ಕಾರ್ಡಿನಲ್ ಪರೋಲಿನ್: ಪೋಪ್ ಜಾನ್ ಪೌಲರು ಗಾಯಗೊಂಡ ಮಾನವೀಯತೆಯನ್ನು ಆಶೀರ್ವದಿಸಲಿ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಸಂತ ದ್ವಿತೀಯ ಜಾನ್ ಪೌಲರ ನಿಧನದ 20ನೇ ವರ್ಷಾಚರಣೆ ಹಿನ್ನೆಲೆ ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಅವರು ಬಲಿಪೂಜೆಯನ್ನು ನೆರವೇರಿಸಿದ್ದಾರೆ. ತಮ್ಮ ಪ್ರಬೋಧನೆಯಲ್ಲಿ ಧರ್ಮಸಭೆಯನ್ನು ಮತ್ತಷ್ಟು ಜತನದಿಂದ ರೂಪಿಸಿದ ಪೋಪ್ ಸಂತ ಜಾನ್ ಪೌಲರ ಇತಿಹಾಸವನ್ನು ಕೊಂಡಾಡಿದ್ದಾರೆ.
ಮುಂದುವರೆದು ಮಾತನಾಡಿದ ಕಾರ್ಡಿನಲ್ ಪರೋಲಿನ್ ಅವರು "ನನ್ನ ವಾಕ್ಯದಲ್ಲಿ ವಿಶ್ವಾವನ್ನಿರಿಸಿ, ನನ್ನ ತಂದೆಯಲ್ಲಿ ವಿಶ್ವಾಸವನ್ನಿರಿಸುವ ಎಲ್ಲರೂ ನಿತ್ಯಜೀವವನ್ನು ಪಡೆಯುತ್ತಾರೆ" ಎಂಬ ಶುಭ ಸಂದೇಶದ ವಾಕ್ಯದ ಸ್ಪೂರ್ತಿಯಿಂದ ಪೋಪ್ ಸಂತ ದ್ವಿತೀಯ ಜಾನ್ ಪೌಲ್ ಅವರು ತಮ್ಮ ಬದುಕನ್ನು ಜೀವಿಸಿದರು. ಇದೇ ಸ್ಪೂರ್ತಿಯಿಂದ ಅವರು ಧರ್ಮಸಭೆಯನ್ನು ಕಟ್ಟಿದ್ದರು" ಎಂದು ಹೇಳಿದ್ದಾರೆ.
"ಪೋಪ್ ಸಂತ ದ್ವಿತೀಯ ಜಾನ್ ಪೌಲರು ತಮ್ಮ ಜೀವನದಲ್ಲಿ ದೈವಿಕ ಅನುಗ್ರಹವನ್ನು ಗುರುತಿಸಿದ್ದರು. ದೇವರ ಅನುಗ್ರಹದ ಹೊರತಾಗಿ ಬೇರೇನನ್ನೂ ಮಾಡುವುದು ಸಾಧ್ಯವಿಲ್ಲ ಎಂದು ಅವರು ಅರಿತಿದ್ದರು. ಅಂತೇಯೇ, ಪ್ರಾರ್ಥನೆ ಹಾಗೂ ಅಪಾರ ವಿಶ್ವಾಸದ ಮೂಲಕ ಅವರು ಧರ್ಮಸಭೆಯನ್ನು ಮುನ್ನಡೆಸಿದರು" ಎಂದು ಕಾರ್ಡಿನಲ್ ಪರೋಲಿನ್ ಅವರು ಹೇಳಿದ್ದಾರೆ.
ಇದೇ ವೇಳೆ ಕಾರ್ಡಿನಲ್ ಪರೋಲಿನ್ ಅವರು ಪೋಪ್ ಜಾನ್ ಪೌಲರ ಮೇಲೆ ಹತ್ಯೆಯ ಪ್ರಯತ್ನವಾದಾಗ ಅವರು ತಮ್ಮ ಆಧ್ಯಾತ್ಮಿಕ ದಿನಚರಿಯಲ್ಲಿ ಬರೆದುಕೊಂಡ ಸಾಲುಗಳನ್ನು ಇಲ್ಲಿ ಹೇಳಿದರು: ""ದೈವಿಕ ಅನುಗ್ರಹ ನನ್ನನ್ನು ಸಾವಿನಿಂದ ಅದ್ಭುತ ರೀತಿಯಲ್ಲಿ ರಕ್ಷಿಸಿದೆ. ಜೀವನ ಮತ್ತು ಮರಣದ ಏಕೈಕ ಪ್ರಭುವಾಗಿರುವ ಆತನೇ ನನ್ನ ಆಯುಷ್ಯವನ್ನು ಹೆಚ್ಚಿಸಿದನು, ಒಂದು ನಿರ್ದಿಷ್ಟ ರೀತಿಯಲ್ಲಿ ಅದನ್ನು ನನಗೆ ಹೊಸದಾಗಿ ಕೊಟ್ಟನು ಎಂದು ಜಾನ್ ಪಾಲ್ II ತನ್ನ ಆಧ್ಯಾತ್ಮಿಕ ಒಡಂಬಡಿಕೆಯಲ್ಲಿ ಬರೆದಿದ್ದಾರೆ" ಎಂದು ಕಾರ್ಡಿನಲ್ ಪರೋಲಿನ್ ಅವರು ಹೇಳಿದ್ದಾರೆ.
ಇದೇ ವೇಳೆ ಯುದ್ಧದ ಕುರಿತು ಮಾತನಾಡಿದ ಅವರು "ಯುದ್ಧ ಎಂದಿಗೂ ಮಾನವೀಯತೆಯ ಸೋಲು ಎಂದು ಪೋಪ್ ಸಂತ ದ್ವಿತೀಯ ಜಾನ್ ಪೌಲರು ಹೇಳುತ್ತಿದ್ದರು" ಎಂದು ಹೇಳಿದ್ದಾರೆ.