ಕಾಂಗೋ ದೇಶದಲ್ಲಿ ಶಾಂತಿಮಾತುಕತೆಗಳು ಮುಂದುವರೆಯುವಂತೆ ವ್ಯಾಟಿಕನ್ ಮನವಿ
ವರದಿ: ವ್ಯಾಟಿಕನ್ ನ್ಯೂಸ್
ಮಾನವ ಹಕ್ಕುಗಳ ಕುರಿತು ಜಿನೀವಾದಲ್ಲಿ ನಡೆಯುತ್ತಿರುವ ಮೂವತ್ತೇಳನೇ ಸಭೆಯಲ್ಲಿ ಇಲ್ಲಿನ ಪ್ರೇಷಿತ ರಾಯಭಾರಿ ಆಗಿರುವ ಆರ್ಚ್'ಬಿಷಪ್ ಎತೋರೆ ಬಾಲೆಸ್ತ್ರೆರೋ ಅವರು ಪೋಪ್ ಫ್ರಾನ್ಸಿಸ್ ಅವರ ಶಾಂತಿ ಮನವಿಗಳನ್ನು ಪ್ರತಿಧ್ವನಿಸಿದ್ದಾರೆ.
ಕಾಂಗೋ ದೇಶದಲ್ಲಿ M23 ಬಂಡುಕೋರರು ಎಲ್ಲಾ ಕಡೆ ದಾಳಿಯನ್ನು ಮುಂದುವರೆಸಿದ್ದಾರೆ. ಇದರಿಂದ ಇಡೀ ದೇಶದಲ್ಲಿ ಅಸ್ಥಿರತೆ ಹಾಗೂ ಅರಾಜಕತೆ ಉಲ್ಬಣವಾಗುತ್ತಿದ್ದು, ಇಲ್ಲಿನ ಜನರು ನೋವು ಹಾಗೂ ಭಿಕ್ಕಟ್ಟನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಸಮುದಾಯಗಳು ಇಲ್ಲಿನ ಜನತೆಯ ನೆರವಿಗೆ ಧಾವಿಸಬೇಕೆಂದು ವ್ಯಾಟಿಕನ್ ಪೀಠವು ಒತ್ತಾಯಿಸುತ್ತಲೇ ಇದೆ.
ಶಾಂತಿಗಾಗಿ ಪೋಪ್ ಫ್ರಾನ್ಸಿಸ್ ಮನವಿ
"ಕಾಂಗೋ ದೇಶದಲ್ಲಿ ಶಾಂತಿ ನೆಲೆಯೂರಲು ನಾನು ಪ್ರಾರ್ಥಿಸುವ ಈ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯ ಸರ್ಕಾರ ಹಾಗೂ ಅಂತರಾಷ್ಟ್ರೀಯ ಸಮುದಾಯವು ಈ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಹಾಗೂ ತ್ವರಿತ ಕ್ರಮಗಳನ್ನು ಕೈಗೊಳ್ಳಲಿ ಎಂದು ಆಶಿಸುತ್ತೇನೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಕಾಂಗೋ ದೇಶದಲ್ಲಿ ಪ್ರಸ್ತುತ ಉಂಟಾಗುತ್ತಿರುವ ಅವ್ಯವಸ್ಥೆ, ಬಂಡುಕೋರರ ದಾಳಿಗಳೂ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಬೆಳಕನ್ನು ಚೆಲ್ಲಿರುವ ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಸಮಸ್ಯೆಗೆ ಶೀಘ್ರವೇ ಪರಿಹಾರವನ್ನು ಕೈಗೊಳ್ಳಬೇಕು ಹಾಗೂ ಆ ಮೂಲಕ ಅಲ್ಲಿನ ಜನತೆ ನಿಶ್ಚಿಂತೆಯಿಂದ ಜೀವಿಸಲು ಅವಕಾಶಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.