ಪೋಪ್ ಲಿಯೋ XIV: ಕ್ರೈಸ್ತರನ್ನು ಒಗ್ಗೂಡಿಸುವುದು ಅವರನ್ನು ಬೇರ್ಪಡಿಸುವುದಕ್ಕಿಂತ ಹೆಚ್ಚು ಶಕ್ತಿಯುತವಾಗಿದೆ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್
"ನೈಸಿಯಾ ಸಮ್ಮೇಳನ ಮತ್ತು ಮೂರನೇ ಸಹಸ್ರಮಾನದ ಧರ್ಮಸಭೆ: ಕಥೋಲಿಕ-ಸಂಪ್ರದಾಯವಾದಿ ಐಕ್ಯತೆಯ ಕಡೆಗೆ" ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡ ಸದಸ್ಯರನ್ನು ಪೋಪ್ ಹದಿನಾಲ್ಕನೇ ಲಿಯೋ ಅವರು ಭೇಟಿ ಮಾಡಿದ್ದಾರೆ. ಕ್ರೈಸ್ತರನ್ನು ಒಗ್ಗೂಡಿಸುವ ಹಲವು ಅಂಶಗಳ ಕುರಿತು ಪ್ರಸ್ತಾಪಿಸಿರುವ ಅವರು; ನೈಸಿಯಾ ಸಮ್ಮೇಳನಕ್ಕೆ 1700 ವರ್ಷಗಳಾಗಿದೆ ಎಂದು ಗಮನಿಸಿದ್ದಾರೆ.
"ನೈಸಿಯಾ ಸಮ್ಮೇಳನವು ಧರ್ಮಸಭೆ ಎಂಬುದು ಹೇಗೆ ಎಲ್ಲಾ ಕ್ರೈಸ್ತರನ್ನು ಒಗ್ಗೂಡಿಸಿ, ಒಳಗೊಳ್ಳುತ್ತಾ ಮುಂದುವರೆಯಬೇಕು ಎಂಬುದರ ದಿಕ್ಸೂಚಿಯಾಗಿದೆ" ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು "ನೈಸಿಯಾ ಸಮ್ಮೇಳನ ಮತ್ತು ಮೂರನೇ ಸಹಸ್ರಮಾನದ ಧರ್ಮಸಭೆ: ಕಥೋಲಿಕ-ಸಂಪ್ರದಾಯವಾದಿ ಐಕ್ಯತೆಯ ಕಡೆಗೆ" ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡ ಸದಸ್ಯರನ್ನು ಉದ್ದೇಶಿಸಿ ಹೇಳಿದರು.
ಈ ವಿಚಾರ ಸಂಕಿರಣವು ರೋಮ್ ನಗರದ ಪೊಂಟಿಫಿಕಲ್ ಯೂನಿವರ್ಸಿಟಿ ಆಫ್ ಸೇಂಟ್ ಥಾಮಸ್ ಅಕ್ವಿನಾಸ್ (ಎಂಜೆಲೀಕುಂ) ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ ವಿವಿಧ ಸಂಪ್ರದಾಯವಾದಿ ಕ್ರೈಸ್ತ ಪ್ರಧಾನರುಗಳು ಹಾಗೂ ಧಾರ್ಮಿಕ ವ್ಯಕ್ತಿಗಳು ಭಾಗವಹಿಸಿದ್ದರು.
2025 ರಲ್ಲಿ ಕಥೋಲಿಕ ಧರ್ಮಸಭೆಯು ನೈಸಿಯಾ ಸಮ್ಮೇಳನದ 1700 ವರ್ಷಗಳ ವರ್ಷಾಚರಣೆಯನ್ನು ನಡೆಸಿತ್ತಿದೆ. ಕ್ರಿಸ್ತಶಕ 325 ರಲ್ಲಿ ಚಕ್ರವರ್ತಿ ಮೊದಲನೇ ಕಾನ್ಸ್ಟಂಟೈನನು ಇಟಲಿಯ ನೈಸಿಯಾ ನಗರದಲ್ಲಿ ಈ ಮಹಾಸಮ್ಮೇಳನವನ್ನು ಆಯೋಜಿಸಿದ್ದನು.
ಕ್ರೈಸ್ತ ಪಂಗಡಗಳ ಐಕ್ಯತೆಯ ಕುರಿತು ಮಾತನಾಡಿದ ಪೋಪ್ ಲಿಯೋ ಅವರು ಕಥೋಲಿಕ, ಸಂಪ್ರದಾಯವಾದಿಯಾಗಿ ವಿವಿಧ ಕ್ರೈಸ್ತ ಪಂಗಡಗಳು ಕ್ರಿಸ್ತರ ಅಣತಿಯಂತೆ ಐಕ್ಯತೆಯಿಂದಿರಲು ನೈಸಿಯಾ ಸಮ್ಮೇಳನವೆಂಬುದು ಬುನಾದಿಯಾಗಿದೆ ಎಂದು ಹೇಳಿದರು. ಈ ಮಾತನ್ನು ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸದಸ್ಯರನ್ನು ಉದ್ದೇಶಿಸಿ ಹೇಳಿದರು.
ಪವಿತ್ರಾತ್ಮರ ಹಬ್ಬದ ಹಿಂದಿನ ದಿನ ಮಾತನಾಡಿದ ಪೋಪ್ ಲಿಯೋ ಅವರು "ಕ್ರೈಸ್ತ ಐಕ್ಯತೆ ಎಂಬುದು ನಾವು ಮಾಡುವ ಹಲವು ರೀತಿಯ ಪರಿಶ್ರಮಗಳಿಂದಲ್ಲ ಅಥವಾ ಈಗಾಗಲೇ ಸಿದ್ಧಪಡಿಸಿರುವ ಮಾದರಿಗಳು ಅಥವಾ ನೀಲನಕ್ಷೆಗಳ ಮೂಲಕ ಆಗುವುದಲ್ಲ. ಬದಲಿಗೆ ಕ್ರೈಸ್ತ ಐಕ್ಯತೆ ಎಂಬುದು ಕ್ರಿಸ್ತರ ಉಡುಗೊರೆಯಾಗಿದ್ದು, ಅವರ ಇಚ್ಛೆಯಂತೆ ಆಗುವುದಾಗಿದೆ" ಎಂದು ಹೇಳಿದರು.
ಕ್ರಿಸ್ತೀಯ ಐಕ್ಯತೆಯ ಪಯಣದಲ್ಲಿ ನಮಗೆ ಮುಖ್ಯವಾಗುವುದು ಮೂರು ಅಂಶಗಳು - ನೈಸಿಯಾ ಸಮ್ಮೇಳನದ ವಿಶ್ವಾಸ, ಸಿನೊಡಾಲಿಟಿ, ಹಾಗೂ ಪುನರುತ್ಧಾನದ ದಿನಾಂಕ ಎಂದು ಹೇಳಿದ ಪೋಪ್ ಲಿಯೋ ಅವರು ನಮ್ಮಿಬ್ಬರಲ್ಲೂ ಸಾಮಾನ್ಯವಾಗಿರುವ ಅನೇಕ ಅಂಶಗಳಿವೆ ಎಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು ನಾವೆಲ್ಲರೂ ಜೊತೆಯಾಗಿ ನಮ್ಮ ವಿಶ್ವಾಸವನ್ನು ಪ್ರಕಟಿಸಬೇಕು ಎಂದು ಹೇಳಿದರು.
ಅಂತಿಮವಾಗಿ, ನೆರೆದಿದ್ದ ಎಲ್ಲರ ಮೇಲೂ ಪೋಪ್ ಲಿಯೋ ಅವರು ಪ್ರೇಷಿತ ಆಶೀರ್ವಾದವನ್ನು ಕೋರಿದರು.