ಗಾಜಾದಲ್ಲಿ ಶೀತದಿಂದ ನವಜಾತ ಶಿಶುಗಳು ಸಾವು
ನಾಥನ್ ಮೊರ್ಲೆ
ಇಸ್ರಯೇಲ್ ದಾಳಿಯ ಜೊತೆಗೆ, ಮಕ್ಕಳು ಈಗ ಶೀತ ಮತ್ತು ಆಶ್ರಯದ ಕೊರತೆಯಿಂದ ಸಾಯುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆಯಾದ ಯುನಿಸೆಫ್ ಹೇಳುತ್ತದೆ. ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಯುನಿಸೆಫ್ ಪ್ರಾದೇಶಿಕ ನಿರ್ದೇಶಕ ಎಡ್ವರ್ಡ್ ಬೀಗ್‌ಬೆಡರ್ ರವರು, 'ಈ ತಡೆಗಟ್ಟಬಹುದಾದ ಸಾವುಗಳು, ಗಾಜಾದಲ್ಲಿನ ಕುಟುಂಬಗಳು ಮತ್ತು ಮಕ್ಕಳು ವಾಸಿಸುವ ಹತಾಶ ಮತ್ತು ಹದಗೆಟ್ಟಿರುವ ಪರಿಸ್ಥಿತಿಯನ್ನು ಬಹಿರಂಗಪಡಿಸುತ್ತವೆ' ಎಂದು ಹೇಳಿದರು.
ಬೇರೆಡೆ, ಹಮಾಸ್ ಬಿಡುಗಡೆ ಮಾಡಿದ ಇಸ್ರಯೇಲ್ ನ ಕೈದಿಗಳ ಆರೋಗ್ಯದ ಕುರಿತು ವಿಶ್ವಸಂಸ್ಥೆಗೆ ಸಲ್ಲಿಸಬೇಕಾದ ವರದಿಯನ್ನು ಇಸ್ರಯೇಲ್ ನ ಆರೋಗ್ಯ ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ ಎಂದು ಇಸ್ರಯೇಲ್‌ನ ಮಾಧ್ಯಮಗಳು ವರದಿ ಮಾಡುತ್ತಿವೆ.
ವರದಿಗಳ ಪ್ರಕಾರ ಕೈದಿಗಳು ಅಪೌಷ್ಟಿಕತೆಯಿಂದಾಗಿ ಸೆರೆಯಲ್ಲಿದ್ದಾಗ ತಮ್ಮ ದೇಹದ ತೂಕದ ಶೇಕಡಾ 10-17 ರಷ್ಟು ಕಳೆದುಕೊಳ್ಳುವುದು, ಹೊಡೆಯುವುದು ಮತ್ತು ಪ್ರತ್ಯೇಕವಾಗಿ ಇಡುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಮಕ್ಕಳನ್ನೂ ಥಳಿಸಲಾಗುತ್ತಿತು ಮತ್ತು ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು.
ಜೊತೆಗೆ, ಒತ್ತೆಯಾಳುಗಳಿಗೆ ಸರಿಯಾದ ವೈದ್ಯಕೀಯ ಆರೈಕೆ ಇರಲಿಲ್ಲ. ಇದರ ಪರಿಣಾಮವಾಗಿ, ಕೆಲವು ವಯಸ್ಸಾದ ಒತ್ತೆಯಾಳುಗಳು, ಉದಾಹರಣೆಗೆ, ದೀರ್ಘಕಾಲದವರೆಗೆ ಈ ಸ್ಥಳದಲ್ಲೇ ಇರಲು ಒತ್ತಾಯಿಸಿದಾಗ ಥ್ರಂಬೋಸಿಸ್ ಖಾಯಿಲೆಗೆ ಬಲಿಯಾಗುತ್ತಿದ್ದರು.
ಆಸ್ಪತ್ರೆಯಲ್ಲಿ ಮಿಲಿಟರಿ ಕಾರ್ಯಾಚರಣೆ
ಇಸ್ರಯೇಲ್ ಸೇನೆಯು ಉತ್ತರ ಗಾಜಾದ ಕಮಲ್ ಅಡ್ವಾನ್ ಆಸ್ಪತ್ರೆಯಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಕೊನೆಗೊಳಿಸಿದೆ. ದಾಳಿಯ ಪರಿಣಾಮವಾಗಿ ಆಸ್ಪತ್ರೆಯನ್ನು ಸೇವೆಯಿಂದ ಹೊರಹಾಕಲಾಯಿತು. ಕಾರ್ಯಾಚರಣೆಯಲ್ಲಿ ಇಸ್ರಯೇಲ್ ಸೇನೆಯು ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ಉಗ್ರಗಾಮಿ ಗುಂಪುಗಳ ಸದಸ್ಯರು ಎಂದು ಹೇಳಿಕೊಳ್ಳುವ 240 ಜನರನ್ನು ಬಂಧಿಸಿದೆ ಎಂದು ವರದಿಗಳು ಸೂಚಿಸುತ್ತವೆ. ಆಸ್ಪತ್ರೆಯ ನಿರ್ದೇಶಕರನ್ನೂ ಸಹ ಬಂಧಿಸಿರುವುದಾಗಿ ಸೇನೆಯೂ ಹೇಳುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಗಾಜಾದಲ್ಲಿ ಆರೋಗ್ಯ ರಕ್ಷಣೆಗಾಗಿ ಪದೇ ಪದೇ ಕರೆ ನೀಡುತ್ತಿದೆ.