ಡಿಆರ್ ಕಾಂಗೋ: ತಮ್ಮ ಜೀವದ ಬಗ್ಗೆ ಭಯಭೀತರಾಗಿರುವ ಗೋಮಾದ ನಾಗರಿಕರು
ವ್ಯಾಟಿಕನ್ ಸುದ್ಧಿ
ದೇಶದ ಪೂರ್ವದಲ್ಲಿ ಹೆಚ್ಚಿನ ಪ್ರದೇಶವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ರುವಾಂಡಾ ಬೆಂಬಲಿತ ಬಂಡುಕೋರರ ವಿರುದ್ಧ ಹೋರಾಡುವುದಕ್ಕೆ ಸಹಾಯ ಮಾಡಲು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ನಾಯಕ ಬೃಹತ್ ಮಿಲಿಟರಿ ಸಜ್ಜುಗೊಳಿಸುವಿಕೆಗೆ ಕರೆ ನೀಡುತ್ತಿದ್ದಾರೆ.
ದೇಶದ ಅತಿದೊಡ್ಡ ಪೂರ್ವ ನಗರವಾದ ಗೋಮಾವನ್ನು ಪ್ರವೇಶಿಸಿರುವ ಬಂಡುಕೋರರನ್ನು ಹಿಮ್ಮೆಟ್ಟಿಸಲು "ತೀವ್ರ ಮತ್ತು ಸಂಘಟಿತ ಪ್ರತಿಕ್ರಿಯೆ" ನೀಡುವುದಾಗಿ ಅಧ್ಯಕ್ಷ ಫೆಲಿಕ್ಸ್ ತ್ಶಿಸೆಕೆಡಿರವರು ಬುಧವಾರ ತಡರಾತ್ರಿ ಪ್ರತಿಜ್ಞೆ ಮಾಡಿದರು ಮತ್ತು ಅದೇ ಸಮಯದಲ್ಲಿ ಶಾಂತಿಯುತ ನಿರ್ಣಯಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
M23 ಬಂಡುಕೋರರು ಕಾಂಗೋದ ಖನಿಜ-ಸಮೃದ್ಧವಾದ ಪೂರ್ವದ ನಿಯಂತ್ರಣಕ್ಕಾಗಿ ಸ್ಪರ್ಧಿಸುತ್ತಿರುವ 100ಕ್ಕೂ ಹೆಚ್ಚು ಸಶಸ್ತ್ರ ಗುಂಪುಗಳಲ್ಲಿ ಒಂದಾಗಿದೆ, ಇದು ವಿಶ್ವದ ಹೆಚ್ಚಿನ ತಂತ್ರಜ್ಞಾನಕ್ಕೆ ನಿರ್ಣಾಯಕವಾದ ವಿಶಾಲ ನಿಕ್ಷೇಪಗಳನ್ನು ಹೊಂದಿದೆ.
ಉತ್ತರ ಕಿವುವಿನ ರಾಜಧಾನಿಯಾದ ಗೋಮಾವನ್ನು ಈಗಾಗಲೇ ವಶಪಡಿಸಿಕೊಂಡಿರುವ ಬಂಡುಕೋರರನ್ನು ತಡೆಯಲು ಸರ್ಕಾರಿ ಪಡೆಗಳು ಪ್ರತಿದಾಳಿ ನಡೆಸುತ್ತಿರುವುದರಿಂದ ದಕ್ಷಿಣ ಕಿವು ಪ್ರಾಂತ್ಯದ ಜನರು ಭಯಭೀತರಾಗಿದ್ದಾರೆ ಎಂದು ವರದಿಯಾಗಿದೆ.
ಗೋಮಾ ಒಂದು ಮಾನವೀಯ ಕೇಂದ್ರವಾಗಿದ್ದು, ಪೂರ್ವ ಕಾಂಗೋದಲ್ಲಿ ದಶಕಗಳಷ್ಟು ಹಳೆಯದಾದ ಸಂಘರ್ಷದಿಂದ ಸ್ಥಳಾಂತರಗೊಂಡ 6 ದಶಲಕ್ಷಕ್ಕೂ ಹೆಚ್ಚು ಜನರನ್ನು ಇಲ್ಲಿ ಆಶ್ರಯಿಸಲಾಗಿದೆ.
ಕಾಂಗೋ ರಾಜಧಾನಿ ಕಿನ್ಶಾಸಾದಲ್ಲಿರುವ ಮಾರಿಸ್ಟ್ ನ ಒಬ್ಬ ಸಹೋದರ, ಜೀನ್ ಕ್ಲೌಡ್ ರವರು ವ್ಯಾಟಿಕನ್ ಸುದ್ಧಿಗೆ ನೀಡಿದ ಮಾಹಿತಿಯ ಪ್ರಕಾರ, ಗೋಮಾದಲ್ಲಿರುವ ಬೊಬಂಡಾನಾದ ಮಾರಿಸ್ಟ್ ನ ಧರ್ಮಪ್ರಚಾರ ಕಾರ್ಯದಲ್ಲಿರುವ ತಮ್ಮ ಸಹೋದರರು ಜೀವ ಭಯದಿಂದ ತಮ್ಮ ಮನೆಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಗೋಮಾದ ಬೊಬಂಡನ ಧರ್ಮಪ್ರಚಾರ ಕಾರ್ಯದಲ್ಲಿರುವ ಮಾರಿಸ್ಟ್ ನ ಸಮುದಾಯದ ಮೇಲೆ ಅಭದ್ರತೆಯು ಇಲ್ಲಿಯವರೆಗೆ ಹೆಚ್ಚು ಪರಿಣಾಮ ಬೀರಿದೆ ಎಂದು ಸಹೋದರ ಜೀನ್ ಕ್ಲೌಡ್ ರವರು ಹೇಳುತ್ತಾರೆ.
ಗೋಮಾ ನಗರವು ಕಳೆದ 4 ದಿನಗಳಿಂದ ನೀರು, ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕದ ಸೌಲಭ್ಯವಿಲ್ಲದೆ ಇರುವುದರಿಂದ ಪರಿಸ್ಥಿತಿ ತುಂಬಾ ದುರ್ಬಲವಾಗಿದೆ ಎಂದು ಅವರು ವಿವರಿಸುತ್ತಾರೆ.
ಇದೆಲ್ಲವೂ "ಶೀಘ್ರದಲ್ಲೇ ಕೊನೆಗೊಳ್ಳುತ್ತದೆ" ಎಂಬ ಆಶಯವನ್ನು ವ್ಯಕ್ತಪಡಿಸುತ್ತಾ, ಕಥೋಲಿಕ ಧರ್ಮಸಭೆಯ ಒಡೆತನದ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ನಡೆಸಿ ಸಾವು-ನೋವುಗಳನ್ನುಂಟು ಮಾಡಲಾಗಿದೆ ಎಂಬ ಅಂಶವನ್ನು ಬ್ರದರ್ ಜೀನ್ ಕ್ಲೌಡ್ ರವರು ಖಂಡಿಸುತ್ತಾರೆ.
ಪ್ರಸ್ತುತವಾಗಿ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಮತ್ತು ನಗರದ ರಸ್ತೆಗಳು ಹಾಗೂ ನಗರದ ಹೊರವಲಯಗಳು ಅಭದ್ರತೆಯಿಂದಾಗಿ ಅಪಾಯಕಾರಿಯಾಗಿವೆ ಎಂದು ಅವರು ಹೇಳುತ್ತಾರೆ.
ಮಾರಿಸ್ಟ್ ನ ಸಹೋದರರು ತಮ್ಮ ಶಾಲೆಗಳಲ್ಲಿ 122 ಹುಡುಗಿಯರು ಸೇರಿದಂತೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ ಮತ್ತು ಕೆಲವು ಮಕ್ಕಳನ್ನು ತಮ್ಮ ಕುಟುಂಬಗಳಿಗೆ ಹಿಂತಿರುಗುವ ಭರವಸೆಯಿಲ್ಲದೆ, ದಂಗೆಕೋರರಿಗೆ ಸರಕು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸಲು ಒತ್ತಾಯಿಸಲಾಗಿದೆ ಮತ್ತು ಸೇರಿಸಿಕೊಳ್ಳಲಾಗಿದೆ ಎಂಬ ಅಂಶದ ಬಗ್ಗೆ ವಿಷಾದಿಸುತ್ತಾರೆ.