ಕಾರ್ಡಿನಲ್ ರೇ: ಕಾಂಕ್ಲೇವ್'ಗೆ ಹೊರಡುವ ಮುನ್ನ ಪವಿತ್ರಾತ್ಮರ ಮಾರ್ಗದರ್ಶನ ಬೇಡುತ್ತೇವೆ
ವರದಿ: ವ್ಯಾಟಿಕನ್ ನ್ಯೂಸ್
ಇಂದು ನೂತನ ಪೋಪ್ ಆಯ್ಕೆಯನ್ನು ಮಾಡುವ "ಕಾಂಕ್ಲೇವ್" ಆರಂಭವಾಗುವ ಹಿನ್ನೆಲೆ, ವ್ಯಾಟಿಕನ್ನಿನ ಸಂತ ಪೇತ್ರರ ಮಹಾದೇವಾಲಯದಲ್ಲಿ ನೂತನ ವಿಶ್ವಗುರುಗಳ ಆಯ್ಕೆಗಾಗಿ "ಪ್ರೋ ಎಲಿಜೆಂದೊ ಪೊಂತಿಫೀಚೆ" ಮಹಾ ಬಲಿಪೂಜೆಯನ್ನು ಅರ್ಪಿಸಲಾಯಿತು. ಈ ಬಲಿಪೂಜೆಯಲ್ಲಿ ಧರ್ಮಸಭೆಯ ಎಲ್ಲಾ ಕಾರ್ಡಿನಲ್ಲುಗಳು ಭಾಗವಹಿಸಿದ್ದರು. ಕಾರ್ಡಿನಲ್ಲುಗಳ ಪರಿಷತ್ತಿನ ಡೀನರಾಗಿರುವ ಕಾರ್ಡಿನಲ್ ಜಿವಾನ್ನಿ ಬತ್ತಿಸ್ತ ರೇ ಅವರು ಬಲಿಪೂಜೆಯನ್ನು ಅರ್ಪಿಸಿದರು. ಪ್ರಬೋಧನೆಯಲ್ಲಿ ಮಾತನಾಡಿರುವ ಅವರು "ನೂತನ ವಿಶ್ವಗುರುಗಳನ್ನು ಆಯ್ಕೆ ಮಾಡಲು ನಾವು ಹೋಗುತ್ತಿರುವ ಹಿನ್ನೆಲೆಯಲ್ಲಿ, ನಾವೆಲ್ಲರೂ ಐಕ್ಯತೆಯಿಂದ ಇದ್ದೇವೆ ಎಂದು ಹೇಳಿದ್ದಾರೆ.
ಅಖಿಲ ಧರ್ಮಸಭೆಯ ಕಾರ್ಡಿನಲ್ಲುಗಳೊಂದಿಗೆ, ನೂರಾರು ಧರ್ಮಾಧ್ಯಕ್ಷರುಗಳು, ಗುರುಗಳು, ಧಾರ್ಮಿಕ ಸಹೋದರ ಸಹೋದರಿಯರು ಹಾಗೂ ಸುಮಾರು 5,000 ಭಕ್ತಾಧಿಗಳು ಈ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ತಮ್ಮ ಪ್ರಬೋಧನೆಯಲ್ಲಿ ಕಾರ್ಡಿನಲ್ ರೇ ಅವರು "ನಾವೆಲ್ಲರೂ ಸಹೋದರರಾಗಿ ಒಂದಾಗಿದ್ದೇವೆ. ಧರ್ಮಸಭೆಯೊಂದಿಗೆ ಹಾಗೂ ದೈವಜನರೊಂದಿಗೆ ಐಕ್ಯತೆಯನ್ನು ಹೊಂದಿದ್ದೇವೆ. ಈ ನಮ್ಮ ಆಯ್ಕೆ ಪ್ರಕ್ರಿಯೆಯಲ್ಲಿ ಪವಿತ್ರಾತ್ಮರು ನಮ್ಮನ್ನು ಮಾರ್ಗದರ್ಶಿಸಲಿ. ಇಂದು ಜಗತ್ತು ಅನೇಕ ಸಮಸ್ಯೆಗಳು ಹಾಗೂ ಸವಾಲುಗಳಿಂದ ಬಳಲುತ್ತಿದೆ. ಇಂತಹ ವಿಷಮ ಕಾಲಘಟ್ಟದಲ್ಲಿ ನಮಗೆ ಕ್ರಿಸ್ತನ ಹೃದಯದ ಭಾಗವಾಗಿರುವಂತಹ ವಿಶ್ವಗುರುಗಳು ದೊರಕಲಿ" ಎಂದು ಕಾರ್ಡಿನಲ್ ಜಿವಾನ್ನಿ ಬತ್ತಿಸ್ತಾ ರೇ ಅವರು ಹೇಳಿದ್ದಾರೆ.
ಇದೇ ವೇಳೆ ಕಾರ್ಡಿನಲ್ ರೇ ಅವರು "ಪ್ರಾರ್ಥನೆಯಲ್ಲಿ ಒಂದೇ ಧರ್ಮಸಭೆಯ ಸಮುದಾಯವಾಗಿ ಒಂದಾಗುವುದು, ವಿವಿಧತೆಯಲ್ಲಿ ವೈವಿಧ್ಯತೆಯನ್ನು ಕಾಣುವುದು, ಸಹೋದರ-ಸಹೋದರರಾಗಿ ಜೀವಿಸುವುದು ಸೇರಿದಂತೆ ವಿಶ್ವ ಶಾಂತಿಗಾಗಿ ಪ್ರಾರ್ಥಿಸುವಂತೆ" ಭಕ್ತಾಧಿಗಳಿಗೆ ಕರೆ ನೀಡಿದ್ದಾರೆ.
ಇದೀಗ ಆರಂಭವಾಗುವ ಕಾಂಕ್ಲೇವ್ (ನೂತನ ಪೋಪ್ ಆಯ್ಕೆ ಪ್ರಕ್ರಿಯೆ) ಇತಿಹಾಸದಲ್ಲೇ ಅತ್ಯಂತ ವೈವಿಧ್ಯಮಯ ಕಾಂಕ್ಲೇವ್ ಆಗಿರಲಿದೆ. ಏಕೆಂದರೆ, ವಿಶ್ವದ ಸುಮಾರು 70 ದೇಶಗಳ ವಿವಿಧ ಕಾರ್ಡಿನಲ್ಲುಗಳು ತಮ್ಮ ನಡುವೆ ಪೇತ್ರರ ಉತ್ತರಾಧಿಕಾರಿಯನ್ನು ನೇಮಿಸಲಿದ್ದಾರೆ.