ಪಂಚಶತ್ತಮ ಹಬ್ಬದ ಜಾಗರಣೆಯಲ್ಲಿ ಪೋಪ್: ಎಲ್ಲರೂ ಒಂದಾಗಿ ಜೀವಿಸಬೇಕೆಂಬುದು ದೇವರ ಅಭಿಲಾಷೆಯಾಗಿದೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ಪವಿತ್ರಾತ್ಮರ ಹಬ್ಬದ ಹಿಂದಿನ ದಿನ ಪ್ರಾರ್ಥನಾ ಸೇವೆಯನ್ನು ಮುನ್ನಡೆಸಿದ್ದು, ಈ ವೇಳೆ ಅವರು ಎಲ್ಲರೂ ಒಂದಾಗಿ ಜೀವಿಸಬೇಕೆಂಬುದು ದೇವರ ಅಭಿಲಾಷೆಯಾಗಿದೆ ಎಂದು ಹೇಳಿದ್ದಾರೆ. ಧಾರ್ಮಿಕ ಗುರುಗಳು ಹಾಗೂ ವ್ಯಕ್ತಿಗಳ ಜ್ಯೂಬಿಲಿಯ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ.
ಧರ್ಮಸಭೆಯ ಚಳುವಳಿಗಳು, ಸಂಸ್ಥೆಗಳು ಹಾಗೂ ಸಮುದಾಯಗಳ ಜ್ಯೂಬಿಲಿ ಹಿನ್ನೆಲೆಯಲ್ಲಿ ನಿನ್ನೆ ಸಂತ ಪೇತ್ರರ ಚೌಕದಲ್ಲಿ ಸುಮಾರು 100 ದೇಶಗಳಿಂದ ಆಗಮಿಸಿದ್ದ 70,000 ಭಕ್ತಾಧಿಗಳು ನೆರೆದಿದ್ದರು. ಆರಂಭಿಕ ಪ್ರಾರ್ಥನೆ ಮತ್ತು ಗೀತೆಗಳ ನಂತರ ಭಕ್ತಾಧಿಗಳು ಪೋಪ್ ಅವರ ದೇವರ ವಾಕ್ಯದ ವಿಧಿಯಲ್ಲಿ ಸೇರಿಕೊಂಡರು. ಈ ಸಂದರ್ಭದಲ್ಲಿ ಪವಿತ್ರಾತ್ಮರ ಉಡುಗೊರೆಯಾದ ಒಗ್ಗಟ್ಟಿನ ಕುರಿತು ಚಿಂತನೆಯನ್ನು ನಡೆಸಲಾಯಿತು.
"ಸಂತ ಪೇತ್ರರ ಚೌಕವು, ತನ್ನೆಲ್ಲಾ ಘನತೆಯಲ್ಲಿ ವಿಶ್ವದ ವಿವಿಧ ಭಕ್ತಾಧಿಗಳನ್ನು ಒಳಗೊಳ್ಳುತ್ತಾ ಒಂದೇ ಧರ್ಮಸಭೆಯ ಸಮುದಾಯವಾಗಿ ಅನ್ಯೋನ್ಯತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಹೇಳಿದ್ದಾರೆ.
ಮುಂದುವರೆದು ಪೋಪ್ ಹದಿನಾಲ್ಕನೇ ಲಿಯೋ ಅವರು ಸಿನೊಡಾಲಿಟಿಯ ಕುರಿತು ಮಾತನಾಡಿದರು. ಈ ವೇಳೆ ಪರಮ ತ್ರಿತ್ವದ ಕುರಿತು ಮಾತನಾಡಿದ ಅವರು "ಪರಮ ತ್ರಿತ್ವದಲ್ಲಿ ಪಿತ, ಸುತ ಮತ್ತು ಪವಿತ್ರಾತ್ಮರಿದ್ದರೂ ಅವರು ಏಕ ದೇವರಾಗಿದ್ದಾರೆ. ಅಂತೆಯೇ ಧರ್ಮಸಭೆಯಾಗಿ ನಾವೆಲ್ಲರೂ ಅವರೊಡನೆ ಬೆಸುಗೆಯಲ್ಲಿ ಒಂದಾಗಿ, ಒಗ್ಗಟ್ಟಾಗಿರಬೇಕು" ಎಂದು ಹೇಳಿದ್ದಾರೆ.
ಇದೇ ವೇಳೆ ಪೋಪ್ ಹದಿನಾಲ್ಕನೇ ಲಿಯೋ ಅವರು ಶುಭಸಂದೇಶ ಪ್ರಸಾರದ ಕುರಿತು ಮಾತನಾಡಿ "ಶುಭಸಂದೇಶ ಪ್ರಸಾರ ಎಂದರೆ ಜಗತ್ತನ್ನು ಆವರಿಸಿಕೊಳ್ಳುವುದಲ್ಲ. ಬದಲಿಗೆ ದೇವರ ಅನಂತ ಕೃಪೆ ಹಾಗೂ ವರದಾನಗಳನ್ನು ಇತರರಿಗೆ ತಿಳಿಸುವುದಾಗಿದೆ" ಎಂದು ಹೇಳಿದರು.