ಉಕ್ರೇನ್ ಬಿಷಪ್'ಗಳಿಗೆ ಪೋಪ್: ನಾವು ವಿಶ್ವಾಸ ಹಾಗೂ ಭರವಸೆಯಲ್ಲಿ ಒಂದಾಗಿರೋಣ
ವರದಿ: ವ್ಯಾಟಿಕನ್ ನ್ಯೂಸ್
ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್'ನ ಬಿಷಪ್ಪರುಗಳ ಪವಿತ್ರ ಸಿನೋಡ್ ಹಿನ್ನೆಲೆ ಅವರ ನಿಯೋಗವನ್ನು ವ್ಯಾಟಿಕನ್ನಿನಲ್ಲಿ ಭೇಟಿ ಮಾಡಿ ಮಾತನಾಡಿದ ಪೋಪ್ ಹದಿನಾಲ್ಕನೇ ಲಿಯೋ ಅವರು ಸಹಾಯವನ್ನು ಕೇಳಿ ಬರುವ ಗಾಯಗೊಂಡ ಪ್ರತಿ ಮನುಷ್ಯನಲ್ಲಿ ನಾವು ದೇವರ ಸೇವೆಯನ್ನು ಮಾಡಬೇಕು ಎಂದು ಹೇಳಿದ್ದಾರೆ.
ಜ್ಯೂಬಿಲಿ ವರ್ಷದಲ್ಲಿ ಸಿನೋಡ್ ನಡೆಯುತ್ತಿರುವುದು ಎಲ್ಲರೂ ಸಹ ಭರವಸೆ ಹಾಗೂ ಕರುಣೆಯಲ್ಲಿ ತಮ್ಮನ್ನೇ ನವೀಕರಿಸಿಕೊಳ್ಳಲು ಇರುವ ಸುಸಂದರ್ಭವಾಗಿದೆ ಎಂದು ಪೋಪ್ ಲಿಯೋ ಅವರು ಆರಂಭದಲ್ಲಿ ಹೇಳಿದರು. ಭರವಸೆ ನಮ್ಮನ್ನು ಎಂದಿಗೂ ಹತಾಶೆಗೊಳಿಸುವುದಿಲ್ಲ ಏಕೆಂದರೆ ನಾವು ಇಟ್ಟಿರುವ ಆ ಭರವಸೆಯು ಯೇಸುಕ್ರಿಸ್ತರ ಪ್ರೀತಿಯಲ್ಲಿದೆ ಎಂದು ಹೇಳಿದರು. ಉಕ್ರೇನ್ ದೇಶವು ಪ್ರಸ್ತುತ ಯುದ್ಧದಲ್ಲಿರುವಾಗ ಭರವಸೆಯ ಕುರಿತು ಮಾತನಾಡುವುದು ಕಷ್ಟವಾಗುತ್ತದೆ ಎಂದು ಹೇಳಿರುವ ಪೋಪ್ ಲಿಯೋ ಅವರು ಈ ಗುರಿಯಿರದ ಯುದ್ಧದಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವವರಿಗೆ ಸಾಂತ್ವನವನ್ನು ಹಾಗೂ ಸಮಾಧಾನವನ್ನು ಹೇಳುವುದು ಬಹಳ ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ ವಿಶ್ವಾಸ ಹಾಗೂ ಭರವಸೆ ಎಂಬುದು ದೇವರ ಶಕ್ತಿಯು ವಿವಿಧ ರೂಪಗಳಲ್ಲಿ ವ್ಯಕ್ತವಾಗುವ ಅಭಿವ್ಯಕ್ತಿ ಎಂದು ಪೋಪ್ ಲಿಯೋ ಅವರು ಹೇಳಿದ್ದಾರೆ.
ಬಿಷಪ್ಪರುಗಳ ಕುರಿತು ಮಾತನಾಡಿದ ಪೋಪ್ ಲಿಯೋ ಅವರು "ನಾವು ಪ್ರಭು ಕ್ರಿಸ್ತರ ನಾಮದಲ್ಲಿ ನಮ್ಮ ಸಹಾಯವನ್ನು ಕೇಳಿ ಬರುವ ಗಾಯಗೊಂಡ ಎಲ್ಲರನ್ನೂ ಸಹ ಭರವಸೆಯಿಂದ ನೋಡಿಕೊಳ್ಳಬೇಕು ಹಾಗೂ ಅವರ ಸೇವೆಯನ್ನು ಮಾಡಬೇಕು ಎಂದು ಹೇಳಿದ್ದಾರೆ. ತಮ್ಮ ಎಲ್ಲಾ ಸೇವೆಗಳಲ್ಲಿ ಉಕ್ರೇನಿಯನ್ ಗ್ರೀಕ್ ಕಥೋಲಿಕ ಧರ್ಮಸಭೆಯೊಂದಿಗೆ ಐಕ್ಯಮತ್ಯವನ್ನು ಸಾಧಿಸುವುದಾಗಿ ಪೋಪ್ ಲಿಯೋ ಅವರು ಹೇಳಿದ್ದಾರೆ.
ಅಂತಿಮವಾಗಿ ಅವರು ಪ್ರಾರ್ಥನೆಯೊಂದಿಗೆ ತಮ್ಮ ಮಾತುಗಳನ್ನು ಮುಗಿಸಿದರು. "ದೇವಮಾತೆಯ ಮಧ್ಯಸ್ಥಿಕೆಯ ಮೂಲಕ ಯುದ್ಧಗ್ರಸ್ಥ ಉಕ್ರೇನ್ ದೇಶದಲ್ಲಿ ಶಾಂತಿ ನೆಲೆಸಲಿ" ಎಂದು ಪ್ರಾರ್ಥಿಸಿದರು.