ಗಾಜಾ: ಕಳೆದ 24 ಗಂಟೆಗಳಲ್ಲಿ 17 ದಿನಗಳ ಮಗು ಸೇರಿ 50 ಮಂದಿ ಸಾವು
ಫ್ರಾನ್ಸೆಸ್ಕಾ ಮೆರ್ಲೊ
ವಿಶ್ವಗುರು ಫ್ರಾನ್ಸಿಸ್ ರವರು ಮಧ್ಯಪ್ರಾಚ್ಯದಲ್ಲಿ ಶಾಂತಿಗಾಗಿ ತಮ್ಮ ಮನವಿಯನ್ನು ಮುಂದುವರಿಸಿದರೂ, ಇಸ್ರಯೇಲ್ ಗಾಜಾದಲ್ಲಿ ನಿರಂತರವಾಗಿ ತನ್ನ ಬಾಂಬ್ ದಾಳಿಯನ್ನು ಮುಂದುವರೆಸಿದೆ.
ಮಂಗಳವಾರ ಮತ್ತು ಬುಧವಾರ ದಿನಗಳ ನಡುವಿನ 24 ಗಂಟೆಗಳಲ್ಲಿ, ಗಾಜಾ ಗಡಿಯಲ್ಲಿ ಇಸ್ರಯೇಲ್ ಬಾಂಬ್‌ಗಳಿಂದ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಗಾಜಾದ ಆರೋಗ್ಯ ಸಚಿವಾಲಯ ವರದಿ ಮಾಡಿರುವ ಈ ಇತ್ತೀಚಿನ ಸಾವುನೋವುಗಳು, 7 ಅಕ್ಟೋಬರ್ 2023 ರಂದು ಹಿಂಸಾಚಾರ ಭುಗಿಲೆದ್ದ ನಂತರದ ಒಟ್ಟು ಸಾವಿನ ಸಂಖ್ಯೆಯನ್ನು 45,936ಕ್ಕೆ ತಂದಿವೆ.
ಗಾಜಾ ಗಡಿಯಾದ್ಯಂತ ಸಾವುಗಳು
ಇತ್ತೀಚೆಗೆ ವರದಿಯಾದ ದುರಂತಗಳಲ್ಲಿ ಉತ್ತರ ಗಾಜಾದಲ್ಲಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಆಶ್ರಯ ತಾಣವಾದ ಜಬಾಲಿಯಾದಲ್ಲಿರುವ ಹಲಾವಾ ಶಾಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಬುರೈಜ್ ನಿರಾಶ್ರಿತರ ಶಿಬಿರದಲ್ಲಿ, 4 ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ಹತ್ತು ಸದಸ್ಯರೂ ಸಹ ಸಾವನ್ನಪ್ಪಿದ್ದಾರೆ. ಇತರ ಸಾವುಗಳಲ್ಲಿ ಉತ್ತರ ಗಾಜಾದ ಜೈಟೌನ್ ನೆರೆಹೊರೆಯಲ್ಲಿ ಐದು ಜನರು, ದೇರ್ ಅಲ್-ಬಲಾಹ್‌ನಲ್ಲಿ ಮೂರು ಕುಟುಂಬ ಸದಸ್ಯರು ಮತ್ತು ಶೇಖ್ ರಾಡ್ವಾನ್ ಪ್ರದೇಶದಲ್ಲಿ 17 ದಿನಗಳ ಮಗು ಸೇರಿ ಸಾವನ್ನಪ್ಪಿದ್ದಾರೆ. ಮಗುವಿನ ಹೆಸರು ಅದ್ನಾನ್.
ಗಾಜಾದ ಹಮಾಸ್ ನಡೆಸುವ ಆರೋಗ್ಯ ಸಚಿವಾಲಯವು ಬಲಿಯಾದವರಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಅಧಿಕವಾಗಿರುವುದನ್ನು ಎತ್ತಿ ತೋರಿಸಿದೆ. ವಾಸ್ತವವಾಗಿ, ಇಸ್ರಯೇಲ್ ಸೇನೆಯು "ಮಾನವೀಯ ಸುರಕ್ಷಿತ ವಲಯ" ಎಂದು ಗೊತ್ತುಪಡಿಸಿದ ಅಲ್-ಮವಾಸಿ ಕರಾವಳಿ ಪ್ರದೇಶದಲ್ಲಿ, ಸ್ಥಳಾಂತರಗೊಂಡ ವ್ಯಕ್ತಿಗಳಿಗಾಗಿ ತಾತ್ಕಾಲಿಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ಐದು ಮಕ್ಕಳು ಸಾವನ್ನಪ್ಪಿದ್ದಾರೆ.
ಈ ಪ್ರದೇಶವು ಜನನಿಬಿಡವಾಗಿದ್ದರೂ, ಇಸ್ರಯೇಲ್ ಪಡೆಗಳು, ತಮ್ಮ ದಾಳಿಗಳು ಹಮಾಸ್ ಕಾರ್ಯಾಚರಣೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿವೆ ಎಂದು ಪ್ರತಿಪಾದಿಸುತ್ತಲೇ ಇವೆ.
ಆರೋಗ್ಯ ವ್ಯವಸ್ಥೆ ತೀವ್ರವಾಗಿ ಸ್ಥಗಿತಗೊಂಡಿದೆ
ಗಾಯಗೊಂಡವರ ಸಂಖ್ಯೆ ಈಗ 109,000 ಮೀರಿದೆ, ಮತ್ತು ಗಾಜಾ ಗಡಿಯಲ್ಲಿರುವ ವೈದ್ಯಕೀಯ ತಂಡಗಳು ತೀವ್ರವಾಗಿ ನಶಿಸಿವೆ, ನಗರದ ಅನೇಕ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕೇಂದ್ರಗಳು ಶಿಥಿಲಗೊಂಡಿವೆ.
ಆಸ್ಪತ್ರೆಗಳು ಸಾಮರ್ಥ್ಯ ಮೀರಿ ಕಾರ್ಯನಿರ್ವಹಿಸುತ್ತಿವೆ ಮತ್ತು ಔಷಧ, ವಿದ್ಯುತ್ ಮತ್ತು ಶುದ್ಧ ನೀರಿನಂತಹ ಅಗತ್ಯ ಸಂಪನ್ಮೂಲಗಳು ವೇಗವಾಗಿ ಖಾಲಿಯಾಗುತ್ತಿವೆ.
ಅಂತರರಾಷ್ಟ್ರೀಯ ಸಮುದಾಯದಲ್ಲಿ ಎಚ್ಚರಿಕೆ
ಇಸ್ರಯೇಲ್ ಸೇನೆಯು ತನ್ನ ದಾಳಿಗಳು ಹಮಾಸ್ ಗುರಿಗಳ ಮೇಲೆ ನಿರ್ದೇಶಿಸಲ್ಪಟ್ಟಿವೆ ಎಂದು ಹೇಳಿಕೊಂಡರೂ, ಅಸಮಾನ ನಾಗರಿಕ ಸಾವಿನ ಸಂಖ್ಯೆ ಅಂತರರಾಷ್ಟ್ರೀಯ ಸಮುದಾಯ ಮತ್ತು ಮಾನವೀಯ ಸಂಸ್ಥೆಗಳಲ್ಲಿ ಆತಂಕವನ್ನು ಹೆಚ್ಚಿಸಿದೆ.
ವಿಶ್ವಗುರು ಫ್ರಾನ್ಸಿಸ್ ರವರೂ ಕೂಡ ಗಾಜಾದಲ್ಲಿನ ಜನರ ಹಿಂಸಾಚಾರ ಮತ್ತು ನೋವನ್ನು ಕೊನೆಗೊಳಿಸಲು ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿಗಾಗಿ ಕರೆ ನೀಡುತ್ತಲೇ ಇದ್ದಾರೆ, ಎಲ್ಲಾ ಪಕ್ಷಗಳು ಹಿಂಸಾಚಾರಕ್ಕಿಂತ ಸಂವಾದಕ್ಕೆ ಆದ್ಯತೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.