ಶಾಂತಿಗಾಗಿ ಪ್ರಾರ್ಥಿಸಲು ಭಕ್ತಾಧಿಗಳಿಗೆ ಕರೆ ನೀಡಿದ ಕಾರ್ಡಿನಲ್'ಗಳು
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ನಲ್ಲಿ ಕಾರ್ಡಿನಲ್ಲುಗಳು 10ನೇ ಸಭೆಗೆ ಇಂದು ಒಟ್ಟಾಗಿ ಸೇರಿದ ಸಂದರ್ಭದಲ್ಲಿ ಪ್ರಪಂಚದಲ್ಲಿ ಯುದ್ಧ ನಿರತ ಪ್ರದೇಶಗಳಲ್ಲಿ ಶಾಂತಿ ಒಪ್ಪಂದಗಳು ಆಗುತ್ತಿಲ್ಲ ಎಂಬುದರ ಕುರಿತು ಚರ್ಚಿಸಿ, ಯುದ್ಧ ನಿರತ ಸ್ಥಳಗಳಲ್ಲಿ ಶಾಂತಿ ಮೂಡಲು ಪ್ರಾರ್ಥಿಸುವಂತೆ ಭಕ್ತಾದಿಗಳಿಗೆ ಕರೆ ನೀಡಿದ್ದಾರೆ.
ನೂತನ ಪೋಪ್ ಅವರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಾಳೆ ಆರಂಭವಾಗುತ್ತಿರುವ ಹೊತ್ತಿನಲ್ಲಿ, ಇಂದು ವ್ಯಾಟಿಕನ್ ನಗರದಲ್ಲಿ 10ನೇ ಸಭೆ ಸೇರಿದ ಕಾರ್ಡಿನಲ್ಲುಗಳು ಸಭೆಯ ನಂತರ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಪತ್ರಿಕಾ ಹೇಳಿಕೆಯಲ್ಲಿ ಜಗತ್ತಿನಲ್ಲಿ ಪ್ರಸ್ತುತ ಯುದ್ಧ ನಡೆಯುತ್ತಿರುವ ಪ್ರದೇಶಗಳಾದ ಉಕ್ರೇನ್, ಮಧ್ಯಪ್ರಾಚ್ಯ ಹಾಗೂ ಇತರೆ ಭಾಗಗಳಲ್ಲಿ ಶಾಂತಿ ಒಪ್ಪಂದಗಳು ನಡೆಯುತ್ತಿಲ್ಲ. ಈ ಪ್ರದೇಶಗಳಲ್ಲಿ ಶಾಂತಿಯನ್ನು ಮೂಡಿಸುವಲ್ಲಿ ಯಾವುದೇ ಬೆಳವಣಿಗೆ ಕಂಡು ಬರುತ್ತಿಲ್ಲವೆಂದು "ವಿಷಾದದಿಂದ" ಹೇಳಿಕೆ ನೀಡಿದ್ದಾರೆ.
ವ್ಯಾಟಿಕನ್ನಿನ ಮಾಧ್ಯಮ ಕಚೇರಿಯು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಮುಂದುವರೆದು ಮಾತನಾಡಿರುವ ಕಾರ್ಡಿನಲ್ಲುಗಳು "ಯುದ್ಧವು ಮುಂದುವರೆಯುತ್ತಲೇ ಇದ್ದು ಇದರಿಂದ ನಾಗರೀಕರು ತಮ್ಮದಲ್ಲದ ತಪ್ಪಿಗೆ ಬಲಿಯಾಗುತ್ತಿದ್ದಾರೆ" ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಜಗತ್ತಿನಲ್ಲಿ ಶಾಂತಿ ಮೂಡಲು ಹಾಗೂ ಮುಗ್ಧ ಜನರ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ ನಡೆಯುತ್ತಿರುವ ಕ್ರೌರ್ಯವನ್ನು ತಡೆಗಟ್ಟಲು ಎಲ್ಲರೂ ಸಹ ಪ್ರಾರ್ಥನೆಯನ್ನು ಮಾಡಬೇಕೆಂದು ಭಕ್ತಾದಿಗಳಿಗೆ ಕಾರ್ಡಿನಲ್ಲುಗಳು ಇಂದು ಕರೆ ನೀಡಿದ್ದಾರೆ.