ಅರ್ಚ್'ಬಿಷಪ್ ಗ್ಯಾಲಗರ್: ಪೋಪ್ ಫ್ರಾನ್ಸಿಸ್ ನಿಮ್ಮನ್ನು ಪ್ರೀತಿಸುತ್ತಾರೆ
ವರದಿ: ಕೀಲ್ಚೆ ಗುಸ್ಸೀ
ವ್ಯಾಟಿಕನ್ನಿನ ವಿದೇಶಾಂಘ ಸಂಪರ್ಕಗಳ ಕಾರ್ಯದರ್ಶಿಯಾಗಿರುವ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಗರ್ ಅವರು ಆಫ್ರಿಕಾ ಖಂಡದ ಕಾಂಗೋ ದೇಶಕ್ಕೆ ಭೇಟಿ ನೀಡಿದ್ದಾರೆ. ಪ್ರಸ್ತುತ ಆ ದೇಶವನ್ನು ಪ್ರಾಕೃತಿಕ ವಿಕೋಪಗಳು ಬಾಧಿಸುತ್ತಿರುವ ಹಿನ್ನೆಲೆಯಲ್ಲಿ, ಆರ್ಚ್'ಬಿಷಪ್ ಗ್ಯಾಲಗರ್ ಅವರು ಅಲ್ಲಿನ ಜನತೆಗೆ ಪೋಪ್ ಫ್ರಾನ್ಸಿಸ್ ಅವರ ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ. "ಪೋಪ್ ಫ್ರಾನ್ಸಿಸರು ನಿಮ್ಮನ್ನು ಪ್ರೀತಿಸುತ್ತಾರೆ" ಎಂದು ಹೇಳಿದ್ದಾರೆ.
ಆರ್ಚ್'ಬಿಷಪ್ ಗ್ಯಾಲಗರ್ ಅವರು 2017 ರಲ್ಲಿ ಕಾಂಗೋ ಹಾಗೂ ವ್ಯಾಟಿಕನ್ ನಡುವೆ ನಡೆದ ಫ್ರೇಮ್'ವರ್ಕ್ ಅಗ್ರಿಮೆಂಟ್ ಒಪ್ಪಂದವನ್ನು ಜಾರಿಗೊಳಿಸುವ ಸಲುವಾಗಿ ರಚಿಸಲಾಗಿರುವ ಜಂಟಿ-ಆಯೋಗದ ಭಾಗವಾಗಿ ಅವರು ಇಂದು ಕಾಂಗೋ ದೇಶಕ್ಕೆ ವಿಶೇಷ ಭೇಟಿಯನ್ನು ನೀಡಿದ್ದಾರೆ. ಇದೇ ವೇಳೆ ಆರ್ಚ್'ಬಿಷಪ್ ಗ್ಯಾಲಗರ್ ಅವರು ಪ್ರಪ್ರಥಮವಾಗಿ ಇಲ್ಲಿನ ಬ್ರಜಾವಿಲ್ ಪ್ರಧಾನಾಲಯಕ್ಕೆ ಭೇಟಿ ನೀಡಿದರು. ಇದೇ ಪ್ರಧಾನಾಲಯದಲ್ಲಿ ಕಾರ್ಡಿನಲ್ ಎಮಿಲಿ ಬಿಯಾಯೆಂದಾ ಅವರ ಪಾರ್ಥೀವ ಶರೀರವಿದೆ. ಕಾರ್ಡಿನಲ್ ಎಮಿಲಿ ಬಿಯಾಯೆಂದ ಅವರನ್ನು ಅಂದಿನ ವಿಶ್ವಗುರು ಸಂತ ದ್ವಿತೀಯ ಜಾನ್ ಪೌಲರು ಕಾರ್ಡಿನಲ್ ಪದವಿಗೇರಿಸಿದ್ದರು. ಕಾರ್ಡಿನಲ್ ಬಿಯಾಯೆಂದಾ ಅವರು ಹಿಂಸೆ ಹಾಗೂ ಅನ್ಯಾಯದ ವಿರುದ್ಧವಾಗಿ ಮಾತನಾಡಿದ ಕಾರಣ ಅಂದಿನ ಸರ್ಕಾರ ಅವರನ್ನು ಕೊಂದಿತು. ಹೀಗೆ ಅವರು ಇಲ್ಲಿನ ರಕ್ತಸಾಕ್ಷಿಯಾಗಿದ್ದಾರೆ.
ಮುಂದುವರೆದು ಆರ್ಚ್'ಬಿಷಪ್ ಗ್ಯಾಲಗರ್ ಅವರು ಕಾಂಗೋ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿಯ ಸದಸ್ಯರುಗಳೊಂದಿಗೆ ಮಾತುಕತೆಯನ್ನು ನಡೆಸಿದರು. ಇದೇ ವೇಳೆ ಅವರು ಇಲ್ಲಿನ ಯೇಸುವಿನ ಪವಿತ್ರ ಹೃದಯದ ಪ್ರಧಾನಾಲಯದ ಆವರಣದಲ್ಲಿ ಬಲಿಪೂಜೆಯನ್ನು ಅರ್ಪಿಸಿದರು.
ತಮ್ಮ ಪ್ರಬೋಧನೆಯಲ್ಲಿ ಮಾತನಾಡಿದ ಆರ್ಚ್'ಬಿಷಪ್ ಗ್ಯಾಲಗರ್ ಅವರು "ನಾವೆಲ್ಲರೂ ಇಂದು ನೂತನ ಸಂವತ್ಸರದಲ್ಲಿದ್ದೇವೆ. ಜ್ಯೂಬಿಲಿ ಎಂಬುದು ನಮ್ಮೆಲ್ಲರಿಗೂ ವಿಶೇಷ ವರದಾನವಾಗಿದ್ದು, ನಾವು ಆಧ‌್ಯಾತ್ಮಿಕವಾಗಿ ನವೀಕೃತ ವಿಶ್ವಾಸದಿಂದ ಪ್ರಭುವಿನ ಹಾದಿಯಲ್ಲಿ ಮುನ್ನಡೆಯಬೇಕಿದೆ" ಎಂದು ಹೇಳಿದರು. ಮುಂದುವರೆದು "ಪೋಪ್ ಫ್ರಾನ್ಸಿಸರು ನಿಮ್ಮನ್ನು ಪ್ರೀತಿಸುತ್ತಾರೆ" ಎಂದು ಹೇಳಿದ ಆರ್ಚ್'ಬಿಷಪ್ ಗ್ಯಾಲಗರ್ ಅವರು ಕಾಂಗೋ ಜನತೆಯೊಂದಿಗೆ ಪೋಪ್ ಫ್ರಾನ್ಸಿಸ್ ಅವರ ಐಕ್ಯಮತ್ಯತೆಯ ಕುರಿತು ಹೇಳಿದರು.