MAP

ಮತ್ತಿಯೋ ಬ್ರೂನಿ: ಪೋಪ್ ಹದಿನಾಲ್ಕನೇ ಲಿಯೋ ಅವರ ಹೆಸರು ಧರ್ಮಸಭೆಯ ಸೇವಾನಿಯೋಗವನ್ನು ಸೂಚಿಸುತ್ತದೆ

ಪವಿತ್ರ ಪೀಠದ ಮಾಧ್ಯಮ ಕಚೇರಿಯ ನಿರ್ದೇಶಕರಾಗಿರುವ ಮತ್ತಿಯೋ ಬ್ರೂನಿ ಅವರು ಪೋಪ್ ಹದಿನಾಲ್ಕನೇ ಲಿಯೋ ಅವರ ಮೊದಲ ಸಂದೇಶವನ್ನು ಈ ಜಗತ್ತಿನಲ್ಲಿ ಶಾಂತಿ ಹಾಗೂ ಸೌಹಾರ್ದತೆಗಾಗಿ ಕರೆ ಎಂದು ಬಣ್ಣಿಸಿದ್ದಾರೆ. ಆಧುನಿಕ ಜಗತ್ತಿನಲ್ಲಿ ಧರ್ಮಸಭೆಯ ಸಾಮಾಜಿಕ ಬೋಧನೆಗೆ ಪೋಪ್ ಲಿಯೋ ಅವರ ಹೆಸರು ನೇರ ಉಲ್ಲೇಖವಾಗಿದೆ ಎಂದು ಅವರು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪವಿತ್ರ ಪೀಠದ ಮಾಧ್ಯಮ ಕಚೇರಿಯ ನಿರ್ದೇಶಕರಾಗಿರುವ ಮತ್ತಿಯೋ ಬ್ರೂನಿ ಅವರು ಪೋಪ್ ಹದಿನಾಲ್ಕನೇ ಲಿಯೋ ಅವರ ಮೊದಲ ಸಂದೇಶವನ್ನು ಈ ಜಗತ್ತಿನಲ್ಲಿ ಶಾಂತಿ ಹಾಗೂ ಸೌಹಾರ್ದತೆಗಾಗಿ ಕರೆ ಎಂದು ಬಣ್ಣಿಸಿದ್ದಾರೆ. ಆಧುನಿಕ ಜಗತ್ತಿನಲ್ಲಿ ಧರ್ಮಸಭೆಯ ಸಾಮಾಜಿಕ ಬೋಧನೆಗೆ ಪೋಪ್ ಲಿಯೋ ಅವರ ಹೆಸರು ನೇರ ಉಲ್ಲೇಖವಾಗಿದೆ ಎಂದು ಅವರು ಹೇಳಿದ್ದಾರೆ.

ನೂತನ ಪೋಪ್ ಅವರ ಘೋಷಣೆಯಾದ ನಂತರ ಪವಿತ್ರ ಪೀಠದ ಮಾಧ್ಯಮ ಕಚೇರಿಯ ನಿರ್ದೇಶಕರಾಗಿರುವ ಮತ್ತಿಯೋ ಬ್ರೂನಿ ಅವರು ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು. "ಈಗಾಗಲೇ ನಾವು ಶಾಂತಿಯ ಕುರಿತ ಪೋಪ್ ಹದಿನಾಲ್ಕನೇ ಲಿಯೋ ಅವರ ಮಾತುಗಳನ್ನು ಆಲಿಸಿದ್ದೇವೆ" ಎಂದು ಅವರು ಹೇಳಿದರು.

ಮುಂದುವರೆದು ಮಾತನಾಡಿದ ಅವರು "ಪೋಪ್ ಹದಿನಾಲ್ಕನೇ ಲಿಯೋ ಅವರು ಕೆಲವು ದಿನಗಳ ಹಿಂದಷ್ಟೇ ಪೋಪ್ ಫ್ರಾನ್ಸಿಸ್ ಅವರು ಹೇಳಿದ ಮಾತುಗಳನ್ನು ಪುನರುಚ್ಛರಿಸಿದರು. ದೇವರು ಎಲ್ಲರನ್ನೂ ಪೊರೆಯುತ್ತಾರೆ; ನಾವೆಲ್ಲರೂ ಒಗ್ಗಟ್ಟಿನಿಂದ ಸಂತೋಷದಿಂದ ನಮ್ಮ ಪಯಣವನ್ನು ಮುಂದುವರೆಸೋಣ. ಸೈತಾನನಿಗೆ ಎಂದಿಗೂ ಜಯವಿಲ್ಲ" ಎಂದು ಹೇಳಿದರು. 

ನೂತನ ವಿಶ್ವಗುರುಗಳು ಪೋಪ್ ಹದಿನಾಲ್ಕನೇ ಲಿಯೋ ಎಂದು ನಾಮಾಂಕಿತವಾದ ಕುರಿತು ಮಾತನಾಡಿದ ಮತ್ತಿಯೋ ಬ್ರೂನಿ ಅವರು "ಲಿಯೋ ಎಂಬುದು ಪೋಪ್ ಹದಿಮೂರನೇ ಲಿಯೋ ಹೆಸರಿಗೆ ಉಲ್ಲೇಖವನ್ನು ಸೂಚಿಸುತ್ತದೆ. ಏಕೆಂದರೆ, ಆಧುನಿಕ ಜಗತ್ತಿನಲ್ಲಿ ಧರ್ಮಸಭೆ ಹೇಗೆ ಬೋಧಿಸಬೇಕು, ಅಂತೆಯೇ, ಆಧುನಿಕ ಕಾಲಘಟ್ಟದಲ್ಲಿ ಸುವಾರ್ತಾ ಪ್ರಸಾರ ಕಾರ್ಯಗಳು ಯಾವ ಸ್ವರೂಪವನ್ನು ತಳೆಯಬೇಕು ಎಂದು ತಮ್ಮ ಪ್ರೇಷಿತ ದಸ್ತಾವೇಜು "ರೇರುಂ ನೊವಾರುಂ" ಮೂಲಕ ಅಂದಿನ ವಿಶ್ವಗುರು ಹದಿಮೂರನೇ ಲಿಯೋ ಅವರು ಸ್ಪಷ್ಟತೆಯನ್ನು ನಿಡಿದರು. ಹಾಗಾಗಿ, ನೂತನ ವಿಶ್ವಗುರುಗಳು ಗೌರವದಿಂದ ಆ ಲಿಯೋ ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರೆ" ಎಂದು ಮತ್ತಿಯೋ ಬ್ರೂನಿ ಪತ್ರಕರ್ತರಿಗೆ ವಿವರಿಸಿದರು.

"ಹಾಗಾಗಿ, ಪ್ರಸ್ತುತ ಜಗತ್ತು ಕೃತಕ ಬುದ್ಧಿಮತ್ತೆಯ ಅಲೆಗಳಿಂದ ಆವರಿಸಿಕೊಂಡಿರುವ ಸಂದರ್ಭದಲ್ಲೂ ಸಹ - ಅಂದು ಪ್ರಾಮಾಣಿಕವಾಗಿ ಧರ್ಮಸಭೆಗಾಗಿ ಸೇವೆ ಸಲ್ಲಿಸಿದ ಮಹನೀಯರಿಗೆ ಗೌರವ ಸೂಚಿಸುವುದೂ ಸಹ ಇದರ ಸಂಕೇತವಾಗಿದೆ" ಎಂದು ಮತ್ತಿಯೋ ಬ್ರೂನಿ ಹೇಳಿದರು.

ಮುಂಬರುವ ಕಾರ್ಯಕ್ರಮಗಳು

ನೂತನ ವಿಶ್ವಗುರುಗಳು ಕಾರ್ಡಿನಲ್ ಪರಿಷತ್ತಿನ ಕಾರ್ಡಿನಾಲರುಗಳೊಂದಿಗೆ ಶುಕ್ರವಾರ ಬೆಳಿಗ್ಗೆ 11: ಗಂಟೆಗೆ (ಭಾರತೀಯ ಕಾಲಮಾನ ಮಧ್ಯಾಹ್ನ 2:30) ಕ್ಕೆ ಸಿಸ್ಟೀನ್ ಪ್ರಾರ್ಥನಾಲಯದಲ್ಲಿ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ಈ ಬಲಿಪೂಜೆಯನ್ನು ನೇರಪ್ರಸಾರ ಮಾಡಲಾಗುವುದು.

ಭಾನುವಾರ ನಡು ಮಧ್ಯಾಹ್ನ  12 ಗಂಟೆಗೆ ವಿಶ್ವಗುರುಗಳು ಸಂತ ಪೇತ್ರರ ಮಹಾದೇವಾಲಯದ ಮುಖ್ಯ ಉಪ್ಪರಿಗೆಯಿಂದ "ರೆಜೀನಾ ಚೇಲಿ" ಪ್ರಾರ್ಥನೆಯನ್ನು ಮುನ್ನಡೆಸಲಿದ್ದಾರೆ. 

ಮೇ 12, ಸೋಮವಾರ ಬೆಳಿಗ್ಗೆ 10 ಗಂಟೆಗೆ ವಿಶ್ವಗುರು ಹದಿನಾಲ್ಕನೇ ಲಿಯೋ ಅವರು ಆರನೇ ಪೌಲರ ಸಭಾಂಗಣದಲ್ಲಿ ಪತ್ರಕರ್ತರನ್ನು ಭೇಟಿ ಮಾಡಲಿದ್ದಾರೆ.

09 ಮೇ 2025, 08:42