MAP

ಪೋಪ್ ಲಿಯೋ: ಕುಟುಂಬಗಳು ಮಾನವ ಕುಲದ ಭವಿಷ್ಯದ ತೊಟ್ಟಿಲುಗಳು

ಕುಟುಂಬಗಳು, ಮಕ್ಕಳು, ಅಜ್ಜ-ಅಜ್ಜಿಯರು, ಹಾಗೂ ಹಿರಿಯರ ಜ್ಯೂಬಿಲಿಯನ್ನು ಮುಕ್ತಾಯಗೊಳಿಸುತ್ತಾ ಮಾತನಾಡಿರುವ ಪೋಪ್ ಹದಿನಾಲ್ಕನೇ ಲಿಯೋ ಅವರು ಈ ಜಗತ್ತಿಗೆ ಪ್ರೀತಿಯನ್ನು ತರುವ ಕ್ರಿಸ್ತರಲ್ಲಿ ನಾವೆಲ್ಲರೂ ಒಂದಾಗಿರಬೇಕು ಹಾಗೂ ಬೇರೂರಬೇಕು ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಕುಟುಂಬಗಳು, ಮಕ್ಕಳು, ಅಜ್ಜ-ಅಜ್ಜಿಯರು, ಹಾಗೂ ಹಿರಿಯರ ಜ್ಯೂಬಿಲಿಯನ್ನು ಮುಕ್ತಾಯಗೊಳಿಸುತ್ತಾ ಮಾತನಾಡಿರುವ ಪೋಪ್ ಹದಿನಾಲ್ಕನೇ ಲಿಯೋ ಅವರು ಈ ಜಗತ್ತಿಗೆ ಪ್ರೀತಿಯನ್ನು ತರುವ ಕ್ರಿಸ್ತರಲ್ಲಿ ನಾವೆಲ್ಲರೂ ಒಂದಾಗಿರಬೇಕು ಹಾಗೂ ಬೇರೂರಬೇಕು ಎಂದು ಹೇಳಿದ್ದಾರೆ.

ಆ ದಿನದ ಶುಭಸಂದೇಶವು ಯೇಸು ಕೊನೆಯ ಭೋಜನದಲ್ಲಿ ಎಲ್ಲರೂ "ಒಂದಾಗಲಿ" ಎಂದು ಪ್ರಾರ್ಥಿಸುವುದನ್ನು ತೋರಿಸಿದೆ, ಇದನ್ನು ಪೋಪ್ "ನಾವು ಬಯಸಬಹುದಾದ ಅತ್ಯಂತ ದೊಡ್ಡ ಒಳಿತಿನ ಅಂದರೆ, ಇದು ಮೊದಲನೆಯದಾಗಿ ಯೇಸು ತರಲು ಬರುವ ಉಡುಗೊರೆಯಾಗಿದೆ." ಎಂದು ವಿವರಿಸಿದರು. ಯೇಸು ಪ್ರಾರ್ಥಿಸಿದ ಈ ಐಕ್ಯತೆಯು ದೇವರು ಜೀವನವನ್ನು ಸೃಷ್ಟಿಸಿ ಜಗತ್ತಿಗೆ ಮೋಕ್ಷವನ್ನು ತಂದ ಅದೇ ಪ್ರೀತಿಯಿಂದ ಬರುತ್ತದೆ ಎಂದು ಹೇಳಿದರು.

ಪೋಪ್ ಲಿಯೋ ಅವರು ನಾವು ಜಗತ್ತಿನೊಂದಿಗೆ ಹಂಚಿಕೊಳ್ಳಬೇಕಾದ ಸಂದೇಶ ಇದಾಗಿದೆ ಎಂದು ಒತ್ತಿ ಹೇಳಿದರು. ನಮ್ಮ ಕುಟುಂಬಗಳಲ್ಲಿ ಮತ್ತು ನಾವು ವಾಸಿಸುವ, ಕೆಲಸ ಮಾಡುವ ಮತ್ತು ಅಧ್ಯಯನ ಮಾಡುವ ಸ್ಥಳಗಳಲ್ಲಿ "ಒಬ್ಬರಾಗಿ" ಇರಲು ನಾವು ಇಲ್ಲಿದ್ದೇವೆ. ಆದರೆ ಒಂದಾಗಿರುವುದು ಎಂದರೆ ಒಂದೇ ಆಗಿರುವುದು ಎಂದರ್ಥವಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನಾವೆಲ್ಲರೂ ವಿಭಿನ್ನವಾಗಿದ್ದರೂ, ಜೀವನದ ಪ್ರತಿಯೊಂದು ಸನ್ನಿವೇಶ ಮತ್ತು ಹಂತದಲ್ಲೂ ನಾವು ಯಾವಾಗಲೂ ಒಂದಾಗಿರಲು ಕರೆಯಲ್ಪಟ್ಟಿದ್ದೇವೆ ಎಂದು ಅವರು ಹೇಳಿದರು.

ಸಂಘರ್ಷ ಮತ್ತು ಭಿನ್ನಾಭಿಪ್ರಾಯಗಳಿಂದ ತುಂಬಿರುವ ಜಗತ್ತಿನಲ್ಲಿ, ಪ್ರತಿಯೊಬ್ಬರೂ ತಮ್ಮ ಪ್ರೀತಿಯನ್ನು ಕ್ರಿಸ್ತನಲ್ಲಿ ನೆಲೆಗೊಳಿಸುವಂತೆ ಪೋಪ್ ಪ್ರೋತ್ಸಾಹಿಸಿದರು ಏಕೆಂದರೆ ನಾವು ಇದನ್ನು ಮಾಡಿದರೆ, "ನಾವು ಸಮಾಜ ಮತ್ತು ಜಗತ್ತಿನಲ್ಲಿ ಎಲ್ಲರಿಗೂ ಶಾಂತಿಯ ಸಂಕೇತವಾಗುತ್ತೇವೆ." ಇದು ಮನೆಯಿಂದಲೇ ಪ್ರಾರಂಭವಾಗುತ್ತದೆ ಎಂದು ಅವರು ಎಲ್ಲರಿಗೂ ನೆನಪಿಸಿದರು, ಏಕೆಂದರೆ ಕುಟುಂಬಗಳು "ಮಾನವೀಯತೆಯ ಭವಿಷ್ಯದ ತೊಟ್ಟಿಲು" ಎಂದು ಅವರು ಹೇಳಿದರು.

ರೆಜೀನಾ ಚೇಲಿ ಪ್ರಾರ್ಥನೆ

ಇದೇ ವೇಳೆ ಅವರು ಪ್ರಪಂಚದಾದ್ಯಂತ ಯುದ್ಧದಿಂದ ನರಳುತ್ತಿರುವ ಎಲ್ಲಾ ಕುಟುಂಬಗಳನ್ನು ನೆನಪಿಸಿಕೊಂಡಿದ್ದು, ಅವರಿಗಾಗಿ ವಿಶೇಷವಾಗಿ ಪ್ರಾರ್ಥಿಸಬೇಕೆಂದು ಕರೆ ನೀಡಿದ್ದಾರೆ. "ಮಾತೆ ಮರಿಯಮ್ಮನವರು ನಮ್ಮೆಲ್ಲರಿಗೂ ಮುಂದೆ ಸಾಗುವ ಶಕ್ತಿಯನ್ನು ನೀಡಲಿ" ಎಂದು ಪ್ರಾರ್ಥಿಸಿದ್ದಾರೆ.

ಕುಟುಂಬಗಳೊಂದಿಗೆ ಬಂದಿದ್ದ ಮಕ್ಕಳನ್ನು ನೋಡುತ್ತಾ ಸಂತೋಷದಿಂದ ಮಾತನಾಡಿದ ಪೋಪರು ಮಕ್ಕಳು ಆನಂದವನ್ನು ಹಾಗೂ ಸಕಾರಾತ್ಮಕತೆಯನ್ನು ತರುತ್ತಾರೆ ಎಂದು ಹೇಳಿದರು. "ಕುಟುಂಬಗಳು ಪುಟ್ಟ ಧರ್ಮಸಭೆಗಳಾಗಿದ್ದು, ಧರ್ಮಸಭೆಯ ಆಧಾರ ಇವೇ" ಎಂದು ಹೇಳಿದ್ದಾರೆ. "ವಿಶ್ವಾಸ, ಭರವಸೆ ಮತ್ತು ಪ್ರೀತಿ ಸದಾ ನಿಮ್ಮಲ್ಲಿ ನೆಲೆಗೊಳ್ಳಲಿ" ಎಂದು ಹೇಳಿದ ಪೋಪ್ ಹದಿನಾಲ್ಕನೇ ಲಿಯೋ ಅವರು ವಿಶೇಷವಾಗಿ ಹಿರಿಯರಿಗೆ ಹಾಗೂ ಅಜ್ಜ-ಅಜ್ಜಿಯರಿಗೆ ಧನ್ಯವಾದಗಳನ್ನು ತಿಳಿಸಿದರು.

ಇದೇ ವೇಳೆ ಪೊಲೆಂಡ್ ದೇಶದ ಕನ್ಯಾಸ್ತ್ರೀಯೊಬ್ಬರನ್ನು ಪುನೀತರ ಪದವಿಗೇರಿಸುವ ಕುರಿತು ಸಹ ಪೋಪ್ ಹದಿನಾಲ್ಕನೇ ಲಿಯೋ ಅವರು ಮಾತನಾಡಿದರು. ಇಂದು 59ನೇ ವಿಶ್ವ ಸಾಮಾಜಿಕ ಸಂವಹನ ದಿನವಾದ ಕಾರಣ, ಅದನ್ನು ಆರಂಭಿಸಿದ ಪೋಪ್ ಸಂತ ಆರನೇ ಪೌಲರನ್ನು ನೆನಪಿಸಿಕೊಂಡರು.

01 ಜೂನ್ 2025, 17:13