ಇಸ್ಲಾಂ ಧರ್ಮದ ಕಲೆಯ ಪ್ರದರ್ಶನ: 'ಸೌಂದರ್ಯದ ಹುಡುಕಾಟ ಸಾರ್ವತ್ರಿಕ'
ಫ್ಯಾಬಿಯೊ ಕೊಲಾಗ್ರಾಂಡೆ
"ಅಂಡ್ ಆಲ್ ದಟ್ ಈಸ್ ಇನ್ ಬಿಟ್ವೀನ್" ಎಂಬ ಶೀರ್ಷಿಕೆಯ ಇಸ್ಲಾಮಿಕ್ ಆರ್ಟ್ಸ್ ಬಿಯೆನ್ನೆಲ್‌ನ ಎರಡನೇ ಆವೃತ್ತಿಯು ಈಗ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿದೆ.
ಕುರಾನ್‌ನಿಂದ ಆರಿಸಿಕೊಂಡ ಶೀರ್ಷಿಕೆಯನ್ನು ಹೊಂದಿರುವ ಈ ಪ್ರದರ್ಶನವನ್ನು "ವಿಶ್ವಾಸವನ್ನು ಹೇಗೆ ಜೀವಿಸಲಾಗುತ್ತದೆ, ವ್ಯಕ್ತಪಡಿಸಲಾಗುತ್ತದೆ ಮತ್ತು ಆಚರಿಸಲಾಗುತ್ತದೆ ಎಂಬುದರ ಆಳವಾದ ಪರಿಶೋಧನೆ" ಎಂದು ಬಿಂಬಿಸಲಾಗಿದೆ.
2023ರಲ್ಲಿ ಮೊದಲ ಬಾರಿಗೆ ನಡೆದ ಬಿಯೆನ್ನೆಲ್‌ನ ಈ ಎರಡನೇ ಆವೃತ್ತಿಯು ವ್ಯಾಟಿಕನ್‌ನ ಅಪೋಸ್ಟೋಲಿಕ್ ಗ್ರಂಥಾಲಯದಿಂದ ಎರವಲು ಪಡೆದ ಹಲವಾರು ವಸ್ತುಗಳನ್ನು ಒಳಗೊಂಡಿದೆ, ಇದರಲ್ಲಿ ಕುರಾನ್‌ನ ಪ್ರಾಚೀನ ಅನುವಾದಗಳು, ಖಗೋಳಶಾಸ್ತ್ರದ ಪಠ್ಯಗಳು ಮತ್ತು 17ನೇ ಶತಮಾನದ ನೈಲ್ ನದಿಯ ವಿಶಿಷ್ಟವಾದ, ಸುಮಾರು ಆರು ಮೀಟರ್ ಉದ್ದದ ನಕ್ಷೆ ಸೇರಿವೆ.
ಜೆಡ್ಡಾದಲ್ಲಿ, ವ್ಯಾಟಿಕನ್ ಸುದ್ಧಿಯು ಬಿಯೆನ್ನೆಲ್‌ನ ಇಬ್ಬರು ಕಲಾ ನಿರ್ದೇಶಕರಾದ ಜೂಲಿಯನ್ ರಾಬಿ ಮತ್ತು ಅಬ್ದುಲ್ ರೆಹಮಾನ್ ಅಜ್ಜಮ್ ರವರೊಂದಿಗೆ ಪ್ರದರ್ಶನ ಮತ್ತು ಅದಕ್ಕೆ ವ್ಯಾಟಿಕನ್ನಿನ ಕೊಡುಗೆಯ ಮಹತ್ವದ ಬಗ್ಗೆ ಮಾತನಾಡಿತು.
‘ಕೇವಲ ವ್ಯಾಟಿಕನ್’
ಸೌದಿ ಅರೇಬಿಯಾದ ಕಿಂಗ್ ಅಬ್ದುಲಜೀಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಶ್ಚಿಮ ಹಜ್ ಟರ್ಮಿನಲ್‌ನಲ್ಲಿ ಇಸ್ಲಾಂ ಧರ್ಮದ ಕಲೆಯ ಪ್ರದರ್ಶನ (ಬಿಯೆನ್ನಲ್) ನಡೆಯುತ್ತಿದೆ.
"ಇಸ್ಲಾಂ ಧರ್ಮದ ಜನ್ಮಸ್ಥಳ" ಮೆಕ್ಕಾ ನಗರ ಮತ್ತು "ಸಾವಿರಾರು ವರ್ಷಗಳಿಂದ ವಿಶ್ವದ ಅತ್ಯಂತ ಅಂತರರಾಷ್ಟ್ರೀಯ ನಗರವಾಗಿದ್ದ ಜೆದ್ದಾ - ಮೊರಾಕೊದಿಂದ ಚೀನಾದವರೆಗಿನ ಪ್ರತಿಯೊಬ್ಬ ಮುಸ್ಲಿಮರು ಹಜ್ ತೀರ್ಥಯಾತ್ರೆಗೆ ಬರುವ ಸ್ಥಳ" ಎರಡಕ್ಕೂ ಹತ್ತಿರದಲ್ಲಿರುವ ಈ ಸ್ಥಳದ ಮಹತ್ವವನ್ನು ರಾಬಿರವರು ಒತ್ತಿ ಹೇಳಿದರು.
"ಇಸ್ಲಾಂ ಧರ್ಮದ ಸಾರಕ್ಕೆ ಸ್ಪಂದಿಸುವ ಅಗತ್ಯವನ್ನು ಮತ್ತು ವಿಶ್ವದಾದ್ಯಂತ ಇಸ್ಲಾಂ ಧರ್ಮವು ಪ್ರತಿಧ್ವನಿಸುವ ಬಗ್ಗೆ ಯೋಚಿಸುವ ಅಗತ್ಯವನ್ನು ಸೃಷ್ಟಿಸುವ" ಪರಿಸರವಿದು ಎಂದು ರಾಬಿರವರು ಹೇಳಿದರು.
"ಮಾಲಿಯಿಂದ ಬಾಲಿಯವರೆಗೆ" ವಿಶ್ವದಾದ್ಯಂತದ 34 ಸಂಸ್ಥೆಗಳು ಬಿಯೆನ್ನೆಗೆ ಕೊಡುಗೆ ನೀಡಿವೆ ಎಂದು ಅವರು ಒತ್ತಿ ಹೇಳಿದರು.
ಇವುಗಳಲ್ಲಿ ವ್ಯಾಟಿಕನ್‌ನ ಅಪೋಸ್ಟೋಲಿಕ್ ಗ್ರಂಥಾಲಯವೂ ಸೇರಿತ್ತು, ಇದು ಇತರ ವಸ್ತುಗಳ ಜೊತೆಗೆ ಕುರಾನ್‌ನ ಹೀಬ್ರೂ ಮತ್ತು ಗ್ರೀಕ್ ಭಾಷೆಗಳಿಗೆ ಅನುವಾದವನ್ನು ಒದಗಿಸಿತು. ಅರಬಿಕ್ ಮೂಲವನ್ನು ಬರೆದ ಮೊದಲನೇ ಶತಮಾನದೊಳಗೆ ಇದನ್ನು ತಯಾರಿಸಲಾಯಿತು ಎಂದು ರಾಬಿರವರು ಹೇಳಿದರು.
"ವ್ಯಾಟಿಕನ್ ಮಾತ್ರ ಅದನ್ನು ಮಾಡಲು ಸಾಧ್ಯ!"
ಸೌಂದರ್ಯಕ್ಕಾಗಿ ಸಾರ್ವತ್ರಿಕ ಅನ್ವೇಷಣೆ
ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ, ಅಜ್ಜಮ್ ರವರು ಇದೇ ರೀತಿಯ ವಿಷಯಗಳನ್ನು ಅಯ್ಕೆ ಮಾಡಿಕೊಂಡರು.
"ಇಸ್ಲಾಂ ಧರ್ಮದ ನಾಗರಿಕತೆಯು ಕೇವಲ ಅರಬ್ ನಾಗರಿಕತೆಯಲ್ಲ, ಬದಲಿಗೆ ಹಲವು ಖಂಡಗಳನ್ನು ದಾಟಿ ಸಾಗುವ ನಾಗರಿಕತೆಯಾಗಿದೆ" ಎಂದು ತೋರಿಸುವುದು ಬಿಯೆನ್ನೆಲ್‌ನ ಪ್ರಮುಖ ಗುರಿಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.
"ಈ ವಿಚಾರಗಳು ಸಾರ್ವತ್ರಿಕವಾಗಿವೆ, ಸತ್ಯದ ಹುಡುಕಾಟ, ಜ್ಞಾನದ ಹುಡುಕಾಟ ಮತ್ತು ಸೌಂದರ್ಯದ ಹುಡುಕಾಟವು ಯಾವುದೇ ಒಂದು ಧರ್ಮ, ಯಾವುದೇ ಒಂದು ಸಂಸ್ಕೃತಿ, ಯಾವುದೇ ಒಂದು ನಾಗರಿಕತೆಯ ಒಡೆತನಕ್ಕೆ ಸೇರಿಲ್ಲ" ಎಂದು ತೋರಿಸಲು ಮುಸ್ಲಿಂ ಧರ್ಮದವರಲ್ಲದ ಇತರ ಸಂಸ್ಥೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವುದು ಸಹ ಮುಖ್ಯವಾಗಿತ್ತು ಎಂದು ಅಜ್ಜಮ್ ರವರು ಒತ್ತಿ ಹೇಳಿದರು.
ಈ ನಿಟ್ಟಿನಲ್ಲಿ, ವ್ಯಾಟಿಕನ್ ಜೊತೆಗಿನ ಸಹಯೋಗವು "ಸಂತೋಷವನ್ನು ಹೊರತುಪಡಿಸಿ ಬೇರೇನೂ ಅಲ್ಲ" ಎಂದು ಅಜ್ಜಮ್ ರವರು ಒತ್ತಿ ಹೇಳಿದರು.
"ಪ್ರತಿಯೊಂದು ಹೆಜ್ಜೆಯೂ ಗೌರವ, ಸಹಿಷ್ಣುತೆ, ತಿಳುವಳಿಕೆ, ಬುದ್ಧಿವಂತಿಕೆಯಿಂದ ಕೂಡಿದೆ" ಎಂದು ಅವರು ಹೇಳಿದರು, ಈ ವರ್ಷದ ಪ್ರದರ್ಶನದ ಸಹಯೋಗವು "ವ್ಯಾಟಿಕನ್ ಅಪೋಸ್ಟೋಲಿಕ್ ಗ್ರಂಥಾಲಯ ಮತ್ತು ಇಸ್ಲಾಮಿಕ್ ಆರ್ಟ್ಸ್ ಬಿಯೆನೆಲ್ ನ ನಡುವಿನ ಸಹಯೋಗದ ಹಲವು ಹಂತಗಳಲ್ಲಿ ಮೊದಲನೆಯದಾಗಿದೆ" ಎಂದು ಅವರು ಭರವಸೆ ವ್ಯಕ್ತಪಡಿಸಿದರು.