ಸಂತ ಪೌಲರ ಮಹಾದೇವಾಲಯದ ಪವಿತ್ರ ದ್ವಾರ ತೆರೆಯಲ್ಪಟ್ಟಿತು
ವರದಿ: ಅಮೇದಿಯೊ ಲೊಮೆನಾಕೋ
ಪ್ರಭುವಿನ ದೈವದರ್ಶನದ ಹಬ್ಬದ ಹಿಂದಿನ ದಿನ ಪೇಪಲ್ ಬಸಿಲಿಕ ಆಫ್ ಸೇಂಟ್ ಪೌಲ್ ಔಟ್'ಸೈಡ್ ಆಫ್ ದಿ ವಾಲ್ಸ್ (ಗೋಡೆಗಳ ಹಿಂದಿನ ಸಂತ ಪೌಲರ ಮಹಾದೇವಾಲಯ) ನ ಪ್ರಧಾನ ಗುರುಗಳಾಗಿರುವ ಕಾರ್ಡಿನಲ್ ಜೇಮ್ಸ್ ಹಾರ್ವಿ ಅವರು ಈ ಮಹಾದೇವಾಲಯದ ದೇವಾಲಯವನ್ನು ಸಾಂಕೇತಿಕವಾಗಿ ತೆರೆಯುವುದರ ಮೂಲಕ ಜ್ಯೂಬಿಲಿಗೆ ಮತ್ತೊಮ್ಮೆ ಚಾಲನೆ ನೀಡಿದ್ದಾರೆ.
ಇದೇ ವೇಳೆ ವ್ಯಾಟಿಕನ್ನಿನ ಸುವಾರ್ತಾ ಪ್ರಸಾರ ಪೀಠದ ಪ್ರೋ-ಪ್ರಿಫೆಕ್ಟ್ ಆಗಿರುವ ಆರ್ಚ್'ಬಿಷಪ್ ರಿನೋ ಫಿಶೆಲ್ಲಾ ಅವರು ಸೇರಿದಂತೆ ವಿವಿಧ ಧರ್ಮಾಧ್ಯಕ್ಷರುಗಳು ಹಾಗೂ ಗುರುಗಳು ಇದ್ದರು. ಈ ಬಲಿಪೂಜೆಯಲ್ಲಿ ಸುಮಾರು 2,800 ಕ್ಕೂ ಹೆಚ್ಚು ಭಕ್ತಾಧಿಗಳು ಪಾಲ್ಗೊಂಡಿದ್ದರು.
"ನಾವು ಪವಿತ್ರ ಆಲಯದ ಪವಿತ್ರ ದ್ವಾರವನ್ನು ಹಾದುಹೋಗಿದ್ದೇವೆ. ಇದರ ಅರ್ಥ ನಾವು ಭರವಸೆಯ ಹೊಸ್ತಿಲನ್ನು ಹಾದುಹೊಗಿದ್ದೇವೆ" ಎಂದು ಕಾರ್ಡಿನಲ್ ಜೇಮ್ಸ್ ಹಾರ್ವಿ ಅವರು ಹೇಳಿದರು. "ಇದು ನಾವು ಸಂತೋಷಿಸಬೇಕಾದ ಸಮಯವಾಗಿದೆ ಏಕೆಂದರೆ ಕ್ರಿಸ್ತರು ನಮಗಾಗಿ ಜನಿಸಿದ್ದಾರೆ. ಇದು ನಾವು ಭರವಸೆ ಇಡಬೇಕಾದ ಸಮಯ ಏಕೆಂದರೆ ಕ್ರಿಸ್ತರೇ ನಮ್ಮ ಭರವಸೆಯಾಗಿದ್ದಾರೆ" ಎಂದು ಅವರು ಹೇಳಿದರು.
"ಜ್ಯೂಬಿಲಿ ವರ್ಷದಲ್ಲಿ ಕ್ಷಮೆ ಹಾಗೂ ಕರುಣೆ ಎಂಬ ಅಂಶಗಳನ್ನು ನಾವು ಬದುಕಿನಲ್ಲಿ ಆಳವಡಿಸಿಕೊಳ್ಳಬೇಕಿದೆ. ಜ್ಯೂಬಿಲಿ ಎಂಬುದು ವರದಾನದ ಸಮಯವಾಗಿದ್ದು, ನಾವು ಧರ್ಮಸಭೆಯಾಗಿ ಹಳತನ್ನು ಮರೆತು, ಹೊಸತನದಿಂದ ಮುಂದೆ ಸಾಗುವುದಕ್ಕೆ ಇರುವ ಸದಾವಕಾಶವೇ ಜ್ಯೂಬಿಲಿಯಾಗಿದೆ" ಎಂದು ಅವರು ಹೇಳಿದರು. "ಅಂತಿಮವಾಗಿ ನಾವು ಭರವಸೆಯ ಯಾತ್ರಿಕರಾಗಬೇಕು" ಎಂದು ಅವರು ಹೇಳಿದರು.