MAP

ರೋಮ್ ಧರ್ಮಕ್ಷೇತ್ರದ ಯಾಜಕರಿಗೆ ಪೋಪ್: ದೇವರ ದೃಷ್ಟಿಯಲ್ಲಿ ನೀವು ಅತ್ಯಮೂಲ್ಯವಾಗಿದ್ದೀರಿ

ವಿಶ್ವಗುರು ಲಿಯೋ ಅವರು ರೋಮ್ ಧರ್ಮಕ್ಷೇತ್ರದ ಎಲ್ಲಾ ಯಾಜಕರನ್ನು ಇಂದು ವ್ಯಾಟಿಕನ್ ನಗರಕ್ಕೆ ಸ್ವಾಗತಿಸಿಕೊಂಡರು. ಈ ಯಾಜಕರ ವಿಶ್ವಾಸ ಹಾಗೂ ಸೇವೆಗೆ ವಿಶ್ವಗುರುಗಳು ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಇವರನ್ನು ಉದ್ದೇಶಿಸಿ ಮಾತನಾಡಿರುವ ವಿಶ್ವಗುರುಗಳು ಧರ್ಮಸಭೆಯನ್ನು ಪ್ರೀತಿಸಿ ಹಾಗೂ ಇತರರಿಗೆ ಮಾದರಿಯಾಗಿರಿ ಏಕೆಂದರೆ ದೇವರ ದೃಷ್ಟಿಯಲ್ಲಿ ನೀವು ಅತ್ಯಮೂಲ್ಯವಾಗಿದ್ದೀರಿ ಎಂದು ಹೇಳಿದ್ದಾರೆ.

ವರದಿ ಡೆಬೋರ ಕ್ಯಾಸ್ಟಲಿನೋ ಲೂಬೋವ್ 

ವಿಶ್ವಗುರು ಲಿಯೋ ಅವರು ರೋಮ್ ಧರ್ಮಕ್ಷೇತ್ರದ ಎಲ್ಲಾ ಯಾಜಕರನ್ನು ಇಂದು ವ್ಯಾಟಿಕನ್ ನಗರಕ್ಕೆ ಸ್ವಾಗತಿಸಿಕೊಂಡರು. ಈ ಯಾಜಕರ ವಿಶ್ವಾಸ ಹಾಗೂ ಸೇವೆಗೆ ವಿಶ್ವಗುರುಗಳು ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಇವರನ್ನು ಉದ್ದೇಶಿಸಿ ಮಾತನಾಡಿರುವ ವಿಶ್ವಗುರುಗಳು ಧರ್ಮಸಭೆಯನ್ನು ಪ್ರೀತಿಸಿ ಹಾಗೂ ಇತರರಿಗೆ ಮಾದರಿಯಾಗಿರಿ ಏಕೆಂದರೆ ದೇವರ ದೃಷ್ಟಿಯಲ್ಲಿ ನೀವು ಅತ್ಯಮೂಲ್ಯವಾಗಿದ್ದೀರಿ ಎಂದು ಹೇಳಿದ್ದಾರೆ.

"ನೀವು ನಿಮ್ಮ ಜೀವನವನ್ನು ಸ್ವರ್ಗ ಸಾಮ್ರಾಜ್ಯಕ್ಕಾಗಿ ಮುಡುಪಾಗಿಟ್ಟಿದ್ದೀರಿ. ಯಾತನೆ ಮತ್ತು ಅನರ್ಥದ ಈ ಕಾಲಘಟ್ಟದಲ್ಲಿ ಯಾವುದೇ ಸಂಕಷ್ಟಗಳ ನಡುವೆಯೂ ಸಹ ನೀವು ನಿಮ್ಮ ಸೇವೆಯನ್ನು ಮೌನದಿಂದ ಮಾಡುತ್ತಿದ್ದೀರಿ. ಅದಕ್ಕಾಗಿ ನಾನು ನಿಮಗೆ ಧನ್ಯವಾದಗಳು ತಿಳಿಸುತ್ತೇನೆ" ಎಂಬ ಮಾತುಗಳ ಮೂಲಕ ವಿಶ್ವಗುರು ಲಿಯೋ ಅವರು ರೋಮ್ ಧರ್ಮಕ್ಷೇತ್ರದ ಯಾಜಕರಿಗೆ ಉತ್ತೇಜನಕಾರಿ ಮಾತುಗಳನ್ನು ಹೇಳಿದರು.

ಬಹಳ ಪ್ರೀತಿ ಮತ್ತು ಸ್ನೇಹದಿಂದ ಅವರಿಗೆ ಶುಭಾಶಯಗಳು ಹೇಳುತ್ತಿದ್ದೇನೆ ಎಂದು ವಿಶ್ವ ಗುರುಗಳು ಈ ಸಂದರ್ಭದಲ್ಲಿ ಹೇಳಿದರು. ನಾನು ನಿಮ್ಮನ್ನು ಇಲ್ಲಿಗೆ ಆಹ್ವಾನಿಸಿದ ಕಾರಣ ನಿಮ್ಮ ಕುರಿತು ಹೆಚ್ಚಾಗಿ ತಿಳಿದುಕೊಳ್ಳಲು ಹಾಗೂ ನಿಮ್ಮ ಸೇವೆಯ ಕುರಿತು ಅರಿತುಕೊಳ್ಳಲು ಹಾಗೂ ಆ ಮೂಲಕ ನಿಮ್ಮ ಜೊತೆ ನಡೆಯಲು ಎಂದು ಅವರು ಹೇಳಿದರು.

ರೋಮ್ ಧರ್ಮ ಕ್ಷೇತ್ರವು ಬಹಳ ಮುಖ್ಯವಾಗಿದೆ. ಏಕೆಂದರೆ ಇಲ್ಲಿಗೆ ದೇಶ ವಿದೇಶಗಳಿಂದ ಗುರುಗಳು ಬರುತ್ತಾರೆ. ಇಲ್ಲಿ ವೈವಿಧ್ಯತೆ ಇರುವ ಕಾರಣ ಸಹಭಾಗಿತ್ವ, ಒಗ್ಗಟ್ಟು ಹಾಗೂ ಅನ್ಯೋನ್ಯತೆ ಎಂಬುದನ್ನು ನಾವು ಸದಾ ಕಾಯ್ದುಕೊಳ್ಳಬೇಕು ಎಂದು ಹೇಳಿದರು. ಯೇಸು ಕ್ರಿಸ್ತರು ಹೇಳಿದ ನಿಜವಾದ ದ್ರಾಕ್ಷಾ ಬಳ್ಳಿಗಳಂತೆ ನಾವು ಅವರೊಡನೆ ಸಹಭಾಗಿತ್ವದಲ್ಲಿ ಒಟ್ಟಾಗಿದ್ದರೆ ಮಾತ್ರ ಫಲ ಕೊಡಬಹುದು ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು ಯಾಜ ಕ ಬದುಕಿನಲ್ಲಿ ನಾವು ಸದಾ ಮಾದರಿ ಆಗಿರಬೇಕು ಎಂದು ಹೇಳಿದರು. ನಾವು ಮತ್ತೊಬ್ಬರಿಗೆ ಮಾದರಿಯಾಗಿರಬೇಕು ಎಂದರೆ ನಾವು ಪಾರದರ್ಶಕವಾದ ಹಾಗೂ ಪವಿತ್ರವಾದ ಬದುಕನ್ನು ಜೀವಿಸಬೇಕು ಎಂದು ವಿಶ್ವ ಗುರುಗಳು ಹೇಳಿದರು. ಇದೆ ವೇಳೆ ಎಫೆಸ್ಸಿಯರಿಗೆ ಸಂತ ಪೌಲರು ಹೇಳಿದ ಮಾತು "ನಾನು ಹೇಗೆ ಜೀವಿಸಿದೆ ಎಂಬುದು ನಿಮಗೆ ಗೊತ್ತು" ಎಂಬುದನ್ನು ನೆನಪಿಸಿದರು. ಆ ಮೂಲಕ ಯಾಜಕ ಬದುಕು ಹೇಗೆ ಪಾರದರ್ಶಕವಾಗಿ ಅಂತೆಯೇ ಪವಿತ್ರವಾಗಿ ಇರಬೇಕೆಂದು ಅವರು ಒತ್ತಿ ಹೇಳಿದರು.

ಇದೆ ವೇಳೆ ಅವರು, ಮತ್ತೊಮ್ಮೆ ಪ್ರಭುವಿನ ಕರೆಗೆ ಕಿವಿಗೊಡುವ ಅವಶ್ಯಕತೆಯ ಕುರಿತು ಮಾತನಾಡಿದರು. ಈ ಜಗತ್ತಿನಲ್ಲಿ ಪ್ರತಿನಿತ್ಯ ಏನಾಗುತ್ತಿದೆ ಎಂಬುದರ ಕುರಿತು ನಾವು ಕಾಳಜಿಯನ್ನು ಹಾಗೂ ಕಳವಳವನ್ನು ವ್ಯಕ್ತಪಡಿಸುತ್ತೇವೆ. ಕೆಲವೊಮ್ಮೆ ಭಯಭೀತರಾಗುತ್ತೇವೆ ಹಾಗೂ ಕೆಲವೊಮ್ಮೆ ಹತಾಶರಾಗುತ್ತೇವೆ. ಆದುದರಿಂದ ಸಂದರ್ಭಗಳು ಏನೇ ಇರಲಿ ನಾವು ಎದೆಗುಂದಬಾರದು ಹಾಗೂ ಸವಾಲುಗಳಿಂದ ಪರಾರಿ ಆಗಬಾರದು. ಪ್ರಭುವಿನ ಧೈರ್ಯದಿಂದ ಎಲ್ಲವನ್ನೂ ಎದುರಿಸಬೇಕು ಎಂದು ವಿಶ್ವಗುರು ಲಿಯೋ ಅವರು ಯಾಜಕರಿಗೆ ಕಿವಿ ಮಾತನ್ನು ಹೇಳಿದರು.

12 ಜೂನ್ 2025, 17:12