MAP

ಕಾರ್ಡಿನಲ್ ಪರೋಲಿನ್: ಕಥೋಲಿಕ ಸಾಮಾಜಿಕ ಚಿಂತನೆ ವಿಭಜನಾತ್ಮಕ ಜಗತ್ತನ್ನು ಗುಣಪಡಿಸಬಲ್ಲದು

ಚೆಂತಿಸಿಮುಸ್ ಆನ್ನುಸ್ ಪ್ರೋ ಪೊಂತಿಫೀಚೆ ಪ್ರತಿಷ್ಟಾನದ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಕಥೋಲಿಕ ಸಾಮಾಜಿಕ ಚಿಂತನೆ ವಿಭಜನಾತ್ಮಕ ಜಗತ್ತನ್ನು ಗುಣಪಡಿಸಬಲ್ಲದು ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಜಗತ್ತು ವಿಭಜನಾತ್ಮಕವಾಗುತ್ತಿರುವ ಹೊತ್ತಿನಲ್ಲಿ ನೈತಿಕ ಸ್ಪಷ್ಟತೆ ಹಾಗೂ ಐಕ್ಯತೆಯ ಕಾರ್ಯವನ್ನು ಹೊಂದಬೇಕು ಎಂದು ಹೇಳಿರುವ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಚೆಂತಿಸಿಮುಸ್ ಆನ್ನುಸ್ ಪ್ರೊ ಪೊಂತಿಫೀಚಿ ಪ್ರತಿಷ್ಟಾನದ ಸದಸ್ಯರನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಅವರು "ಜಗತ್ತಿನ ಆಡಳಿತವನ್ನು ಬಲಪಡಿಸಿ, ದೃವೀಕರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಥೋಲಿಕ ಸಾಮಾಜಿಕ ಚಿಂತನೆಯು ಅತ್ಯುತ್ತಮ ಹಾಗೂ ಬಹುಮುಖ್ಯ ಚೌಕಟ್ಟನ್ನು ಹೊಂದಿದೆ ಎಂದು ಹೇಳಿದರು.

"ಕಥೋಲಿಕ ಸಾಮಾಜಿಕ ಚಿಂತನೆ: ಜಗತ್ತಿನ ಆಡಳಿತವನ್ನು ವೃದ್ಧಿಸುವುದು ಮತ್ತು ದೃವೀಕರಣವನ್ನು ಮೆಟ್ಟಿನಿಲ್ಲುವುದು" ಎಂಬ ಶೀರ್ಷಿಕೆಯ ಮೇಲೆ ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಅವರು ತಮ್ಮ ಮಾತುಗಳನ್ನು ಕೇಂದ್ರೀಕರಿಸಿದ್ದರು. ತಮ್ಮ ಮಾತುಗಳಲ್ಲಿ ಅವರು ಧರ್ಮಸಭೆಯ ಸಾಮಾಜಿಕ ಚಿಂತನೆ, ಸಂವಾದ, ನ್ಯಾಯ ಹಾಗೂ ಶಾಂತಿ ಸೇರಿದಂತೆ ಇತರ ಅಂಶಗಳ ಕುರಿತು ಮಾತನಾಡಿದರು.

"ನಾವು ತಿರುವುಹಾದಿಗಳಲ್ಲಿ ನಿಂತಿದ್ದೇವೆ" ಎಂದು ಹೇಳಿದ ಕಾರ್ಡಿನಲ್ ಪರೋಲಿನ್ "ಹವಾಮಾನ ಬದಲಾವಣೆ, ಅಸಮಾನತೆ ಮತ್ತು ವಲಸೆಯಂತಹ ಜಾಗತಿಕ ಸವಾಲುಗಳಿಗೆ ಹೆಚ್ಚಿನ ಸಹಕಾರದ ಅಗತ್ಯವಿರುತ್ತದೆ, ಆದರೆ ನಾವು ಆಗಾಗ್ಗೆ ಅಪನಂಬಿಕೆ ಮತ್ತು ವಿಘಟನೆಗೆ ಸಾಕ್ಷಿಯಾಗುತ್ತಿದ್ದೇವೆ" ಎಂದು ಹೇಳಿದರು.

ಕಥೋಲಿಕ ಸಾಮಾಜಿಕ ಚಿಂತನೆ ಎಂಬುದು ಕಟ್ಟುನಿಟ್ಟಿನ ಸಂಪ್ರದಾಯವಲ್ಲ ಬದಲಿಗೆ ಇದು ಕ್ರಿಯಾತ್ಮಕ ಸಂಪ್ರದಾಯವಾಗಿದೆ ಎಂದು ಕಾರ್ಡಿನಲ್ ಪರೋಲಿನ್ ಅವರು ಹೇಳಿದರು. ಧರ್ಮಸಭೆಯ ಮೂಲ ತತ್ವಗಳಾದ - ಮಾನವ ಘನತೆ, ಸಾಮಾನ್ಯ ಒಳಿತು, ಒಗ್ಗಟ್ಟು, ಮತ್ತು ಸೃಷ್ಟಿಯ ಕಾಳಜಿ - ಸಮಕಾಲೀನ ಬಿಕ್ಕಟ್ಟುಗಳನ್ನು ಪರಿಹರಿಸಲು ಸಾರ್ವತ್ರಿಕ ನೈತಿಕ ದಿಕ್ಸೂಚಿಯನ್ನು ನೀಡುತ್ತವೆ ಎಂದು ಅವರು ಹೇಳಿದರು.

ಧ್ರುವೀಕರಣದ ವಿಷಯದ ಕುರಿತು ಮಾತನಾಡಿದ ಕಾರ್ಡಿನಲ್ ಪರೋಲಿನ್, ಡಿಜಿಟಲ್ ಮಾಧ್ಯಮದಿಂದ ತೀವ್ರಗೊಂಡ ಸೈದ್ಧಾಂತಿಕ ಬಿರುಕುಗಳು ನಂಬಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಹೇಗೆ ಬೆದರಿಸುತ್ತವೆ ಎಂಬುದನ್ನು ವಿವರಿಸಿದರು.

ಮುಂದುವರೆದು ಮಾತನಾಡಿದ ಕಾರ್ಡಿನಲ್ ಪರೋಲಿನ್ "ಸಂಭಾಷಣೆ ಮತ್ತು "ಸಂಪರ್ಕದ ಸಂಸ್ಕೃತಿ"ಯನ್ನು ಬೆಳೆಸುವ ಮೂಲಕ ಸತ್ಯವನ್ನು ಅನುಸರಿಸಬೇಕು, ಅಲ್ಲಿ ಆಲಿಸುವಿಕೆ ಮತ್ತು ನಮ್ರತೆಯು ಚರ್ಚೆಗೆ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು.

ಜಾಗತಿಕ ವಿಭಜನೆಗಳನ್ನು ದಾಟಲು ಒಗ್ಗಟ್ಟಿನ ಸೇತುವೆಯಾಗಿಯೂ ಕೆಲಸ ಮಾಡಬೇಕು ಎಂದು ಅವರು ಹೇಳಿದರು ಮತ್ತು ಪರಿಸರ ಬಿಕ್ಕಟ್ಟುಗಳು ಸಿದ್ಧಾಂತವನ್ನು ಲೆಕ್ಕಿಸದೆ ಎಲ್ಲಾ ರಾಷ್ಟ್ರಗಳ ಮೇಲೆ ಪರಿಣಾಮ ಬೀರುವುದರಿಂದ ಸೃಷ್ಟಿಯ ಕಾಳಜಿಯು ಸಾರ್ವತ್ರಿಕ ಕಾಳಜಿಯಾಗಬೇಕು ಎಂದು ಅವರು ಹೇಳಿದರು.

ಕೊನೆಯಲ್ಲಿ, ಕಾರ್ಡಿನಲ್ ಪರೋಲಿನ್ ಅವರು ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗಳನ್ನು ನವೀಕರಿಸುವ ಪ್ರಯತ್ನಗಳಿಗೆ ಮಾರ್ಗದರ್ಶನ ನೀಡುವಲ್ಲಿ ಕಥೋಲಿಕ ಸಾಮಾಜಿಕ ಸಿದ್ಧಾಂತದ ನಿರಂತರ ಪ್ರಸ್ತುತತೆಯನ್ನು ಪುನರುಚ್ಚರಿಸಿದರು.

"ಜಾಗತಿಕ ಆಡಳಿತವು ಕೇವಲ ವ್ಯವಸ್ಥೆಗಳ ಬಗ್ಗೆ ಅಲ್ಲ - ಅದು ಪ್ರೀತಿಯ ನಾಗರಿಕತೆಯನ್ನು ನಿರ್ಮಿಸುವ ಬಗ್ಗೆ" ಎಂದು ಅವರು ಹೇಳಿದರು. "ಧ್ರುವೀಕರಣ ಅನಿವಾರ್ಯವಲ್ಲ. ಸತ್ಯ, ಒಗ್ಗಟ್ಟು ಮತ್ತು ಹಂಚಿಕೆಯ ಉದ್ದೇಶದ ಮೂಲಕ ಅದನ್ನು ಜಯಿಸಬಹುದು." ಎಂದು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

17 ಮೇ 2025, 16:34