ಕಾರ್ಡಿನಲ್ ಪರೋಲಿನ್: ಇಸ್ತಾಂಬುಲ್ ಮಾತುಕತೆಗಳು ಶಾಂತಿಯ ಹಾದಿಯನ್ನು ತೆರೆಯುವ ಭರವಸೆ
ವರದಿ: ವ್ಯಾಟಿಕನ್ ನ್ಯೂಸ್
ಪೊಂಟಿಫಿಕಲ್ ಗ್ರೆಗೋರಿಯನ್ ವಿಶ್ವವಿದ್ಯಾನಿಲಯದಲ್ಲಿ ಉಕ್ರೇನ್ ಕುರಿತು ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಟರ್ಕಿ ದೇಶದಲ್ಲಿ ಆರಂಭವಾಗಲಿರುವ ನೇರ ಮಾತುಕತೆಗಳ ಕುರಿತು ಮಾತನಾಡಿದ್ದಾರೆ. ಈ ಮಾತುಕತೆಗಳು ಶಾಂತಿಯ ಹಾದಿಯನ್ನು ತೆರೆಯುವ ಭರವಸೆ ಇದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಎಲ್ಲರ ಕಣ್ಣುಗಳು ಟರ್ಕಿ ದೇಶದ ಮೇಲಿದೆ. ಏಕೆಂದರೆ ಪೋಪ್ ಹದಿನಾಲ್ಕನೇ ಲಿಯೋ ಅವರು ತಮ್ಮ ಮೊದಲ ಪ್ರೇಷಿತ ಪ್ರಯಾಣವನ್ನು ಈ ದೇಶಕ್ಕೆ ಕೈಗೊಳ್ಳುವ ಸಾಧ್ಯತೆಗಳಿವೆ. ಇದೇ ವೇಳೆ ಟರ್ಕಿಯಲ್ಲಿ ಉಕ್ರೇನ್ ಹಾಗೂ ರಷ್ಯಾ ದೇಶಗಳು ಶಾಂತಿ ಮಾತುಕತೆಗಳನ್ನು ನಡೆಸಲು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದು, ಟರ್ಕಿ ದೇಶವು ಇದಕ್ಕೆ ಮಧ್ಯಸ್ಥಿಕೆಯನ್ನು ವಹಿಸುತ್ತಿದೆ.
ವ್ಯಾಟಿಕನ್ ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಅವರು ಈ ಯುಎಸ್-ಮಧ್ಯಸ್ಥಿಕೆಯ ನೇರ ಮಾತುಕತೆಗಳ ಮೇಲೆ ಭರವಸೆಯನ್ನು ಹೊಂದಿದ್ದು, ಇದು ಮೊದಲ ಬಾರಿಗೆ ಅಧ್ಯಕ್ಷರಾದ ಝೆಲೆನ್ಸ್ಕಿ ಮತ್ತು ಪುಟಿನ್ ಅವರು ನೇರ ಮುಖಾಮುಖಿಗೆ ಕಾರಣವಾಗುತ್ತಿದೆ ಎಂದು ಅವರು ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. "ಶಾಂತಿಗೆ ಅವಕಾಶಗಳಿವೆ ಎಂದು ನಾವು ಯಾವಾಗಲೂ ಆಶಿಸುತ್ತೇವೆ" ಎಂದು ಕಾರ್ಡಿನಲ್ ವಿವಿಧ ಮಾಧ್ಯಮಗಳಿಗೆ ತಿಳಿಸಿದರು. "ನೇರ ಸಭೆಯ ಸಾಧ್ಯತೆ ಕೊನೆಗೂ ಇರುವುದು ನಮಗೆ ಸಂತೋಷ ತಂದಿದೆ. ಅಸ್ತಿತ್ವದಲ್ಲಿರುವ ಸಮಸ್ಯೆಗಳನ್ನು ಅಲ್ಲಿ ಪರಿಹರಿಸಬಹುದು ಮತ್ತು ನಿಜವಾದ ಶಾಂತಿ ಪ್ರಕ್ರಿಯೆಯು ಪ್ರಾರಂಭವಾಗಬಹುದು ಎಂದು ನಾವು ಭಾವಿಸುತ್ತೇವೆ." ಎಂದು ಹೇಳಿದ್ದಾರೆ.
ಇದೇ ವೇಳೆ ಪೋಪ್ ಲಿಯೋ ಅವರ ಉಕ್ರೇನ್ ಭೇಟಿಯ ಕುರಿತು ಮಾತನಾಡಿದ ಕಾರ್ಡಿನಲ್ ಪರೋಲಿನ್, ಅದಕ್ಕೆ ಸಮಯವೇ ಉತ್ತರಿಸಬೇಕು ಎನ್ನುತ್ತಾ ಉಕ್ರೇನ್ ಅಧ್ಯಕ್ಷರು ಪೋಪರಿಗೆ ನೀಡಿದ ಆಹ್ವಾನವನ್ನು ಇಲ್ಲಿ ನೆನಪಿಸಿಕೊಂಡರು. ಮುಂದುವರೆದು ಮಾತನಾಡಿದ ಅವರು ವ್ಯಾಟಿಕನ್ ವಿಶ್ವದಲ್ಲಿ ಶಾಂತಿಯನ್ನು ಮೂಡಿಸಲು ಪ್ರಯತ್ನಿಸುತ್ತಿದೆ. ಯುದ್ಧ ಖೈದಿಗಳನ್ನು ಹಾಗೂ ಮಕ್ಕಳನ್ನು ರಕ್ಷಿಸುವುದು ಪವಿತ್ರ ಪೀಠದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ವಿಭಜನೆಗಳನ್ನು ಉತ್ತೇಜಿಸುವ ಬದಲು ಸದಾ ಶಾಂತಿಯನ್ನು ವ್ಯಾಟಿಕನ್ ಬಯಸುತ್ತದೆ. ಪೋಪ್ ಹದಿನಾಲ್ಕನೇ ಲಿಯೋ ಅವರು ಸಹ ಶಾಂತಿಗಾಗಿ ಈಗಾಗಲೇ ಮನವಿಯನ್ನು ಮಾಡಿದ್ದಾರೆ ಎಂದು ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಅವರು ಹೇಳಿದರು.