ಪೋಪ್ ಲಿಯೋ XIV: ಸಂತ ಪೇತ್ರ ಮತ್ತು ಪೌಲರು ಸಹಭಾಗಿತ್ವ ಮತ್ತು ಸಾಮರಸ್ಯದ ಮಾದರಿ
ವರದಿ: ವ್ಯಾಟಿಕನ್ ನ್ಯೂಸ್
ಇಂದು ಸಂತರುಗಳಾದ ಪೇತ್ರ ಮತ್ತು ಪೌಲರ ಹಬ್ಬದ ಹಿನ್ನೆಲೆ ಪೋಪ್ ಹದಿನಾಲ್ಕನೇ ಸಿಂಹನಾಥರು (ಲಿಯೋ) ವ್ಯಾಟಿಕನ್ನಿನಲ್ಲಿ ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಸಂತ ಪೇತ್ರ ಮತ್ತು ಪೌಲರು ರೋಮ್ ಧರ್ಮಕ್ಷೇತ್ರದ ಪಾಲಕ ಸಂತರೂ ಸಹ ಆಗಿದ್ದಾರೆ. ಇದೇ ವೇಳೆ ಪೋಪ್ ಅವರು ಮೆಟ್ರೊಪಾಲಿಟನ್ ಮಹಾಧರ್ಮಾಧ್ಯಕ್ಷರಿಗೆ ಪಾಲಿಯುಂ (ಕುತ್ತಿಗೆಗೆ ಹಾಕಿಕೊಳ್ಳುವ ವಿಶೇಷ ವಸ್ತ್ರ) ಅನ್ನು ನೀಡಿದ್ದಾರೆ. ಪೋಪ್ ಲಿಯೋ ಅವರು ಈ ಇಬ್ಬರೂ ಸಂತರ ಜೀವನಗಳ ಕುರಿತು ಚಿಂತನೆಯನ್ನು ನಡೆಸುವಂತೆ ಭಕ್ತಾಧಿಗಳಿಗೆ ಕರೆ ನೀಡಿದ್ದಾರೆ.
ಪಾಲಿಯುಂ ವಸ್ತ್ರ ಎಂಬುದು ಮೆಟ್ರೋಪಾಲಿಟನ್ ಮಹಾಧರ್ಮಾಧ್ಯಕ್ಷರುಗಳು ಹಾಗೂ ಪ್ರೈಮೇಟ್ (ಹಲವು ಪ್ರಾಂತ್ಯಗಳ ಧರ್ಮಕ್ಷೇತ್ರಗಳ ಒಕ್ಕೂಟದ ಉಸ್ತುವಾರಿಗಳು) ಗಳಿಗೆ ಪೋಪರು ನೀಡುವ ವಿಶೇಷ ವಸ್ತ್ರವಾಗಿದ್ದು, ಇದರು ರೋಮ್ ಧರ್ಮಾಧ್ಯಕ್ಷರೊಂದಿಗೆ ಈ ಮಹಾಧರ್ಮಾಧ್ಯಕ್ಷರುಗಳು ಹೊಂದುವ ಸಹಭಾಗಿತ್ವ ಹಾಗೂ ಸಮನ್ವಯದ ಸಂಕೇತವಾಗಿದೆ. ಇಂದಿನ ಸಾಂಭ್ರಮಿಕ ಬಲಿಪೂಜೆಯಲ್ಲಿ ಪೋಪ್ ಲಿಯೋ ಅವರು 54 ಮಹಾಧರ್ಮಾಧ್ಯಕ್ಷರುಗಳಿಗೆ ಪಾಲಿಯುಂ ವಸ್ತ್ರವನ್ನು ನೀಡಿ, ಆಶೀರ್ವದಿಸಿದ್ದಾರೆ.
ಸಂತರುಗಳಾದ ಪೇತ್ರ ಮತ್ತು ಪೌಲರ ಕುರಿತು ಮಾತನಾಡಿದ ಪೋಪ್ ಲಿಯೋ ಅವರು ಇವರಿಬ್ಬರೂ ಸಹ ರಕ್ತಸಾಕ್ಷಿಗಳು ಎಂಬುದನ್ನು ನೆನಪಿಸಿಕೊಂಡರು. ಇಬ್ಬರೂ ಸಹ ಬೇರೆ ಬೇರೆ ಹಿನ್ನಲೆಯಿಂದ ಬಂದವರಾಗಿದ್ದರೂ ಸಹ ಆತ್ಮರಲ್ಲಿನ ಅವರ ವಿಶ್ವಾಸವು ಶುಭಸಂದೇಶ ಸಾರುವುದರಿಂದ ಅವರನ್ನು ಭಿನ್ನವಾಗಿಸಲಿಲ್ಲ. ಅವರಿಬ್ಬರೂ ಸಹ ದೇವರಿಂದ ವಿವಿಧ ವರದಾನಗಳನ್ನು ಪಡೆದಿದ್ದರೂ ಸಹ ಕ್ರಿಸ್ತರ ಶುಭಸಂದೇಶವನ್ನು ಆಸ್ಥೆಯಿಂದ ಸಾರುತ್ತಾ ಧರ್ಮಸಭೆಗೆ ಬುನಾದಿಯನ್ನು ಹಾಕಿದರು ಎಂದು ಪೋಪ್ ಹೇಳಿದರು.
ಸಂತರುಗಳಾದ ಪೇತ್ರ ಮತ್ತು ಪೌಲರ ಜೀವನದಿಂದ ನಾವು ಅರ್ಥಮಾಡಿಕೊಳ್ಳಬೇಕಿರುವುದೇನೆಂದರೆ ನಾವು ಪ್ರಭು ನಮ್ಮನ್ನು ನಮ್ಮ ಯಾವುದೇ ಹಿನ್ನೆಲೆಗಳ ಹೊರತಾಗಿಯೂ ಆರಿಸಿಕೊಳ್ಳುತ್ತಾರೆ ಹಾಗೂ ಶುಭಸಂದೇಶದೊಂದಿಗೆ ನಾವು ಸಹಭಾಗಿತ್ವ ಹಾಗೂ ಸಮನ್ವಯವನ್ನು ಹೊಂದುವಂತೆ ಅನುಗ್ರಹಿಸುತ್ತಾರೆ ಎಂಬುದಾಗಿದೆ. ಸಂತರುಗಳೂ ಅಷ್ಟೇ. ವಿವಿಧ ವಿಷಯಗಳ ಕುರಿತು ಚರ್ಚಿಸಿದರು ಹಾಗೂ ಪರಸ್ಪರ ವಾದಿಸಿದರೂ ಸಹ ಕೊನೆಗೆ ಅವರು ವಿಶ್ವಾಸವನ್ನು ಎತ್ತಿಹಿಡಿದರು. ಅಂತೇಯೇ ನಾವೂಬ ಸಹ ಅವರ ಮಾದರಿಯನ್ನು ಅನುಸರಿಸಬೇಕಿದೆ ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಹೇಳಿದರು.
ರೋಮ್ ಧರ್ಮಸಭೆಯನ್ನು ನಾವು ಐಕ್ಯತೆಯ ಚಿಹ್ನೆಯನ್ನಾಗಿ ನೋಡಬೇಕು ಹಾಗೂ ಅದೇ ರೀತಿ ಮಹಾಧರ್ಮಾಧ್ಯಕ್ಷರುಗಳಿಗೆ ನೀಡಲಾಗುವ ಪಾಲಿಯುಂ ವಸ್ತ್ರವು ಅವರು ರೋಮ್ ಧರ್ಮಾಧ್ಯಕ್ಷರೊಂದಿಗೆ (ಪೋಪ್) ಹೊಂದಿರುವ ಸಹಭಾಗಿತ್ವದ ಸಂಕೇತವಾಗಿದೆ ಎಂದು ಹೇಳಿದರು.