ಜೋರ್ಡಾನ್'ನಲ್ಲಿ ಪ್ರಭುವಿನ ದೀಕ್ಷಾಸ್ನಾನದ ದೇವಾಲಯವನ್ನು ಉದ್ಘಾಟಿಸಲಿರುವ ಕಾರ್ಡಿನಲ್ ಪರೋಲಿನ್
ವರದಿ: ವ್ಯಾಟಿಕನ್ ನ್ಯೂಸ್
ಜೋರ್ಡಾನ್ ನದಿಯ ಪೂರ್ವ ದಂಡೆಯ ಮೇಲೆ ನೂತನವಾಗಿ ನಿರ್ಮಿಸಲಾಗಿರುವ ಪ್ರಭುವಿನ ದೀಕ್ಷಾಸ್ನಾನದ ದೇವಾಲಯದ ಉದ್ಘಾಟನೆಗಾಗಿ ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರತಿನಿಧಿಯಾಗಿ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರನ್ನು ನೇಮಿಸಿದ್ದಾರೆ. ಆ ಮೂಲಕ ಕಾರ್ಡಿನಲ್ ಪರೋಲಿನ್ ಅವರು ಈ ದೇವಾಲಯವನ್ನು ಉದ್ಘಾಟಿಸಲಿದ್ದಾರೆ.
ಶುಕ್ರವಾರ ಜನವರಿ 10 ರಂದು ಈ ಉದ್ಘಾಟನೆಯು ನೆರವೇರಲಿದೆ ಎಂದು ವರದಿಯಾಗಿದೆ. ಕಾರ್ಡಿನಲ್ ಪರೋಲಿನ್ ಅವರು ಈ ದೇವಾಲಯವನ್ನು ಉದ್ಘಾಟಿಸಿ, ಆಶೀರ್ವದಿಸಲಿದ್ದಾರೆ. ಇದೇ ವೇಳೆ ಅವರ ಜೊತೆಗೆ ಸಹಗುರುಗಳಾಗಿ ಬಲಿಪೂಜೆಯಲ್ಲಿ ಜೇರುಸಲೇಮಿನ ಲ್ಯಾಟಿನ್ ಪೇಟ್ರಿಯಾರ್ಕ್ ಆಗಿರುವ ಕಾರ್ಡಿನಲ್ ಪಿಯೆರ್ಬತ್ತಿಸ್ತಾ ಪಿಝಾಬಲ್ಲಾ ಅವರೂ ಸಹ ಪಾಲ್ಗೊಳ್ಳಲಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಕ್ರೈಸ್ತರಿಗೆ ಸಂದೇಶವನ್ನು ಕಳುಹಿಸಿದ್ದು, ಇಲ್ಲಿನ ಕ್ರೈಸ್ತರ ವಿಶ್ವಾಸದ ಕುರಿತು ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ. ಮುಂದುವರೆದು ಅವರು ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಅವರಿಗೆ ಇಲ್ಲಿನ ಕ್ರೈಸ್ತರಿಗೆ ಕ್ರಿಸ್ತರನ್ನು ಅನುಕರಿಸಲು ಪ್ರೋತ್ಸಾಹಿಸುವಂತೆ ಹೇಳಿದ್ದಾರೆ. ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಕ್ರೈಸ್ತರಿಗೆ ಮಾತ್ರವಲ್ಲದೆ, ಅಲ್ಲಿನ ಸರ್ಕಾರದ ಅಧಿಕಾರಿಗಳೂ ಸೇರಿದಂತೆ ವಿವಿಧ ಧರ್ಮಗಳ ಜನರಿಗೆ ತಮ್ಮ ಶುಭಾಶಯಗಳನ್ನು ತಿಳಿಸುವಂತೆ ಕಾರ್ಡಿನಲ್ ಪರೋಲಿನ್ ಅವರಿಗೆ ಈ ಸಂದೇಶದ ಮುಖಾಂತರ ಕೇಳಿಕೊಂಡಿದ್ದಾರೆ.