ಸಂತ ಪೇತ್ರರ ಪವಿತ್ರ ದ್ವಾರದ ಹೊಸ್ತಿಲನ್ನು ಈಗಾಗಲೇ ದಾಟಿದ ಅರ್ಧ ಮಿಲಿಯನ್ ಭಕ್ತಾಧಿಗಳು
ವರದಿ: ಫ್ರಾನ್ಸಿಸ್ಕಾ ಮೆರ್ಲೋ
ಜ್ಯೂಬಿಲಿ ವರ್ಷ 2025 ರ ಮೊದಲ ಎರಡು ವಾರಗಳಲ್ಲಿಯೇ ಸುಮಾರು ಅರ್ಧ ಮಿಲಿಯನ್ ಜನರು ವ್ಯಾಟಿಕನ್ನಿನ ಸಂತ ಪೇತ್ರರ ಮಹಾದೇವಾಲಯದ ಪವಿತ್ರ ದ್ವಾರದ ಹೊಸ್ತಿಲನ್ನು ದಾಟಿದ್ದಾರೆ ಎಂದು ವರದಿಯಾಗಿದೆ.
ವ್ಯಾಟಿಕನ್ ಮಾಧ್ಯಮ ಕಚೇರಿಯು ಪ್ರಕಟಿಸಿದ ಮಾಧ್ಯಮ ಹೇಳಿಕೆಯ ಪ್ರಕಾರ ಈವರೆಗೂ 5,45,532 ಭಕ್ತಾಧಿಗಳು ರೋಮ್ ನಗರದಲ್ಲಿರುವ ಸಂತ ಪೇತ್ರರ ಮಹಾದೇವಾಲಯಕ್ಕೆ ಭೇಟಿ ನೀಡುವ ಮೂಲಕ ಪವಿತ್ರ ದ್ವಾರವನ್ನು ಹಾದುಹೋಗಿದ್ದಾರೆ.
ವ್ಯಾಟಿಕನ್ನಿನ ಸುವಾರ್ತಾ ಪ್ರಸಾರ ಪೀಠದ ಪ್ರೋ-ಪ್ರಿಫೆಕ್ಟ್ ಆಗಿರುವ ಆರ್ಚ್'ಬಿಷಪ್ ರಿನೋ ಫಿಶೆಲ್ಲಾ ಅವರು ಈ ಸನ್ನಿವೇಷವನ್ನು ನೆನೆದು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇಡೀ ವರ್ಷ ಇಲ್ಲಿಗೆ ಭಕ್ತಾಧಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಎಂಬ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ವ್ಯಾಟಿಕನ್ ಮಾಧ್ಯಮ ಪ್ರಕಟಣೆಯಂತೆ ರೋಮ್ ನಗರ ಸಭೆ ಹಾಗೂ ವ್ಯಾಟಿಕನ್ ಪೀಠದ ಸಹಯೋಗದಲ್ಲಿ ಇಲ್ಲಿಗೆ ಆಗಮಿಸುತ್ತಿರುವ ಭಕ್ತಾಧಿಗಳಿಗೆ, ಪ್ರವಾಸಿಗಳಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಇದೇ ರೀತಿ ರೋಮ್ ನಗರದಲ್ಲಿರುವ ಇನ್ನೂ ಮೂರು ಮಹಾದೇವಾಲಯಗಳಿಗೂ ಸಹ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭೇಟಿ ನೀಡುತ್ತಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ.