ ಘೋಷಣೆ
ಜೋಸೆಫ್ ತುಲ್ಲೊಚ್ - ಅಬುಧಾಬಿ
2025ರಲ್ಲಿ ಮಾನವ ಭ್ರಾತೃತ್ವಕ್ಕಾಗಿ ಜಾಯೆದ್ ಪ್ರಶಸ್ತಿ ವಿಜೇತರು ಎನ್‌ಜಿಒ ವರ್ಲ್ಡ್ ಸೆಂಟ್ರಲ್ ಕಿಚನ್, ಬಾರ್ಬಡೋಸ್‌ನ ಪ್ರಧಾನ ಮಂತ್ರಿ ಮಿಯಾ ಮಾಟ್ಲಿರವರು ಮತ್ತು 15 ವರ್ಷದ ಇಥಿಯೋಪಿಯನ್-ಅಮೇರಿಕನ್ ಸಂಶೋಧಕ ಹೆಮನ್ ಬೆಕೆಲೆರವರು ಆಗಿರುತ್ತಾರೆ.
ಈ ಪ್ರಶಸ್ತಿಯನ್ನು ಫೆಬ್ರವರಿ 4, ಮಂಗಳವಾರ ವಿಶ್ವಸಂಸ್ಥೆಯಿಂದ ಗುರುತಿಸಲ್ಪಟ್ಟ ಅಂತರರಾಷ್ಟ್ರೀಯ ಮಾನವ ಭ್ರಾತೃತ್ವ ದಿನವಾದ ಅಬುಧಾಬಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ವಿಶ್ವಗುರು ಫ್ರಾನ್ಸಿಸ್ ರವರು ಮತ್ತು ಅಲ್-ಅಝರ್‌ನ ಗ್ರ್ಯಾಂಡ್ ಇಮಾಮ್ ಅಹ್ಮದ್ ಎಲ್-ತಯ್ಯೆಬ್ ರವರು ಮಾನವ ಭ್ರಾತೃತ್ವದ ಜಂಟಿ ಘೋಷಣೆಗೆ ಸಹಿ ಹಾಕಿದ ನಂತರ, ಈ ಪ್ರಶಸ್ತಿಯನ್ನು 2019ರಲ್ಲಿ ಸ್ಥಾಪಿಸಲಾಯಿತು.
ಈಗ ಆರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಯೋಜನೆಯ ಕಾರ್ಯಕ್ರಮವು, ಈ ಪ್ರಶಸ್ತಿಯನ್ನು ವಾರ್ಷಿಕವಾಗಿ ಪ್ರಪಂದ ಯಾವ ಮೂಲೆಯಿಂದಲಾದರೂ "ವಿಭಜನೆಗಳನ್ನು ನಿವಾರಿಸಲು ಮತ್ತು ನಿಜವಾದ ಮಾನವ ಸಂಪರ್ಕವನ್ನು ಸೃಷ್ಟಿಸಲು ನಿಸ್ವಾರ್ಥವಾಗಿ ಮತ್ತು ದಣಿವರಿಯಿಲ್ಲದೆ ಕೆಲಸ ಮಾಡುವ" ವ್ಯಕ್ತಿಗಳು ಅಥವಾ ಗುಂಪುಗಳಿಗೆ ನೀಡಲಾಗುತ್ತದೆ.
ಸನ್ಮಾನಿತರು
ಈ ವರ್ಷ, ಮಾನವೀಯ ಬಿಕ್ಕಟ್ಟುಗಳಿಂದ ಬಳಲುತ್ತಿರುವ ಸಮುದಾಯಗಳಿಗೆ ಆಹಾರ ನೆರವು ನೀಡುವ ಕಾರ್ಯಕ್ಕಾಗಿ ಪರಿಹಾರ ಸಂಸ್ಥೆ ವರ್ಲ್ಡ್ ಸೆಂಟ್ರಲ್ ಕಿಚನ್ ನ್ನು ಗುರುತಿಸಲಾಗುವುದು. 2010ರಲ್ಲಿ ಸ್ಥಾಪನೆಯಾದಾಗಿನಿಂದ, ಸಂಸ್ಥೆಯು 30 ವಿವಿಧ ದೇಶಗಳಲ್ಲಿ 300 ಮಿಲಿಯನ್‌ಗಿಂತಲೂ ಹೆಚ್ಚು ಊಟಗಳನ್ನು ಒದಗಿಸಿದೆ - ಇದರಲ್ಲಿ ಅಕ್ಟೋಬರ್ 2023ರಲ್ಲಿ ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದಾಗಿನಿಂದ ಗಾಜಾದಲ್ಲಿರುವ ಪ್ಯಾಲೆಸ್ತೀನಿಯರಿಗೆ 100 ಮಿಲಿಯನ್ ಊಟಗಳು ಸೇರಿವೆ.
ಬಾರ್ಬಡೋಸ್‌ನ ಪ್ರಧಾನ ಮಂತ್ರಿಯಾಗಿ ಹವಾಮಾನ ಬದಲಾವಣೆಯ ವಿರುದ್ಧ ತೆಗೆದುಕೊಂಡ ನಿರ್ಣಾಯಕ ಕ್ರಮಕ್ಕಾಗಿ ಮಿಯಾ ಮಾಟ್ಲಿರವರನ್ನು ಗುರುತಿಸಲಾಗುವುದು. 2022 ರಲ್ಲಿ, ಅವರು ʻಬ್ರಿಡ್ಜ್‌ಟೌನ್ ಇನಿಶಿಯೇಟಿವ್ʼನ್ನು ಪ್ರಾರಂಭಿಸಿದರು, ಇದು ಹವಾಮಾನ ಪರಿಗಣನೆಗಳನ್ನು ಪರಿಗಣಿಸಲು "ಅಂತರರಾಷ್ಟ್ರೀಯ ಹಣಕಾಸು ವಾಸ್ತುಶಿಲ್ಪವನ್ನು ಸುಧಾರಿಸಲು ತುರ್ತು ಮತ್ತು ನಿರ್ಣಾಯಕ ಕ್ರಮ" ಕ್ಕೆ ಕರೆ ನೀಡಿತು. 2030ರ ವೇಳೆಗೆ 100% ನವೀಕರಿಸಬಹುದಾದ ಶಕ್ತಿಯನ್ನು ಸಾಧಿಸಲು ಅವರು ಬಾರ್ಬಡೋಸ್‌ಗೆ ಬದ್ಧರಾಗಿದ್ದಾರೆ.
ಅಂತಿಮ ಪ್ರಶಸ್ತಿ ವಿಜೇತರು ಹದಿನೈದು ವರ್ಷದ ಇಥಿಯೋಪಿಯದ-ಅಮೇರಿಕದ ಸಂಶೋಧಕ ಹೆಮನ್ ಬೆಕೆಲೆರವರು ಆಗಿರುತ್ತಾರೆ, ಅವರು ಆರಂಭಿಕ ಹಂತದ ಚರ್ಮದ ಕ್ಯಾನ್ಸರ್ ನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ವಿನ್ಯಾಸಗೊಳಿಸಲಾದ ವೆಚ್ಚ-ಪರಿಣಾಮಕಾರಿ ಸಾಬೂನನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಉತ್ಪನ್ನವನ್ನು ಪ್ರಸ್ತುತ ಅಮೇರಿಕದ ಜಾನ್ಸ್ ಹಾಪ್ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತಿದೆ.
‘ಶಾಂತಿಯ ರಾಯಭಾರಿಗಳು’
ಪ್ರಶಸ್ತಿ ವಿಜೇತರನ್ನು ಸ್ವತಂತ್ರ ತೀರ್ಪುಗಾರರು ಆಯ್ಕೆ ಮಾಡುತ್ತಾರೆ, ಅವರ ಸಂಯೋಜನೆಯು ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಅದರ ಸದಸ್ಯರಲ್ಲಿ, ವಿಶ್ವಗುರುವು ಆಯ್ಕೆ ಮಾಡಿದ ಒಬ್ಬ ವ್ಯಕ್ತಿ, ಅಲ್-ಅಝರ್‌ನ ಗ್ರ್ಯಾಂಡ್ ಇಮಾಮ್ ಆಯ್ಕೆ ಮಾಡಿದ ಒಬ್ಬ ವ್ಯಕ್ತಿ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿರವರು ಆಯ್ಕೆ ಮಾಡಿದ ಒಬ್ಬ ವ್ಯಕ್ತಿ ಯಾವಾಗಲೂ ಇರುತ್ತಾರೆ.
ಶುಕ್ರವಾರ ಅಬುಧಬಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಜೇತರನ್ನು ಘೋಷಿಸಿದಾಗ ತೀರ್ಪುಗಾರರ ಇಬ್ಬರು ಸದಸ್ಯರು - ಕಾಮನ್‌ವೆಲ್ತ್‌ನ ಪ್ರಧಾನ ಕಾರ್ಯದರ್ಶಿ ಬ್ಯಾರನೆಸ್ ಪೆಟ್ರೀಷಿಯಾ ಸ್ಕಾಟ್ಲೆಂಡ್ ರವರು ಮತ್ತು ಮಾನವ ಭ್ರಾತೃತ್ವ ಪ್ರಶಸ್ತಿಯ ಪ್ರಧಾನ ಕಾರ್ಯದರ್ಶಿ ನ್ಯಾಯಾಧೀಶ ಮೊಹಮ್ಮದ್ ಅಬ್ದೆಲ್ಸಲಾಮ್ ರವರು ಉಪಸ್ಥಿತರಿದ್ದರು.
ನಾಮನಿರ್ದೇಶಿತರ ಗುಣಮಟ್ಟವನ್ನು ಗಮನಿಸಿದರೆ ವಿಜೇತರನ್ನು ಆಯ್ಕೆ ಮಾಡುವುದು "ಅತ್ಯಂತ ಕಷ್ಟಕರವಾಗಿತ್ತು" ಎಂದು ಬ್ಯಾರನೆಸ್ ಸ್ಕಾಟ್ಲೆಂಡ್ ರವರು ಪತ್ರಕರ್ತರಿಗೆ ತಿಳಿಸಿದರು. ಅಂತಿಮವಾಗಿ ಗೌರವಕ್ಕೆ ಪಾತ್ರರಾದವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು, ಏಕೆಂದರೆ ಅವರು "ಬೆಳಕು ಮತ್ತು ಭರವಸೆಯ ದಾರಿದೀಪಗಳು ಹಾಗೂ ಮಾನವ ಭ್ರಾತೃತ್ವದ ನಿಜವಾದ ಮಾದರಿಗಳಾಗಿದ್ದಾರೆ".
ಈ ವರ್ಷದ ಗೌರವಕ್ಕೆ ಪಾತ್ರರಾದವರು ಕೇವಲ "ಮಾನವ ಭ್ರಾತೃತ್ವದ ಹೊಸ ರಾಯಭಾರಿಗಳು" ಮಾತ್ರವಲ್ಲ, "ಶಾಂತಿಗಾಗಿ ಹೊಸ ರಾಯಭಾರಿಗಳು ಮತ್ತು ಭರವಸೆಯ ತಯಾರಕರು, ಅವರ ಅವಶ್ಯಕತೆ ನಮಗಿದೆ" ಎಂದು ನ್ಯಾಯಾಧೀಶ ಅಬ್ದೆಲ್ಸಲಾಮ್ ರವರು ಪತ್ರಕರ್ತರಿಗೆ ತಿಳಿಸಿದರು.