ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ಸಾಕ್ಷಿ ಮತ್ತು ಕ್ಷಮೆಯಿಂದ ಶಾಂತಿ ಉಲ್ಬಣಿಸಲಿ
ವರದಿ: ವ್ಯಾಟಿಕನ್ ನ್ಯೂಸ್
ಸಂತರುಗಳಾ ಪೇತ್ರ ಮತ್ತು ಪೌಲರ ಹಬ್ಬದಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಕ್ರೈಸ್ತ ಐಕ್ಯತೆಯ ಕುರಿತು ಮಾತನಾಡಿದ್ದಾರೆ. ರಕ್ತಸಾಕ್ಷಿ ಹಾಗೂ ಕ್ಷಮೆಯ ಮೂಲಕ ನಮ್ಮ ವಿಶ್ವಾಸದಲ್ಲಿ ನಾವು ಗಟ್ಟಿಯಾಗಬೇಕು ಸಂತರಂತೆ ಎಂದು ಹೇಳಿದ್ದಾರೆ.
ಪೋಪ್ ಲಿಯೋ ಅವರು ರೋಮ್ ಧರ್ಮಸಭೆ ಹೇಗೆ ಹುಟ್ಟಿತು ಎಂಬ ಕುರಿತು ಮೆಲುಕು ಹಾಕುತ್ತಾ, ಇದು ಪ್ರೇಷಿತರ ರಕ್ತದ ಮೇಲೆ ನಿರ್ಮಿಸಲ್ಪಟ್ಟ ಧರ್ಮಸಭೆಯಾಗಿದ್ದು, ವಿಶ್ವಾಸಕ್ಕಾಗಿ ಪ್ರಭುವಿಗಾಗಿ ಅನೇಕ ಪ್ರೇಷಿತರು ಹಾಗೂ ಸಂತರುಗಳು ತಮ್ಮ ರಕ್ತವನ್ನು ಚೆಲ್ಲಿದ್ದಾರೆ ಎಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು ಇಂದೂ ಸಹ ಜಗತ್ತಿನಾದ್ಯಂತ ಅನೇಕ ಕ್ರೈಸ್ತರು ಕ್ರಿಸ್ತರ ಮೇಲಿನ ವಿಶ್ವಾಸಕ್ಕಾಗಿ ರಕ್ತಸಾಕ್ಷಿಗಳಾಗಿ ಮಡಿಯುತ್ತಿದ್ದಾರೆ ಎಂದು ಹೇಳಿದರು.
"ಕ್ರೈಸ್ತ ಒಗ್ಗಟ್ಟಿನ ರಕ್ತಸಾಕ್ಷಿ"ಗಳ ಕುರಿತು ಮಾತನಾಡಿದ ಪೋಪ್ ಲಿಯೋ ಅವರು ಕ್ರೈಸ್ತ ಒಗ್ಗಟ್ಟು ಎಂಬುದು ದೈವಶಾಸ್ತ್ರ್ರದ ವಾದಗಳಿಗೆ ಮಾತ್ರ ಸೀಮಿತವಾಗಬಾರದು ಬದಲಿಗೆ ವಿಶ್ವಾಸವನ್ನು ಪ್ರಕಟಿಸುವ ನಿಟ್ಟಿನಲ್ಲಿ ಅದು ತ್ಯಾಗಕ್ಕೂ ಸಹ ಮುಂದಾಗಬೇಕು ಎಂದು ಹೇಳಿದ್ದಾರೆ. ರೋಮ್ ಧರ್ಮಸಭೆ ಸಂತರುಗಳಾದ ಪೇತ್ರ ಮತ್ತು ಪೌಲರ ರಕ್ತಸಾಕ್ಷಿಯ ಮೂಲಕ ಎಲ್ಲಾ ಕ್ರೈಸ್ತ ಪಂಗಡಗಳ ಐಕ್ಯತೆ ಹಾಗೂ ಸಹಭಾಗಿತ್ವಕ್ಕೆ ಮುಕ್ತವಾಗಿದೆ ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಹೇಳಿದರು.
ಇಂದಿನ ಶುಭಸಂದೇಶದ ಕುರಿತು ಮಾತನಾಡಿದ ಅವರು ಯೇಸುಕ್ರಿಸ್ತರೇ ನಿಜವಾದ ಬಂಡೆ ಎಂದು ಹೇಳಿದರು. ಕಟ್ಟಡ ನಿರ್ಮಿಸುವವರು ಬೇಡವೆಂದು ಎಸೆದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು ಎಂಬ ವಾಕ್ಯದಂತೆ ಕ್ರಿಸ್ತರು ತಮ್ಮ ಧರ್ಮಸಭೆಯನ್ನು ಮುನ್ನಡೆಸಲು ಸಂತ ಪೇತ್ರರನ್ನು ಆಯ್ಕೆಮಾಡಿಕೊಂಡರು ಎಂದು ಹೇಳಿದರು.
ಸಂತತನ ಎಂಬುದು ಅತ್ಯುತ್ತಮ ಮಾದರಿ ಇಂದ ಬರುವುದಿಲ್ಲ; ಬದಲಿಗೆ ಅದು ಕ್ಷಮೆಯಿಂದ ಬರುತ್ತದೆ ಎಂದು ಹೇಳಿದರು. ಕ್ರಿಸ್ತರು ನಮ್ಮನ್ನು ಕ್ಷಮಿಸಿದಂತೆ ನಾವೂ ಸಹ ಒಬ್ಬರನ್ನೊಬ್ಬರು ಕ್ಷಮಿಸಬೇಕು ಹಾಗೂ ಆ ಮೂಲಕ ನಿಜವಾದ ಕ್ರಿಸ್ತೀಯ ಸಾಕ್ಷಿಗಳಾಗಬೇಕು ಎಂದು ಹೇಳಿದರು.
ಅಂತಿಮಾಗಿ ಅವರು ಮಾತೆ ಮರಿಯಮ್ಮನವರ ಭಿನ್ನಹ ಹಾಗೂ ಸಂತರುಗಳಾದ ಪೇತ್ರ ಮತ್ತು ಪೌಲರ ಭಿನ್ನಹವನ್ನು ಕೇಳುವುದರ ಮೂಲಕ ತಮ್ಮ ಮಾತುಗಳನ್ನು ಮುಗಿಸಿದರು.