ಮರಿಯಮ್ಮನವರ ಬಿಸಿಯೂಟ: ಭರವಸೆಯ ಹಂಚಿಕೆ, ಒಂದೊತ್ತಿಗೆ ಒಂದೊಂದೇ ಬಟ್ಟಲು
ಫ್ರಾನ್ಸೆಸ್ಕಾ ಮೆರ್ಲೊ
ನಾವು ವ್ಯತಿರಿಕ್ತ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಆಚರಿಸಲು ಅನೇಕ ವಿಷಯಗಳಿವೆ, ಆದರೆ ಐದು ವರ್ಷದೊಳಗಿನ 148 ಮಿಲಿಯನ್ ಮಕ್ಕಳು ಅಪೌಷ್ಟಿಕತೆಯಿಂದಾಗಿ ಕುಂಠಿತಗೊಳ್ಳುತ್ತಿದ್ದಾರೆ, ಈ ಕಳವಳಕ್ಕೂ ಹಲವು ಕಾರಣಗಳಿವೆ.
ನಮ್ಮ ಜಗತ್ತಿನಲ್ಲಿ, ಈ ಜಾಗತಿಕ ಹಸಿವನ್ನು ಹೊರತುಪಡಿಸಿಯೂ, ಪ್ರತಿ ವರ್ಷ 931 ಮಿಲಿಯನ್ ಟನ್ ಆಹಾರ ವ್ಯರ್ಥವಾಗುತ್ತಿದೆ.
ಇದರ ನಡುವೆ, ಮರಿಯಮ್ಮನವರ ಬಿಸಿಯೂಟದಂತಹ ಸಂಸ್ಥೆಗಳು ಮಕ್ಕಳಿಗೆ ಸರಳವಾಗಿ ಆಹಾರ ನೀಡುವ ಮೂಲಕ ಜಗತ್ತಿನ ಅತ್ಯಂತ ಮರೆತುಹೋದ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಭರವಸೆಯನ್ನು ತರುತ್ತವೆ.
ಚೆನ್ನಾಗಿ ಕೆಲಸ ಮಾಡುವುದು
“ನಾವು ಮಕ್ಕಳಿಗೆ ಆಹಾರ ನೀಡುತ್ತೇವೆ. ಆ ಕಾರ್ಯವನ್ನು ಮಾತ್ರ ನಾವು ಮಾಡುತ್ತಿದ್ದೇವೆ ಮತ್ತು ನಾವು ಮಕ್ಕಳಿಗೆ ಆಹಾರ ನೀಡುವ ಈ ಕಾರ್ಯವನ್ನು ನಾವು ತುಂಬಾ ಚೆನ್ನಾಗಿ ಮಾಡುತ್ತಿದ್ದೇವೆ" ಎಂದು ಮರಿಯಮ್ಮನವರ ಬಿಸಿಯೂಟದ ಸಂಸ್ಥೆಯ ಅಂತರರಾಷ್ಟ್ರೀಯ ಮಾಧ್ಯಮ ವ್ಯವಸ್ಥಾಪಕಿ ಪಲೋಮಾ ಗಾರ್ಸಿಯಾ ಒವೆಜೆರೊರವರು ಹೇಳುತ್ತಾರೆ.
ಇದು ನಿಜ. ಅವರು ಅದನ್ನು ಅತ್ಯಂತ ಚೆನ್ನಾಗಿ ಮಾಡುತ್ತಾರೆ. ಮರಿಯಮ್ಮನವರ ಬಿಸಿಯೂಟದ ಸಂಸ್ಥೆ ಆಫ್ರಿಕಾ, ಏಷ್ಯಾ, ಲತೀನ್ ಅಮೆರಿಕ ಮತ್ತು ಕೆರಿಬಿಯನ್ ಸೇರಿದಂತೆ ಪ್ರಪಂದಾದ್ಯಂತ 16 ದೇಶಗಳಲ್ಲಿ ಈ ಸೌಕರ್ಯವು ಲಭ್ಯವಿದೆ.
ಮಲಾವಿ ಮತ್ತು ಲೈಬೀರಿಯಾದಲ್ಲಿ ಶಾಲಾ ಮಕ್ಕಳಿಗೆ ಆಹಾರ ನೀಡುವುದರಿಂದ ಹಿಡಿದು ದಕ್ಷಿಣ ಸುಡಾನ್‌ನ ದೂರದ ಹಳ್ಳಿಗಳನ್ನು ತಲುಪುವವರೆಗೆ, ಮರಿಯಮ್ಮನವರ ಬಿಸಿಯೂಟದ ಸಂಸ್ಥೆ ಹೆಚ್ಚು ಅಗತ್ಯವಿರುವ ಸ್ಥಳಗಳಿಗೂ ತಮ್ಮ ನೆರವಿನ ಹಸ್ತವನ್ನು ಚಾಚಿದೆ. ಸಂಸ್ಥೆಯು ಸುಮಾರು 2.5 ಮಿಲಿಯನ್ ಮಕ್ಕಳಿಗೆ ಆಹಾರವನ್ನು ನೀಡುತ್ತದೆ, ಆದರೆ ಅಗತ್ಯತೆ ಅಧಿಕ ಪ್ರಮಾಣದಲ್ಲಿದೆ ಮತ್ತು ಯಾವಾಗಲೂ ಬೇರೆ, ಬೇರೆ, ಸ್ಥಳಗಳಲ್ಲಿ, ಪ್ರದೇಶಗಳಲ್ಲಿ ಆಹಾರಕ್ಕಾಗಿ ಕಾಯುತ್ತಿರುವ ಇನ್ನೊಂದು ಮಗು ಊಟಕ್ಕಾಗಿ ಕಾಯುತ್ತಾ ಇರುತ್ತದೆ ಎಂದು ಹಾಗೂ ಆಹಾರವಿಲ್ಲದೆ ನರಳುತ್ತಿರುವ ಮಕ್ಕಳ ಅಪೌಷ್ಟಿಕತೆಯ ಕುರಿತು ಗಾರ್ಸಿಯಾ ಒವೆಜೆರೊರವರು ಒತ್ತಿಹೇಳಿದರು.
"ವಿಶ್ವದಾದ್ಯಂತ ಎಪ್ಪತ್ತು ಮಿಲಿಯನ್ ಮಕ್ಕಳು ಊಟ ಮಾಡಲು ಅಥವಾ ಓದಲು ಸಾಧ್ಯವಾಗುತ್ತಿಲ್ಲ," ಎಂದು ಅವರು ಹೇಳುತ್ತಾರೆ, "ಆದ್ದರಿಂದ ನಮಗೆ ಮಾಡಲು ಬಹಳಷ್ಟಿದೆ ಮತ್ತು ಅವರು ಹಸಿದಿರುವುದರಿಂದ ನಾವು ಸೇವೆ ಮಾಡಲು ಆತುರರಾಗಿದ್ದೇವೆ."
ಯಾವುದೇ ನೆಪವಿಲ್ಲ
ಒಂದು ಮಗುವಿಗೆ ವರ್ಷಪೂರ್ತಿ ಹಾಲುಣಿಸಲು ಕೇವಲ 22 ಯುರೋಗಳಷ್ಟು ವೆಚ್ಚವಾಗುತ್ತದೆ (ಅಂದರೆ ರೂ. ೧,೯೫೬.೧೩ ಪೈಸೆ) ಎಂದು ಗಾರ್ಸಿಯಾ ಒವೆಜೆರೊ ಹೇಳಿದಾಗ ನಮ್ಮ ಆತ್ಮಸಾಕ್ಷಿಯನ್ನು ಪರೀಕ್ಷಿಸಲು ನಮ್ಮನ್ನು ಪ್ರೇರೇಪಿಸುತ್ತದೆ. "ಅದು ದಿನಕ್ಕೆ 10 ಸೆಂಟ್ಸ್," ಅವರು ಒತ್ತಿ ಹೇಳುತ್ತಾರೆ.
ಆದ್ದರಿಂದ, ಜಗತ್ತಿನಲ್ಲಿ ಸಾಕಷ್ಟು ಹಣವಿದೆ ಮತ್ತು ಸಾಕಷ್ಟು ಆಹಾರವಿದೆ. "ಹಸಿವನ್ನು ಈಗಲೇ ನೀಗಿಸಬಹುದು" ಎಂದು ಅವರು ಹೇಳುತ್ತಾರೆ.
ಮರಿಯಮ್ಮನವರ ಬಿಸಿಯೂಟವು ವಾಸ್ತವವಾಗಿ, ಈ ಜಾಗತಿಕ ಸಮಸ್ಯೆಗೆ ಪ್ರಾಯೋಗಿಕ ಪರಿಹಾರಗಳನ್ನು ನೀಡುವ ಮೂಲಕ ಹಸಿವನ್ನು ನೀಗಿಸುತ್ತಿದೆ.
ಸ್ಥಳೀಯ ಸಮುದಾಯಗಳ ಸಹಾಯವಿಲ್ಲದೆ ಏನೂ ಸಾಧ್ಯವಿಲ್ಲ
ಸ್ಥಳೀಯ ಆಹಾರ ಮೂಲಗಳು ಮತ್ತು ಸ್ವಯಂಸೇವಕರ ಮೇಲೆ ಕೇಂದ್ರೀಕರಿಸುವ ಮೂಲಕ, ಸಂಸ್ಥೆಯು ಸಮುದಾಯಗಳು ತಮ್ಮದೇ ಆದ ಅಭಿವೃದ್ಧಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅಧಿಕಾರ ನೀಡುತ್ತದೆ ಎಂದು ಗಾರ್ಸಿಯಾ ಒವೆಜೆರೊರವರು ವಿವರಿಸುತ್ತಾರೆ.
"ನಾವು ಸಹಾಯ ಮಾಡಿ, ಜನರು ತಮ್ಮ ಕೆಲಸಗಳನ್ನು ತಾವಾಗಿಯೇ ಮಾಡಲು ಸಾಧ್ಯವಾದಾಗ ಅಥವಾ ಸಾಮರ್ಥ್ಯವುಳ್ಳವರಾದಾಗ ಅಲ್ಲಿನ ನಮ್ಮ ಸೇವೆಯನ್ನು ಬಿಡುತ್ತೇವೆ. ಆದರೆ ನಾವು ಒಂದು ಸ್ಥಳ, ಶಾಲೆ, ಸಮುದಾಯ, ದೇಶವನ್ನು ತಲುಪಿದ ನಂತರ, ಮಕ್ಕಳಿಗೆ ನಮ್ಮ ಅಗತ್ಯವಿಲ್ಲದವರೆಗೂ ಆಹಾರವನ್ನು ನೀಡುತ್ತೇವೆ ಎಂಬ ಭರವಸೆಯನ್ನು ಉಳಿಸಿಕೊಳ್ಳುವುದು ನಮಗೆ ಬಹಳ ಮುಖ್ಯ," ಎಂದು ಅವರು ಹೇಳುತ್ತಾರೆ.
ಆಹಾರ, ಶಾಲೆ, ಜೀವನ
ಮರಿಯಮ್ಮನವರ ಬಿಸಿಯೂಟವು ಪೂರ್ಣ ಪ್ರಮಾಣದ ಊಟಗಳಾಗಿವೆ, ಮಕ್ಕಳು ಅಭಿವೃದ್ಧಿ ಹೊಂದಲು ಅಗತ್ಯವಾದ ಎಲ್ಲಾ ಪೌಷ್ಟಿಕಾಂಶವನ್ನು ನೀಡುತ್ತವೆ, ಆದರೆ ಅವು ಶಾಲಾ ಊಟಗಳೂ ಆಗಿವೆ, ಅಂದರೆ " ಇದನ್ನು ಪಡೆಯಲು ನೀವು ಶಾಲೆಗೆ ಹೋಗಬೇಕು."
"ತಾಯಂದಿರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾದರೆ, ಕನಿಷ್ಠ ಪಕ್ಷ ಅವರು ದಿನಕ್ಕೆ ಒಂದೊತ್ತಿನ ಊಟ ತಿನ್ನುವುದರಿಂದ ಅವರು ಸಾಯುವುದಿಲ್ಲ ಎಂದು ಅವರಿಗೆ ತಿಳಿದಿದೆ" ಎಂದು ಗಾರ್ಸಿಯಾ ಒವೆಜೆರೊರವರು ವಿವರಿಸುತ್ತಾರೆ. ಒಂದು ಹೊತ್ತಿನ ಊಟವು, ಹಸಿವಿನಿಂದ ಬಳಲುತ್ತಿರುವ ಯಾರಿಗಾದರೂ ಆಗಲಿ ಹೊಸ ಜೀವನ ಮತ್ತು ಹೊಸ ಭವಿಷ್ಯವನ್ನು ಧಾರೆಯೆರೆಯುವ ಅರ್ಥವನ್ನು ನೀಡುತ್ತದೆ.
ದತ್ತಿ ಸಂಸ್ಥೆ ಕಾರ್ಯನಿರ್ವಹಿಸುವ ಪ್ರದೇಶಗಳಲ್ಲಿ, ಶಿಕ್ಷಣವು ಹಸಿವಿನಿಂದ ಹೊರಬರುವ ಮಾರ್ಗವಾಗುತ್ತದೆ. ಮಕ್ಕಳು ನಿಯಮಿತವಾಗಿ ಶಾಲೆಗೆ ಹೋದಾಗ, ಅವರಿಗೆ ಊಟ ಸಿಗುವುದಲ್ಲದೆ, ಉತ್ತಮ ಜೀವನವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅವಕಾಶವನ್ನೂ ನೀಡಲಾಗುತ್ತದೆ.
ಈ ಸಂಸ್ಥೆಯ ಕಾಯಕದ ಶಕ್ತಿ ಅದರ ಸರಳತೆಯಲ್ಲಿದೆ: ಮಕ್ಕಳಿಗೆ ಆಹಾರ ನೀಡುವುದು, ಭರವಸೆ ತರುವುದು ಮತ್ತು ಜೀವನವನ್ನು ನೀಡುವುದು. ಹೈಟಿಯಂತಹ ಸ್ಥಳಗಳಲ್ಲಿ, ಗ್ಯಾಂಗ್‌ಗಳು ನಗರಗಳನ್ನು ವಶಪಡಿಸಿಕೊಂಡು, ದೇಶವನ್ನು ಅವ್ಯವಸ್ಥೆಗೆ ದೂಡುತ್ತಿರುವಾಗ, ಅಥವಾ ಬರಗಾಲವು ರೈತರನ್ನು ತೊಂದರೆಯಲ್ಲಿ ಸಿಲುಕಿಸಿ ಮತ್ತು ಆಹಾರವಿಲ್ಲದೆ ಸಮುದಾಯಗಳನ್ನು ಬಿಟ್ಟು ಹೋಗಿರುವ ಕೆನ್ಯಾದಲ್ಲಿ, ಮರಿಯಮ್ಮನವರ ಬಿಸಿಯೂಟದ ಯೋಜನೆ ಆಳವಾದ ಬದಲಾವಣೆಯನ್ನು ತರುತ್ತಿದೆ, ಪ್ರತಿಯೊಂದು ಕೊಡುಗೆಯೂ - ಎಲ್ಲಾ ಮಕ್ಕಳು, ಎಲ್ಲೇ ಇದ್ದರೂ ಕನಿಷ್ಠ ಪಕ್ಷ ಒಂದೇ ಒಂದು ಬಾರಿಯಾದರೂ ಊಟವನ್ನು ನೀಡಲು ಸಹಾಯ ಮಾಡುತ್ತದೆ ಎಂಬುದನ್ನು ನಮಗೆ ನೆನಪಿಸುತ್ತದೆ.