ಜೈಲುಗಳಲ್ಲಿ ಸಂಸ್ಕೃತಿಯ ಪಾತ್ರದ ಕುರಿತು ಕೇಂದ್ರೀಕರಿಸಲು ವ್ಯಾಟಿಕನ್ ಕಾರ್ಯಕ್ರಮ
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ನಿನ ಸಂಸ್ಕೃತಿ ಮತ್ತು ಶಿಕ್ಷಣ ಹಾಗೂ ಮಾಧ್ಯಮ ಸಂವಹನ ಪೀಠಗಳು ಜಂಟಿಯಾಗಿ ಜೈಲುಗಳಲ್ಲಿ ಅಥವಾ ಸುಧಾರಣಾ ಸಂಸ್ಥೆಗಳಲ್ಲಿ ಸಂಸ್ಕೃತಿಯು ಯಾವ ಪಾತ್ರವನ್ನು ವಹಿಸುತ್ತದೆ ಎಂಬ ಕುರಿತು ಕಾರ್ಯಕ್ರಮವನ್ನು ಆಯೋಜಿಸಲಿವೆ. ಈ ಕುರಿತ ಸಭೆಯು ಏಪ್ರಿಲ್ 10 ರಂದು ವ್ಯಾಟಿಕನ್ನಿನ ಸಂತ ಹತ್ತನೇ ಭಕ್ತಿನಾಥರ ಸಭಾಂಗಣದಲ್ಲಿ ನಡೆಯಲಿದ್ದು, ಈ ಸಭೆಯಲ್ಲಿ ಶಿಕ್ಷಣತಜ್ಞರು, ಕಲಾವಿದರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.
"ಜೈಲುಗಳಲ್ಲಿ ಸಂಸ್ಕೃತಿಯೇ ಬದುಕು" ಎಂಬುದು ಈ ಕಾರ್ಯಕ್ರಮದ ಶೀರ್ಷಿಕೆಯಾಗಿದೆ. ಈ ಸಭೆಯನ್ನು ಇಟಲಿಯ ಪತ್ರಕರ್ತ ರಿಕಾರ್ಡೋ ಲಕೋನ ಅವರು ಮುನ್ನಡೆಸಲಿದ್ದು, ಈ ಸಭೆಯಲ್ಲಿ ಶಿಕ್ಷಣತಜ್ಞರು, ಕಲಾವಿದರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.
ಈ ಸಭೆಯನ್ನು ವ್ಯಾಟಿಕನ್ನಿನ ಸಂಸ್ಕೃತಿ ಮತ್ತು ಶಿಕ್ಷಣ ಪೀಠದ ಉಸ್ತುವಾರಿಯಾಗಿರುವ ಕಾರ್ಡಿನಲ್ ಹೊಸೆ ತೊಲೆಂತೀನೋ ಡೆ ಮೆಂಡೋನ್ಸಾ ಹಾಗೂ ಮಾಧ್ಯಮ ಸಂವಹನ ಪೀಠದ ನಿರ್ದೇಶಕ ಡಾ. ಪೌಲೋ ರುಫಿನಿ ಅವರು ಉದ್ಘಾಟಿಸಲಿದ್ದಾರೆ.
ರೋಮ್ ವಿಶ್ವವಿದ್ಯಾಲಯದ ಸ್ಟೆಫಾನೊ ಅನಸ್ತಾಸಿಯಾ; ಕಲಾವಿದೆ ಲಾರಿ ಆಂಡರ್ಸನ್; ರೇಡಿಯೋ ವ್ಯಾಟಿಕಾನಾ - ವ್ಯಾಟಿಕನ್ ನ್ಯೂಸ್‌ನ ಪತ್ರಕರ್ತೆ ರಾಬರ್ಟಾ ಬಾರ್ಬಿ; ಇಟಾಲಿಯನ್ ಲೇಖಕಿ ಮತ್ತು ನಿರ್ಮಾಪಕಿ ರೋಸಾ ಗ್ಯಾಲಂಟಿನೊ; ಇಟಲಿಯ ಸಾರ್ವಜನಿಕ ಪ್ರಸಾರಕ ರೈ 3, ಪ್ರೆಸಾಡಿರೆಟ್ಟಾ ಕಾರ್ಯಕ್ರಮದ ಪತ್ರಕರ್ತೆ ತೆರೇಸಾ ಪಾವೊಲಿ; ಕಾನ್ಸಿಲಿಯಾಜಿಯೋನ್ 5 ರ ಕ್ಯುರೇಟರ್ ಮತ್ತು ಮ್ಯಾಕ್ರೋ ನಿರ್ದೇಶಕಿ ಕ್ರಿಸ್ಟಿಯಾನಾ ಪೆರೆಲ್ಲಾ; ರೋಮ್‌ನ ಲಾ ಸಪಿಯೆಂಜಾ ವಿಶ್ವವಿದ್ಯಾಲಯದ ಪಿಸಾನಾ ಪೊಸೊಕ್ಕೊ ಮತ್ತು ಮಾರ್ಟಾ ಮಾರ್ಚೆಟ್ಟಿ; ಪ್ಯಾಸ್ಟಿಫಿಸಿಯೊ ಸೆರೆರೆ ಫೌಂಡೇಶನ್‌ನ ಕಲಾತ್ಮಕ ನಿರ್ದೇಶಕ ಮಾರ್ಸೆಲ್ಲೊ ಸ್ಮಾರೆಲ್ಲಿ; ಮತ್ತು ಕಲಾವಿದ ಟೊಮಾಸೊ ಸ್ಪಾಜಿನಿ ವಿಲ್ಲಾ ಸೇರಿದಂತೆ ವಿವಿಧ ಗಣ್ಯ ವ್ಯಕ್ತಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ಯೋಜನೆಗಳ ಪ್ರಸ್ತುತಿ
ಈ ಕಾರ್ಯಕ್ರಮದ ಸಂದರ್ಭದಲ್ಲಿ, ಸುಧಾರಣಾ ಸಂಸ್ಥೆಗಳಲ್ಲಿ ಕೈಗೊಳ್ಳಲಾದ ಕೆಲಸದ ಕುರಿತು - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ - ಹಿಂದಿನ, ವರ್ತಮಾನ ಮತ್ತು ಭವಿಷ್ಯದ - ಹಲವಾರು ಯೋಜನೆಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಪ್ರಸಿದ್ಧ ಕಲಾವಿದೆ ಮತ್ತು ಸಂಯೋಜಕಿ ಲಾರಿ ಆಂಡರ್ಸನ್, 1998 ರಲ್ಲಿ ಸ್ಯಾನ್ ವಿಟ್ಟೋರ್ ಜೈಲಿನಲ್ಲಿ ಪ್ರಾಡಾ ಫೌಂಡೇಶನ್‌ಗಾಗಿ ರಚಿಸಲಾದ "ಡಾಲ್ ವಿವೋ" ಯೋಜನೆಯನ್ನು ಹಾಗೂ 2015 ರಿಂದ "ಹೇಬಿಯಸ್ ಕಾರ್ಪಸ್" ಯೋಜನೆಯನ್ನು ಈ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಇದು ಗ್ವಾಂಟನಾಮೊ ಕೊಲ್ಲಿಯ ಯುವ ಕೈದಿಯ ಬದುಕನ್ನು ಚಿತ್ರಿಸುವ ಕುರಿತ ಯೋಜನೆಯಾಗಿದೆ.
ಸಂಸ್ಕೃತಿ ಮತ್ತು ಶಿಕ್ಷಣಕ್ಕಾಗಿ ಪೀಠದಲ್ಲಿನ ಹೊಸ ಸಮಕಾಲೀನ ಕಲಾ ಸ್ಥಳ "ಕನ್ಸಿಲಿಯಾಜಿಯೋನ್ 5" ನ ಮೇಲ್ವಿಚಾರಕ ಕ್ರಿಸ್ಟಿಯಾನಾ ಪೆರೆಲ್ಲಾ ಅವರು ಚೀನೀ ವರ್ಣಚಿತ್ರಕಾರ ಯಾನ್ ಪೀ-ಮಿಂಗ್ ಅವರ "ಓಲ್ಟ್ರೆ ಇಲ್ ಮುರೊ" ಎಂಬ ಕಲಾತ್ಮಕ ಯೋಜನೆಯನ್ನು ಪ್ರಸ್ತುತಪಡಿಸಲಿದ್ದಾರೆ. ಈ ಯೋಜನೆಯು ವ್ಯಾಟಿಕನ್‌ನಿಂದ ಸ್ವಲ್ಪ ದೂರದಲ್ಲಿರುವ ರೋಮ್‌ನ ಪ್ರಮುಖ ಮತ್ತು ಅತ್ಯಂತ ಪ್ರಸಿದ್ಧ ಸುಧಾರಣಾ ಸಂಸ್ಥೆಯಾದ ರೆಜಿನಾ ಚೇಲಿ ಜೈಲಿನಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಕೈದಿಗಳನ್ನು ಚಿತ್ರಿಸುವ 27 ಭಾವಚಿತ್ರಗಳನ್ನು ಒಳಗೊಂಡಿದೆ.