ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ಶಿಲುಬೆಯನ್ನು ದೇವರು ಬದುಕಿನ ಅರ್ಥವಾಗಿ ಮಾರ್ಪಡಿಸುತ್ತಾರೆ
ವರದಿ: ವ್ಯಾಟಿಕನ್ ನ್ಯೂಸ್
ಇಂದು ಧರ್ಮಸಭೆ ಪವಿತ್ರ ಶಿಲುಬೆಯ ವಿಜಯೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆ, ಪೋಪ್ ಲಿಯೋ XIV ಅವರು ಇಂದಿನ ತ್ರಿಕಾಲ ಪ್ರಾರ್ಥನೆಯಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಅಪಮಾನದ ಸಂಕೇತವಾಗಿದ್ದ ಶಿಲುಬೆಯನ್ನು ದೇವರ ಪ್ರೀತಿ ಎಂಬುದು ಜೀವದ ಹಾಗೂ ಭರವಸೆಯ ಸಂಕೇತವನ್ನಾಗಿ ಮಾರ್ಪಡಿಸಿದೆ ಎಂದು ಹೇಳುತ್ತಾರೆ.
"ಪವಿತ್ರ ಶಿಲುಬೆಯ ವಿಜಯೋತ್ಸವವನ್ನು ಆಚರಿಸುವುದು ಎಂದರೆ ಏನು?" ಎಂಬ ಪ್ರಶ್ನೆಯನ್ನು ಕೇಳುವ ಮೂಲಕ ಪೋಪ್ ಲಿಯೋ XIV ಅವರು ತ್ರಿಕಾಲ ಪ್ರಾರ್ಥನೆಯ ತಮ್ಮ ಚಿಂತನೆಯನ್ನು ಆರಂಭಿಸಿದರು. ಇದಕ್ಕೆ ಉತ್ತರವಾಗಿ ಶುಭಸಂದೇಶದ ಹಲವು ವಾಕ್ಯಗಳನ್ನು ಉದಾಹರಣೆಯಾಗಿ ಬಳಸಿಕೊಂಡ ಅವರು ಅಪಮಾನದ ಸಂಕೇತವಾಗಿದ್ದ ಶಿಲುಬೆಯನ್ನು ದೇವರ ಪ್ರೀತಿ ಎಂಬುದು ಜೀವದ ಹಾಗೂ ಭರವಸೆಯ ಸಂಕೇತವನ್ನಾಗಿ ಮಾರ್ಪಡಿಸಿದೆ ಎಂದು ಹೇಳಿದರು.
ದೇವರು ನಮಗೆ ತನ್ನನ್ನು ತಾನು ತೋರಿಸಿಕೊಳ್ಳುವ ಮೂಲಕ, ನಮ್ಮ ಒಡನಾಡಿ, ಶಿಕ್ಷಕ, ವೈದ್ಯ ಮತ್ತು ಸ್ನೇಹಿತನಾಗಿ ತನ್ನನ್ನು ಅರ್ಪಿಸಿಕೊಳ್ಳುವ ಮೂಲಕ ನಮ್ಮನ್ನು ರಕ್ಷಿಸಿದರು ಹಾಗೂ ಬಲಿಪೂಜೆಯಲ್ಲಿ ತಮ್ಮನ್ನೇ ಮುರಿದ ರೊಟ್ಟಿಯನ್ನಾಗಿಸಿಕೊಳ್ಳುವುದರ ಮೂಲಕ ನಮಗೆ ಮತ್ತಷ್ಟು ಹತ್ತಿರವಾದರು ಎಂದು ಪೋಪ್ ಹೇಳಿದರು. ಈ ಕಾರಣದಿಂದಾಗಿಯೇ ನಾವು ಪವಿತ್ರ ಶಿಲುಬೆಯ ವಿಜಯೋತ್ಸವವನ್ನು ನಮ್ಮ ಭರವಸೆ ಹಾಗೂ ನಂಬಿಕೆಯ ಭಾಗವಾಗಿ ಆಚರಿಸುತ್ತೇವೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ಧರ್ಮಾಧ್ಯಕ್ಷರ ಸಿನೋಡ್ ಸ್ಥಾಪನೆಯ 60 ನೇ ವರ್ಷಾಚರಣೆಯನ್ನು ನೆನಪಿಸಿಕೊಂಡರು. 1965 ರಲ್ಲಿ ವಿಶ್ವಗುರು ಆರನೇ ಸಂತ ಪೌಲರು ಇದನ್ನು ಸ್ಥಾಪಿಸಿದ್ದರು.