ನೊವೆಮ್ಡಿಯಲ್ಸ್: ಕಾರ್ಡಿನಲ್ಸ್ ಗಳ ಒಂಬತ್ತು ದಿನಗಳ ಶೋಕಾಚರಣೆಗೆ ವೇಳಾಪಟ್ಟಿಯನ್ನು ನಿಗದಿಪಡಿಸಿದ್ದಾರೆ
ವ್ಯಾಟಿಕನ್ ಸುದ್ದಿ
ಪ್ರಾಚೀನ ಸಂಪ್ರದಾಯವನ್ನು ಅನುಸರಿಸಿ, ಕಥೋಲಿಕ ಧರ್ಮಸಭೆಯು ಸತತ ಒಂಬತ್ತು ದಿನಗಳ ಶೋಕಾಚರಣೆಯನ್ನು ಆಚರಿಸುತ್ತದೆ, ಇದರಲ್ಲಿ ದಿವಂಗತ ವಿಶ್ವಗುರು ಫ್ರಾನ್ಸಿಸ್ ರವರ ಸ್ಮರಣೆಗಾಗಿ ದಿವ್ಯ ಬಲಿಪೂಜೆಯನ್ನು ಅರ್ಪಿಸಲಾಗುತ್ತದೆ.
ಈ ಸ್ಮರಣಾರ್ಥಕ ದಿವ್ಯ ಬಲಿಪೂಜೆಯ ಆಚರಣೆಗಳು ಎಲ್ಲರಿಗೂ ಮುಕ್ತವಾಗಿದ್ದರೂ, ಪ್ರತಿದಿನ ಪೂಜ್ಯ ತಂದೆಯೊಂದಿಗಿನ ಅವರ ಸಂಪರ್ಕದ ಆಧಾರದ ಮೇಲೆ ವಿಭಿನ್ನ ಗುಂಪು ಭಾಗವಹಿಸಲು ನಿರ್ಧರಿಸಲಾಗಿದೆ.
ಗುಂಪುಗಳ ಈ ವೈವಿಧ್ಯತೆಯು "ಸರ್ವೋಚ್ಛ ವಿಶ್ವಗುರುವಿನ ಸೇವೆಯ ವ್ಯಾಪ್ತಿ ಮತ್ತು ರೋಮ್ ಧರ್ಮಸಭೆಯ ಸಾರ್ವತ್ರಿಕತೆ" ಎರಡನ್ನೂ ಪ್ರತಿಬಿಂಬಿಸುತ್ತದೆ (cf. ಆರ್ಡೊ ಎಕ್ಸೆಕ್ವಿಯರಮ್ ರೊಮಾನಿ ಪಾಂಟಿಫಿಸಿಸ್, ಸಂಖ್ಯೆಗಳು 124–125).
ರೋಮ್‌ನಲ್ಲಿರುವ ಕಾರ್ಡಿನಲ್‌ಗಳು ಬುಧವಾರ ಸಂಜೆ ನಡೆದ ತಮ್ಮ ಎರಡನೇ ಸಾರ್ವತ್ರಿಕ ಸಭೆಯಲ್ಲಿ ಪ್ರತಿಯೊಂದು ವಿವ್ಯಬಲಿಪೂಜೆಯನ್ನು ಯಾರು ಆಚರಿಸಬೇಕೆಂದು ವೇಳಾಪಟ್ಟಿಯನ್ನು ನಿಗದಿಪಡಿಸಿದರು.
ನವದಿನಗಳ ಶೋಕಾಚರಣೆಯ ದಿವ್ಯ ಬಲಿಪೂಜೆ
ನವ ದಿನಗಳ, ಮೊದಲ ದಿನವನ್ನು ಬೆಳಿಗ್ಗೆ 10:00 ಗಂಟೆಗೆ ಸಂತ ಪೇತ್ರರ ಮಹಾದೇವಾಲಯದ ಚೌಕದಲ್ಲಿ ವಿಶ್ವಗುರು ಫ್ರಾನ್ಸಿಸ್ ರವರ ಅಂತ್ಯಕ್ರಿಯೆಯ ದಿವ್ಯಬಲಿಪೂಜೆಯೊಂದಿಗೆ ಆಚರಿಸಲಾಗುವುದು.
ಮುಂದಿನ ದಿನಗಳಲ್ಲಿ, ನವದಿನಗಳ ದಿವ್ಯ ಬಲಿಪೂಜೆಯನ್ನು ಅರ್ಪಿಸಿಸುವವರು ಈ ಕೆಳಗಿನಂತಿರುತ್ತಾರೆ (ಎಲ್ಲಾ ಸಮಯಗಳು ರೋಮ್‌ನಲ್ಲಿ ಸ್ಥಳೀಯ ಸಮಯ - GMT +2).
-ಎರಡನೇ ದಿನ: ಏಪ್ರಿಲ್ 27, ಭಾನುವಾರ, ಬೆಳಿಗ್ಗೆ 10:30 ಕ್ಕೆ ಸಂತ ಪೇತ್ರರ ಮಹಾದೇವಾಲಯದ ಚೌಕದಲ್ಲಿ ದಿವ್ಯಬಲಿಪೂಜೆಯ ಅಧ್ಯಕ್ಷತೆಯನ್ನು ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ರವರು ವಹಿಸಲಿದ್ದಾರೆ ಮತ್ತು ಈ ದಿನದ ನಿರ್ದಿಷ್ಟ ಗುಂಪು ವ್ಯಾಟಿಕನ್ ನಗರದ ನೌಕರರು ಮತ್ತು ಭಕ್ತವಿಶ್ವಾಸಿಗಳಾಗಿರುತ್ತಾರೆ.
-ಮೂರನೇ ದಿನ: ಸೋಮವಾರ, ಏಪ್ರಿಲ್ 28, ಸಂಜೆ 5:00 ಗಂಟೆಗೆ ಸಂತ ಪೇತ್ರರ ಮಹಾದೇವಾಲಯದ ಚೌಕದಲ್ಲಿ ದಿವ್ಯಬಲಿಪೂಜೆಯನ್ನು ರೋಮ್ ಧರ್ಮಕ್ಷೇತ್ರದ ವಿಕಾರ್ ಜನರಲ್ ಕಾರ್ಡಿನಲ್ ಬಾಲ್ದಾಸರೆ ರೈನಾರವರು ಅಧ್ಯಕ್ಷತೆ ವಹಿಸಲಿದ್ದಾರೆ ಮತ್ತು ಇಂದಿನ ನಿರ್ದಿಷ್ಟ ಗುಂಪು ರೋಮ್ ಧರ್ಮಸಭೆಯಾಗಿರುತ್ತದೆ.
-ನಾಲ್ಕನೇ ದಿನ: ಮಂಗಳವಾರ, ಏಪ್ರಿಲ್ 29, ಸಂಜೆ 5:00 ಗಂಟೆಗೆ ಸಂತ ಪೇತ್ರರ ಮಹಾದೇವಾಲಯದಲ್ಲಿ, ವ್ಯಾಟಿಕನ್‌ನಲ್ಲಿರುವ ಸಂತ ಪೇತ್ರರ ಪೇಪಲ್ ಮಹಾದೇವಾಲಯದ ಮಹಾಯಾಜಕರಾದ ಕಾರ್ಡಿನಲ್ ಮೌರೊ ಗ್ಯಾಂಬೆಟ್ಟಿರವರ ಅಧ್ಯಕ್ಷತೆಯಲ್ಲಿ ನಡೆಯುವ ದಿವ್ಯಬಲಿಪೂಜೆಯನ್ನು, ಇಂದಿನ ನಿರ್ದಿಷ್ಟ ಗುಂಪು ಪೇಪಲ್ ಮಹಾದೇವಾಲಯದಕ್ಕೆ ಸಂಬಂಧಿಸಿದ ಮಹಾಸಭೆಯ ಸದಸ್ಯರು (Chapters of the Papal Basilicas) ಅಥವಾ ಮುಖ್ಯಾಧಿಕಾರಿಗಳು ಭಾಗವಹಿಸಲಿದ್ದಾರೆ.
- ಐದನೇ ದಿನ: ಬುಧವಾರ, ಏಪ್ರಿಲ್ 30, ಸಂಜೆ 5:00 ಗಂಟೆಗೆ ಸಂತ ಪೇತ್ರರ ಮಹಾದೇವಾಲಯದಲ್ಲಿ, ಕಾರ್ಡಿನಲ್ಸ್ ಒಕ್ಕೂಟದ ವೈಸ್-ಡೀನ್ ಕಾರ್ಡಿನಲ್ ಲಿಯೊನಾರ್ಡೊ ಸ್ಯಾಂಡ್ರಿರವರು ದಿವ್ಯಬಲಿಪೂಜೆಯ ಅಧ್ಯಕ್ಷತೆ ವಹಿಸಲಿದ್ದಾರೆ, ಈ ದಿನದ ನಿರ್ದಿಷ್ಟ ಗುಂಪು ಪೇಪಲ್ ಪ್ರಾರ್ಥನಾ ಮಂದಿರದ ಸದಸ್ಯರುಗಳು ಆಗಿರುತ್ತಾರೆ.
- ಆರನೇ ದಿನ: ಮೇ 1, ಗುರುವಾರ, ಸಂಜೆ 5:00 ಗಂಟೆಗೆ ಸಂತ ಪೇತ್ರರ ಮಹಾದೇವಾಲಯದಲ್ಲಿ. ಪವಿತ್ರ ರೋಮನ್ ಧರ್ಮಸಭೆಯ ಕ್ಯಾಮರ್ಲೆಂಗೊ ಕಾರ್ಡಿನಲ್ ಕೆವಿನ್ ಜೋಸೆಫ್ ಫಾರೆಲ್ ರವರು, ರೋಮನ್ ಕ್ಯೂರಿಯಾದ (ಕಾರ್ಯಾಲಯ) ಗುಂಪಿನೊಂದಿಗೆ ದಿವ್ಯಬಲಿಪೂಜೆಯ ಅಧ್ಯಕ್ಷತೆ ವಹಿಸಲಿದ್ದಾರೆ.
- ಏಳನೇ ದಿನ: ಮೇ 2, ಶುಕ್ರವಾರ, ಸಂಜೆ 5:00 ಗಂಟೆಗೆ ಸಂತ ಪೇತ್ರರ ಮಹಾದೇವಾಲಯದಲ್ಲಿ. ದಿವ್ಯಬಲಿಪೂಜೆಯ ಅಧ್ಯಕ್ಷತೆಯನ್ನು ಪೂರ್ವ ಧರ್ಮಸಭೆಳ ಡಿಕ್ಯಾಸ್ಟರಿಯ ಪ್ರಿಫೆಕ್ಟ್ ಎಮೆರಿಟಸ್ ಕಾರ್ಡಿನಲ್ ಕ್ಲಾಡಿಯೊ ಗುಗೆರೊಟ್ಟಿರವರು ವಹಿಸಲಿದ್ದಾರೆ, ಇಂದಿನ ನಿರ್ದಿಷ್ಟ ಗುಂಪು ಪೂರ್ವ ಧರ್ಮಸಭೆಗಳು ಭಾಗವಹಿಸಲಿವೆ.
- ಎಂಟನೇ ದಿನ: ಮೇ 3, ಶನಿವಾರ, ಸಂಜೆ 5:00 ಗಂಟೆಗೆ ಸಂತ ಪೇತ್ರರ ಮಹಾದೇವಾಲಯದಲ್ಲಿ. ಪ್ರಭುವಿನ ಸೇವಾ ಜೀವನಕ್ಕೆ ಅಭಿಷೇಕಿಸಲ್ಪಟ್ಟಿರುವ ಸಂಸ್ಥೆಗಳು ಮತ್ತು ಅಪೋಸ್ಟೋಲಿಕ್ ಜೀವನ ಸಂಘಗಳ ಡಿಕ್ಯಾಸ್ಟರಿಯ ಪ್ರೊ-ಪ್ರಿಫೆಕ್ಟ್ ಎಮೆರಿಟಸ್ ಕಾರ್ಡಿನಲ್ ಏಂಜೆಲ್ ಫೆರ್ನಾಂಡಿಸ್ ಆರ್ಟೈಮ್ ರವರು, ಅಭಿಷೇಕಿಸಲ್ಪಟ್ಟಿರುವ ಸಂಸ್ಥೆಗಳು ಮತ್ತು ಅಪೋಸ್ಟೋಲಿಕ್ ಜೀವನ ಸಂಘಗಳ ಸದಸ್ಯರೊಂದಿಗೆ ಇಂದಿನ ದಿವ್ಯ ಬಲಿಪೂಜೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
-ಒಂಬತ್ತನೇ ದಿನ: ಮೇ 4, ಭಾನುವಾರ, ಸಂಜೆ 5:00 ಗಂಟೆಗೆ ಸಂತ ಪೇತ್ರರ ಮಹಾದೇವಾಲಯದಲ್ಲಿ. ಕಾರ್ಡಿನಲ್ಸ್ ಒಕ್ಕೂಟದ ಪ್ರೋಟೋಡೀಕಾನ್ ಕಾರ್ಡಿನಲ್ ಡೊಮಿನಿಕ್ ಮಾಂಬರ್ಟಿರವರು, ಪೇಪಲ್ ಪ್ರಾರ್ಥನಾ ಮಂದಿರದ ಗುಂಪಿನೊಂದಿಗೆ ದಿವ್ಯಬಲಿಪೂಜೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಏಪ್ರಿಲ್ 30 ಮತ್ತು ಮೇ 4 ರಂದು ಪೇಪಲ್ ಪ್ರಾರ್ಥನಾ ಮಂದಿರಕ್ಕೆ ಸಮರ್ಪಿತವಾದ ದಿವ್ಯಬಲಿಪೂಜೆಗಳನ್ನು ಆಚರಿಸಲು ಕಾರ್ಡಿನಲ್ಸ್‌ಗೆ ಮಾತ್ರ ಅವಕಾಶವಿರುತ್ತದೆ.