ಪೋಪ್: ನೂತನ ಧರ್ಮಾಧ್ಯಕ್ಷರು ಸೇತುವೆಗಳನ್ನು ನಿರ್ಮಿಸುವವರಾಗಬೇಕು
ವರದಿ: ವ್ಯಾಟಿಕನ್ ನ್ಯೂಸ್
ಕಳೆದ ವರ್ಷದಲ್ಲಿ ಧರ್ಮಾಧ್ಯಕ್ಷರಾಗಿ ಅಭ್ಯಂಗಿತರಾಗಿರುವ ಎಲ್ಲರೊಂದಿಗೆ ಪೋಪ್ ಲಿಯೋ ಅವರು ಭೇಟಿ ಮಾಡಿದ್ದು, ಇಂದು ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಯಾಜಕರು ಹಾಗೂ ಧಾರ್ಮಿಕ ವಿರುದ್ಧ ಸೂಕ್ತ ಕ್ರಮವನ್ನು ಜರುಗಿಸುವಂತೆ, ಪಾರದರ್ಶಕವಾಗಿ ನಡೆದುಕೊಳ್ಳಬೇಕೆಂದು ಅವರಿಗೆ ಕರೆ ನೀಡಿದ್ದಾರೆ.
ವ್ಯಾಟಿಕನ್ ಮಾಧ್ಯಮದ ಪ್ರಕಾರ ಪೋಪ್ ಲಿಯೋ ಅವರು ನೂತನ ಧರ್ಮಾಧ್ಯಕ್ಷರುಗಳ ಭೇಟಿಯ ಅಂತಿಮ ಸಭೆಯಲ್ಲಿ ಮಾತನಾಡುತ್ತಾ, ನೂತನ ಧರ್ಮಾಧ್ಯಕ್ಷರಾದ ಮೇಲೆ ಆರಂಭದಲ್ಲಿ ಬರುವ ಪಾಲನಾ ಸಮಸ್ಯೆಗಳೂ ಹಾಗೂ ಅದನ್ನು ಹೇಗೆ ಬಗೆಹರಿಸಬೇಕು, ಭಯ, ಸಂಕಟ, ಗೊಂದಲ ಇತ್ಯಾದಿಗಳನ್ನು ಹೇಗೆ ತಡೆಗಟ್ಟಬಹುದು ಎಂಬ ಕುರಿತು ಮಾಹಿತಿಯನ್ನು ನೀಡಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು ವಿಶ್ವದಲ್ಲಿ ಶಾಂತಿಯನ್ನು ನೆಲೆಯಿಸುವ ಪ್ರಮುಖ ಉದ್ದೇಶದ ಕುರಿತು ಮಾತನಾಡಿದರು. ಹೌದು, ವಿಶ್ವದಲ್ಲಿ ಶಾಂತಿ ಎಂಬುದು ದುಬಾರಿಯಾಗಿದೆ. ಆದರೂ ಸಹ ನಾವು ನಮ್ಮ ಪ್ರಯತ್ನಗಳನ್ನು ಬಿಡಬಾರದು ಎಂದು ಹೇಳಿದ್ದಾರೆ.
ಸವಾಲುಗಳನ್ನು ಎದುರಿಸುವಾಗ ನಾವು ಕರುಣೆಯಿಂದ ಅವುಗಳನ್ನು ಎದುರಿಸಬೇಕು ಎಂದು ಪೋಪ್ ನೂತನ ಧರ್ಮಾಧ್ಯಕ್ಷರುಗಳಿಗೆ ಹೇಳಿದರು. ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ನಮ್ಮ ವಿವೇಚನೆಯನ್ನು ನಾವು ಉಪಯೋಗಿಸಬೇಕು ಎಂದು ಹೇಳಿದ್ದಾರೆ.