ಬಲಿಪೂಜೆಯಲ್ಲಿ ಪೋಪ್: ಅನ್ಯಾಯದ ನಡುವೆಯೂ ಸಹ ಕೆಟ್ಟದ್ದು ಎಂದಿಗೂ ಜಯಿಸುವುದಿಲ್ಲ.
ವರದಿ: ವ್ಯಾಟಿಕನ್ ನ್ಯೂಸ್
ಕ್ಯಾಸ್ಟೆಲ್ ಗಂಡೋಲ್ಫೋದಲ್ಲಿರುವ ಕಾರಬಿಯೆನೇರಿ ಪ್ರಧಾನಕಚೇರಿಯಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದು ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಜ್ಯೂಬಿಲಿ ವರ್ಷದಲ್ಲಿ ರೋಮ್ ನಗರಕ್ಕೆ ಆಗಮಿಸುವ ಯಾತ್ರಿಕರನ್ನು ರಕ್ಷಿಸುತ್ತಿರುವುದಕ್ಕೆ ಇಟಲಿಯ ವಿಶೇಷ ಪೊಲೀಸ್ ಪಡೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪೋಪ್ ಹದಿನಾಲ್ಕನೇ ಲಿಯೋ ಅವರು ತಮ್ಮ ರಜಾ ದಿನಗಳನ್ನು ಕಳೆಯುವದನ್ನು ಮುಂದುವರೆಸಿರುವ ಹೊತ್ತಿನಲ್ಲಿಯೇ, ಇಂದು ಇಲ್ಲಿನ ಕಾರಬಿಯೆನೇರಿ (ವಿಶೇಷ ಪೊಲೀಸ್) ಪ್ರಧಾನಕಚೇರಿಯಲ್ಲಿ ಬಲಿಪೂಜೆಯನ್ನು ಅರ್ಪಿಸಿದ್ದಾರೆ.
ರೋಮ್ ನಗರದಲ್ಲಿ ಬೆಟ್ಟದ ಮೇಲಿನ ಪ್ರದೇಶದಲ್ಲಿರುವ ಇದನ್ನು ವಿಲ್ಲಾ ದೆ ಜೆಸುಯಿತಿ (ಜೆಸುಯಿಟ್ ಮನೆ) ಎಂದು ಕರೆಯಲಾಗುತ್ತದೆ. ಇದು ಪವಿತ್ರ ಪೀಠದ ಮಾಲಿಕತ್ವದಲ್ಲಿದ್ದು, ಇದನ್ನು ಕಾರಬಿಯೆನೇರಿ (ವಿಶೇಷ ಪೊಲೀಸ್), ಜೆಸುಯಿಟ್ ಸಭೆ ಹಾಗೂ ಸ್ಥಳೀಯ ಜನರಿಗೆ ಭೋಗ್ಯಕ್ಕೆ ನೀಡಲಾಗಿದೆ.
ಇಟಲಿಯ ರಕ್ಷಣಾ ಸಚಿವ ಹಾಗೂ ಕಾರಬಿಯೆನೇರಿ (ವಿಶೇಷ ಪೊಲೀಸ್) ಜನರಲ್ ಕಮಾಂಡರ್ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.
ತಮ್ಮ ಪ್ರಬೋಧನೆಯಲ್ಲಿ ಮಾತನಾಡಿದ ಪೋಪ್ ಹದಿನಾಲ್ಕನೇ ಲಿಯೋ ಅವರು "ಸಹೋದರ-ಸಹೋದರಿಯರೇ" ಎಂಬ ಕ್ರೈಸ್ತ ಒಕ್ಕಣೆಯ ಕುರಿತು ಮಾತನಾಡಿದರು. ಸಂಬಂಧಗಳು ನಮ್ಮ ಆತ್ಮೀಯತೆಯ ಭಾಗವಾಗಿವೆ ಎಂದು ಹೇಳಿದ ಅವರು ನಾವೆಲ್ಲರೂ ನಿಜವಾಗಿಯೂ ಯೇಸುಕ್ರಿಸ್ತರಲ್ಲಿ ಸಹೋದರ - ಸಹೋದರಿಯರಾಗಿದ್ದೇವೆ. ದೇವರು ನಮ್ಮನ್ನು ಪ್ರೀತಿಸಿದಂತೆ ನಾವು ಒಬ್ಬರನ್ನೊಬ್ಬರು ಪ್ರೀತಿಸಿದಾಗ, ನಾವೆಲ್ಲರೂ ಕ್ರಿಸ್ತರ ಸಹೋದರ-ಸಹೋದರಿಯರಾಗಿದ್ದೇವೆ ಎಂದು ಪೋಪ್ ಲಿಯೋ ಹೇಳಿದರು.
ಬಲಿಪೂಜೆಯ ನಂತರ ಅವರು ಅಲ್ಬಾನೋದಲ್ಲಿರುವ ಸಂತ ಕ್ಲಾರಾ ಅವರ ಕಾನ್ವೆಂಟ್ ಗೆ ಭೇಟಿ ನೀಡಿದರು.