ಕಾರ್ಡಿನಲ್ ಪರೋಲಿನ್: ನ್ಯಾಯಕ್ಕಾಗಿ ಮಕ್ಕಳ ಮೊರೆಯನ್ನು ಆಲಿಸಿರಿ
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ ನಗರದಲ್ಲಿ ಮಕ್ಕಳ ಹಕ್ಕುಗಳ ಶೃಂಗಸಭೆಯು ನಡೆಯುತ್ತಿದ್ದು, ಇದರ ಉದ್ಘಾಟನಾ ಕಾರ್ಯಕ್ರಮದ ಆತಿಥ್ಯವನ್ನು ವ್ಯಾಟಿಕನ್ ಮ್ಯೂಸಿಯಂಸ್ ವಹಿಸಿಕೊಂಡಿತ್ತು. ಈ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಇಲ್ಲಿ ಅಂತರಾಷ್ಟ್ರೀಯ ನಾಯಕರುಗಳನ್ನು ಹಾಗೂ ಇದರಲ್ಲಿ ಭಾಗವಹಿಸುತ್ತಿರುವ ಎಲ್ಲರನ್ನೂ ಸ್ವಾಗತಿಸಿದ್ದಾರೆ.
ಮಕ್ಕಳ ಕುರಿತು ಮಾತನಾಡಿದ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು "ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳು, ಹಿಂಸೆ ಹಾಗೂ ಇನ್ನಿತರ ಅಪರಾಧಿಕ ಕೃತ್ಯಗಳಿಗೆ ಮಕ್ಕಳೇ ಹೆಚ್ಚಿನ ರೀತಿಯಲ್ಲಿ ಬಲಿಯಾಗುತ್ತಿದ್ದಾರೆ. ಅವರು ಈ ರೀತಿಯಲ್ಲಿ. ಬಲಿಯಾಗುತ್ತಿರುವುದನ್ನು ನೋಡುತ್ತಿರುವ ನಾಗರೀಕ ಸಮಾಜವಾದ ನಾವು ತಲೆತಗ್ಗಿಸಬೇಕಿದೆ. ಮಕ್ಕಳನ್ನು ಕಾಪಾಡುವಲ್ಲಿ ಹಾಗೂ ಅವರಿಗೆ ಸುರಕ್ಷತೆಯನ್ನು ಕಲ್ಪಿಸುವಲ್ಲಿ ನಾವು ಸೋತಿದ್ದೇವೆ" ಎಂದು ಕಾರ್ಡಿನಲ್ ಪರೋಲಿನ್ ಹೇಳಿದರು.
ಮುಂದುವರೆದು ಮಾತನಾಡಿದ ಅವರು "ಮಕ್ಕಳ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಬೇಕು" ಎಂದು ಹೇಳಿದರು.
ಸಂಪನ್ಮೂಲಗಳ ಪ್ರವೇಶ, ಶಿಕ್ಷಣ, ಪೋಷಣೆ, ಆರೋಗ್ಯ, ಕುಟುಂಬ ಮತ್ತು ವಿರಾಮ ಸೇರಿದಂತೆ ಮಕ್ಕಳ ಮೇಲೆ ಪರಿಣಾಮ ಬೀರುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದರು. "ಪ್ರತಿ ಮಗುವಿಗೆ ಶಾಂತಿ ಮತ್ತು ಸ್ವಾತಂತ್ರ್ಯದಲ್ಲಿ ಆಡುವ ಹಕ್ಕಿದೆ" ಎಂದು ಕಾರ್ಡಿನಲ್ ದೃಢಪಡಿಸಿದರು.
ಮಕ್ಕಳ ಶೃಂಗಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಮಾತು
ವ್ಯಾಟಿಕನ್ ನಗರದಲ್ಲಿ ನಡೆಯುತ್ತಿರುವ ಮಕ್ಕಳ ಹಕ್ಕುಗಳ ಮೊದಲ ಶೃಂಗಸಭೆಯಲ್ಲಿ ಭಾಗವಹಿಸಿದ ಪೋಪ್ ಫ್ರಾನ್ಸಿಸ್ ಅವರು ಯುದ್ಧ, ಬಡತನ, ವಲಸೆ ಹಾಗೂ ಮುಂತಾದ ಕಾರಣಗಳಿಂದಾಗಿ ನರಳುತ್ತಿರುವ ಮಕ್ಕಳ ಕುರಿತು ವಿಶ್ವದ ರಾಜಕೀಯ ನಾಯಕರುಗಳು ನೋಡಬೇಕು. ಈ ಕುರಿತು ಎಚ್ಚೆತ್ತುಕೊಂಡು ಈ ಜಗತ್ತು ಮಕ್ಕಳು ಸುರಕ್ಷತೆ ಹಾಗೂ ಸ್ವಚ್ಛಂದದಿಂದ ಬದುಕಲು ಅನುಕೂಲವಾಗುವಂತೆ ಮಾಡಬೇಕು ಎಂದು ಹೇಳಿದ್ದಾರೆ. ಮುಂದುವರೆದು ಮಾತನಾಡಿರುವ ಅವರು ಮಕ್ಕಳ ಜೀವಕ್ಕಿಂತ ಅಮೂಲ್ಯವಾದುದು ಯಾವುದೂ ಇಲ್ಲ ಎಂದು ಹೇಳಿದ್ದಾರೆ.
ಅಂತಿಮವಾಗಿ ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ಆಯೋಜಿಸಿರುವ ಶೃಂಗಸಭೆಯು ಮಕ್ಕಳಿಗಾಗಿ ಉತ್ತಮ ಜಗತ್ತನ್ನು ನಿರ್ಮಿಸಲು ಕೊಡುಗೆ ನೀಡುತ್ತದೆ, ಮಕ್ಕಳನ್ನು, ಅವರ ಹಕ್ಕುಗಳು ಮತ್ತು ಅವರ ಕನಸುಗಳನ್ನು ಜಾಗತಿಕ ಕಾಳಜಿಯ ಕೇಂದ್ರದಲ್ಲಿ ಇರಿಸುವ ನೈತಿಕ ಕರ್ತವ್ಯವನ್ನು ಪುನರುಚ್ಚರಿಸುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.