ಕಾರ್ಡಿನಲ್ ಪರಿಷತ್ತಿನ ಹತ್ತನೇ ಸಭೆ: ವ್ಯಾಟಿಕನ್ನಿಗೆ ಬಂದ ಎಲ್ಲಾ ಕಾರ್ಡಿನಲ್ ಮತದಾರರು
ವರದಿ: ವ್ಯಾಟಿಕನ್ ಸಭೆ
ಮುಂಬರುವ ಕಾನ್ಕ್ಲೇವ್ ಗೆ ಸಿದ್ಧರಾಗಲು ಇಂದು ಎಲ್ಲಾ ಕಾರ್ಡಿನಲ್ಲುಗಳು ವ್ಯಾಟಿಕನ್ನಿನಲ್ಲಿ ಹತ್ತನೇ ಸಾಮಾನ್ಯ ಸಭೆಯನ್ನು ಹಮ್ಮಿಕೊಂಡಿದ್ದಾರೆ. ಪ್ರಸ್ತುತ ಧರ್ಮಸಭೆಯ ಸ್ಥಿತಿಗತಿಗಳು ಹಾಗೂ ಭವಿಷ್ಯದ ಭರವಸೆಯ ಕುರಿತು ಅವರು ಚರ್ಚಿಸಿದ್ದಾರೆ.
ಪವಿತ್ರ ಪೀಠದ ಮಾಧ್ಯಮ ಸಂವಹನ ಭಾಗದ ನಿರ್ದೇಶಕರಾಗಿರುವ ಮತ್ತಿಯೋ ಬ್ರೂನಿ ಅವರು "ಇಂದು 179 ಕಾರ್ಡಿನಲ್ಗಳು ಈ ಸಭೆಯಲ್ಲಿ ಹಾಜರಿದ್ದರು. ಇವರಲ್ಲಿ 132 ಅಂದರೆ ಎಲ್ಲಾ ಕಾರ್ಡಿನಲ್ ಮತದಾರರುಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಪ್ರಸ್ತುತ ಧರ್ಮಸಭೆಯ ಆಗುಹೋಗುಗಳ ಕುರಿತು ಚರ್ಚಿಸಲಾಯಿತು" ಎಂದು ಅವರು ಹೇಳಿದರು.
ಮೇ 7 ರಂದು ಕಾನ್ಕ್ಲೇವ್ ಆರಂಭಗೊಳ್ಳುತ್ತಿರುವ ಹಿನ್ನೆಲೆ ಎಲ್ಲಾ ಕಾರ್ಡಿನಲ್ ಮತದಾರರು ರೋಮ್ ನಗರದಲ್ಲಿದ್ದಾರೆ ಎಂದು ಮತ್ತಿಯೋ ಬ್ರೂನಿ ಹೇಳಿದರು.
ಕಾರ್ಡಿನಲ್ ಕ್ಯಾಮರೆಲೆಂಗೋ ಕೆವಿನ್ ಫಾರೆಲ್ ಅವರು ಲಾಟರಿಯ ಮೂಲಕ ಕಾಸಾ ಸಾಂತ ಮರಿಯ ನಿವಾಸದಲ್ಲಿ ಕಾರ್ಡಿನಲ್ಲುಗಳಿಗೆ ಕೊಠಡಿಯನ್ನು ನಿಗಧಿಪಡಿಸಿದ್ದಾರೆ ಎಂದು ಕಾರ್ಡಿನಲ್ ಪರಿಷತ್ತಿನ ಡೀನರಾಗಿರುವ ಕಾರ್ಡಿನಲ್ ಜಿವಾನಿ ಬತ್ತಿಸ್ತ ರೇ ಅವರು ಮತದಾರ ಕಾರ್ಡಿನಲ್ಲುಗಳಿಗೆ ಹೇಳಿದರು.
ಮತ್ತಿಯೋ ಬ್ರೂನಿ ಅವರು ಈ ಕುರಿತು ಮಾತನಾಡಿ "ಎಲ್ಲಾ ಕಾರ್ಡಿನಲ್ ಮತದಾರರು ಅವರಿಷ್ಟದಂತೆ ಸಿಸ್ಟೈನ್ ಚಾಪೆಲ್'ಗೆ ಬರಬಹುದು. ನಡೆದುಕೊಂಡೂ ಸಹ ಬರಬಹುದು - ಆದರೆ ಸುರಕ್ಷಿತ ಮಾರ್ಗದ ಮೂಲಕವೇ ನಡೆದುಕೊಂಡು ಬರಬಹುದು" ಎಂದು ಹೇಳಿದ್ದಾರೆ.
ಈ ಕಾರ್ಡಿನಲ್ ಸಭೆಯಲ್ಲಿ ಸುಮಾರು 26 ಕಾರ್ಡಿನಲ್ಲುಗಳು ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಚರ್ಚಿಸಿದ ಮುಖ್ಯ ವಿಷಯಗಳ ಪೈಕಿ ಸಿನೊಡಾಲಿಟಿ ಹಿನ್ನೆಲೆಯಲ್ಲಿ ಧರ್ಮಸಭೆಯಲ್ಲಿ ಮಹಿಳೆಯರ ಪಾತ್ರ, ದೈವಕರೆ, ಕುಟುಂಬ, ಮಕ್ಕಳ ಶಿಕ್ಷಣ, ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು.
ಮುಂದುವರೆದು ಮಾತನಾಡಿದ ಬ್ರೂನಿ ಅವರು "ಸಿಸ್ಟೈನ್ ಚಾಪೆಲ್'ನಲ್ಲಿ ಬಹುತೇಕ ಎಲ್ಲಾ ಕೆಲಸಗಳು ಮುಗಿದಿವೆ. ಕಾಸಾ ಸಾಂತ ಮಾರ್ತದಲ್ಲಿ ಮತದಾರ ಕಾರ್ಡಿನಲ್ಲುಗಳಿಗೆ ಕೊಠಡಿಗಳನ್ನು ನೀಡಲಾಗಿದೆ" ಎಂದು ಹೇಳಿದರು.